ಸ್ಫೋಟಕ್ಕೆ ಕಾರಣ ಆದವರನ್ನ ಹುಡುಕು ಹುಡುಕಿ ಕೊಲ್ಲುತ್ತೇವೆ: ಬೈಡನ್ ಕೆಂಡಾಮಂಡಲ​

masthmagaa.com:

ಕಾಬೂಲ್​ ಏರ್​ಪೋರ್ಟ್​​ ಬಳಿ ನಡೆದ ದಾಳಿಯಲ್ಲಿ ವಿಶ್ವದ ಹಲವು ದೇಶಗಳು ತೀವ್ರವಾಗಿ ಖಂಡಿಸಿವೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಿ, ನಾವಿದನ್ನ ಕ್ಷಮಿಸೋದಿಲ್ಲ. ಮರೆಯೋದೂ ಇಲ್ಲ. ದಾಳಿ ಹಿಂದಿರೋರನ್ನ ಎಲ್ಲೇ ಇದ್ದರೂ ಹುಡುಕಿ ಬೇಟೆಯಾಡ್ತೀವಿ ಅಂತ ಗುಡುಗಿದ್ದಾರೆ. ಈ ಸಂಬಂಧ ಕಮಾಂಡರ್​​ಗಳಿಗೆ ಬಹಿರಂಗವಾಗಿಯೇ ಸೂಚನೆ ಕೊಟ್ಟಿರೋ ಬೈಡೆನ್, ಉಗ್ರರ ನಾಯಕರು, ಅವರ ಆಸ್ತಿಪಾಸ್ತಿಗಳ ಮೇಲೆ ಸ್ಟ್ರೈಕ್ ನಡೆಸುವಂತೆ ಆದೇಶ ನೀಡಿದ್ದಾರೆ. ಇದೇ ವೇಳೆ ಆಗಸ್ಟ್ 31ರ ಡೆಡ್​​ಲೈನ್​ಗೆ ಬದ್ಧ ಅಂತ ಮತ್ತೆ ಹೇಳಿರೋ ಬೈಡೆನ್​, ಅಷ್ಟರೊಳಗೆ ಅಫ್ಘನಿಸ್ತಾನದಲ್ಲಿರೋ ಎಲ್ಲಾ ಅಮೆರಿಕನ್ನರನ್ನ ವಾಪಸ್ ಕರೆಸಿಕೊಳ್ಳೋದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಈ ದಾಳಿಯಲ್ಲಿ ಐಸಿಸ್ ಜೊತೆ ತಾಲಿಬಾನ್ ಕೈಜೋಡಿಸಿರೋ ಲಕ್ಷಣ ಕಾಣಿಸ್ತಿಲ್ಲ ಅನ್ನೋ ಮೂಲಕ ತಾಲಿಬಾನ್​ಗೆ ಕ್ಲೀನ್​ಚಿಟ್​ ನೀಡಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದಿಂದ ಹೊರಬರುವ ತಮ್ಮ ನಿರ್ಧಾರವನ್ನ ಬೈಡೆನ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ನಾವು ಅಫ್ಘಾನಿಸ್ತಾನಕ್ಕೆ ಹೋಗಿದ್ದು ತಾಲಿಬಾನಿಗಳ ವಿರುದ್ಧ ಅಲ್ಲ. ಬದಲಾಗಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ ಉಗ್ರ ಸಂಘಟನೆ ವಿರುದ್ಧ. ಆ ಕೆಲಸದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹಾಗೆ ನೋಡಿದ್ರೆ 1996ರಿಂದಲೂ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದ್ದರು. ಆಗ ನಾವೇನಾದ್ರೂ ಅಲ್ಲಿಗೆ ಹೋಗೆದ್ದೆವಾ? ಇಲ್ಲ! ನಮ್ಮ ಮೇಲೆ ದಾಳಿ ಮಾಡಿದ ಉಗ್ರರಿಗೆ ಅವರು ಆಶ್ರಯ ಕೊಟ್ಟ ಕಾರಣಕ್ಕಷ್ಟೆ ನಾವು ಅಲ್ಲಿಗೆ ಹೋಗಿದ್ದು ಅಂತ ಬೈಡೆನ್ ಹೇಳಿದ್ದಾರೆ. ಹಾಗೇ, ಅಫ್ಘಾನಿಸ್ತಾನದಲ್ಲಿ ಡೆಮಾಕ್ರಸಿ ಸರ್ಕಾರ ಸ್ಥಾಪನೆ ಮಾಡೋ ಉಮೇದು ನಮಗಿರಲಿಲ್ಲ. ಅಫ್ಘಾನಿಸ್ತಾನ ಬೇರೆ ಬೇರೆ ಬುಡಕಟ್ಟುಗಳಿಂದ ಕೂಡಿದ ದೇಶ. ಅದು ಇತಿಹಾಸದಲ್ಲೇ ಯಾವತ್ತೂ ಒಂದಾಗಿ ಬಾಳಿದ ದೇಶ ಅಲ್ಲ ಅಂತ ಅಫ್ಘಾನಿಸ್ತಾನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಕಳೆದ 20 ವರ್ಷ ಅಲ್ಲಿ ಏನ್ ಮಾಡ್ತಿದ್ರಿ ಅನ್ನೋ ಪ್ರಶ್ನೆ ಮತ್ತೆ ಬರುತ್ತೆ. ಇದಕ್ಕೆ ಅಮೆರಿಕದ ಬಳಿ ಸ್ಪಷ್ಟ ಉತ್ತರ ಇಲ್ಲ. ಇನ್ನು ಏರ್​ಪೋರ್ಟ್ ಮೇಲಿನ ದಾಳಿ ರೀತಿಯಲ್ಲಿ ಕಾಬೂಲ್​ನಲ್ಲಿ ಮತ್ತಷ್ಟು ದಾಳಿಗಳನ್ನ ಐಎಸ್​ ಉಗ್ರರು ಮಾಡಬಹುದು ಅಂತ ಪೆಂಟಗನ್ ಅನುಮಾನ ವ್ಯಕ್ತಪಡಿಸಿದೆ. ಮತ್ತೊಂದುಕಡೆ ಆಸ್ಟ್ರೇಲಿಯಾ ಸರ್ಕಾರ, ಇಂಥಾ ದಾಳಿ ನಡೀಬೋದು ಅಂತ ನಮಗೆ ಸ್ಪಷ್ಟವಾದ ಗುಪ್ತಚರ ಮಾಹಿತಿ ಬಂದಿತ್ತು. ದಾಳಿಗೂ ಮುನ್ನವೇ ನಮ್ಮ ಎಲ್ಲಾ ಯೋಧರನ್ನ ವಾಪಸ್​ ಕರೆಸಿಕೊಂಡಿದ್ದೇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply