ಡಾ.ರಾಜ್​​ ಜೀವನದ ಯಾರೂ ಅರಿಯದ ರೋಚಕ ವಿಚಾರಗಳು…

ಇವತ್ತು ಅಣ್ಣಾವ್ರು ಅಂದ್ರೆ ಡಾ.ರಾಜ್​ಕುಮಾರ್ ಹುಟ್ಟಿದ ದಿನ.. ಇಂಥಹ ಸಂದರ್ಭದಲ್ಲಿ ರಾಜ್​ಕುಮಾರ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ರೋಚಕ ವಿಚಾರಗಳನ್ನು ನೆನೆಯೋಣ…

ಅಣ್ಣಾವ್ರು ಹೀರೋ ಆಗಿದ್ದು ಹೇಗೆ..?
ಅಣ್ಣಾವ್ರು ಆಗಾಗಲೇ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದರು.. ರಂಗಭೂಮಿಯಲ್ಲಿ ಸಕ್ರಿಯವಾಗಿದ್ರು.. ಆದ್ರೆ ಇನ್ನೂ ಹೀರೋ ಆಗಿರಲಿಲ್ಲ. ಆಗ ಅವರಿಗಿದ್ದ ಹೆಸರು ಮುತ್ತುರಾಜ್​​​.. 1953ರಲ್ಲಿ ಮದುವೆಯಾದ ಅವರು ಪಾರ್ವತಮ್ಮನವರ ಜೊತೆ ನಂಜನಗೂಡಿನಿಂದ ಮೈಸೂರಿಗೆ ಹೋಗೋಕೆ ಅಂತ ರೈಲ್ವೆ ನಿಲ್ದಾಣಕ್ಕೆ ಬಂದಿರ್ತಾರೆ. ಈ ವೇಳೆ ಖ್ಯಾತ ನಿರ್ದೇಶಕ ಹೆಚ್​​.ಎಲ್​.ಎನ್ ಸಿಂಹ ಮೈಸೂರಿನ ಕಡೆಗೆ ಹೊರಟಿದ್ರು. ಮುತ್ತುರಾಜ್​ರನ್ನು ಕಂಡ ಅವರು ಬಂದು ಮಾತನಾಡಿಸಿದ್ರು. ಸಿಂಹ ತಮ್ಮ ಬೇಡರ ಕಣ್ಣಪ್ಪ ಸಿನಿಮಾಗೆ ಹೀರೋ ಪಾತ್ರಕ್ಕೆ ಹುಡುಕಾಟ ನಡೆಸುತ್ತಿದ್ದರು. ರಾಜ್​ರನ್ನು ಕಂಡ ಅವರು ವಿಳಾಸ ಪಡೆದು ತೆರಳಿದ್ರು. ಇದಾದ ಕೆಲದಿನಗಳ ನಂತರ ಮೈಸೂರಿನ ಟೌನ್‌ಹಾಲ್​​​ನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಇದ್ರಲ್ಲಿ ಮುತ್ತುರಾಜ್ ಬೇಡರಕಣ್ಣಪ್ಪ ಪಾತ್ರ ಮಾಡ್ತಿದ್ಧಾರೆ ಅನ್ನೋದನ್ನ ತಿಳಿದ ಸಿಂಹ ಅವರು ನಾಟಕ ವೀಕ್ಷಿಸಲು ಬಂದಿದ್ದರು. ಅಲ್ಲದೆ ರಾಜ್​ಕುಮಾರ್ ಅವರೇ ತಮ್ಮ ಬೇಡರ ಕಣ್ಣಪ್ಪ ಚಿತ್ರಕ್ಕೆ ನಾಯಕ ಅಂತ ನಿರ್ಧರಿಸಿಬಿಟ್ಟರು.. ಮುಂದೆ ನಡೆದಿದ್ದೆಲ್ಲಾ ಇತಿಹಾಸ..

ಎಲ್ಲಾ ಪಾತ್ರಗಳಲ್ಲಿ ಅಭಿನಯ
ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ಅಣ್ಣಾವ್ರು ಯಾವ ಪಾತ್ರ ಮಾಡಿಲ್ಲ ಅಂತ ಇಲ್ಲ.. ಕಳ್ಳನಿಂದ ಹಿಡಿದು ಪೊಲೀಸ್​ವರೆಗೆ, ವೈದ್ಯರಿಂದ ಹಿಡಿದು ಲಾಯರ್​ವರೆಗೆ, ರೈತ, ಡ್ರೈವರ್​, ಜಮೀನ್ದಾರ, ಪೌರಾಣಿಕ ಪಾತ್ರಗಳು ಹೀಗೆ ಯಾವುದು ಇಲ್ಲ ಅಂತಿಲ್ಲ.. ಎಲ್ಲಾ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬಿದವರು ನಮ್ಮ ಅಣ್ಣಾವ್ರು.. ನಟನೆ ವೇಳೆ ನಟ ಮುಖ್ಯ ಅಲ್ಲ ಪಾತ್ರ ಮುಖ್ಯ ಅಂತ ಹೇಳ್ತಿದ್ರಂತೆ ಡಾ.ರಾಜ್​ಕುಮಾರ್​..

ದುರಭ್ಯಾಸ ಅಂದ್ರೆ ಆಗುತ್ತಿರಲಿಲ್ಲ
ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರೂ ಡಾ.ರಾಜ್​ ನಯ, ವಿನಯತೆ ಮರೆಯಲಿಲ್ಲ.. ಯಾವುದೇ ದುರಭ್ಯಾಸಗಳನ್ನು ಹೊಂದಿರಲಿಲ್ಲ. ಕುಡಿಯೋ

ದು, ಸಿಗರೇಟ್ ಸೇದೋದು ಅಂದ್ರೆ ಆಗ್ತಿರಲಿಲ್ಲ.. ಅವರ ಸಿನಿಮಾಗಳಲ್ಲೂ ದುರಭ್ಯಾಸಗಳನ್ನು ಮಾಡಿರೋದು ನೋಡೋಕೆ ಸಿಗೋದಿಲ್ಲ.. ಹಾಗಂತ ಬೇರೆಯವರು ಸಿಗರೇಟ್ ಎಳೆದ್ರೆ ಅವರಿಗೆ ಏನೂ ಹೇಳ್ತಿರಲಿಲ್ಲ. ತಾವೇ ಅಂಥವರಿಂದ ದೂರ ಹೋಗಿ ಕೂರುತ್ತಿದ್ದರು. ಆದ್ರೆ ಒಮ್ಮೆ ಫೈಟಿಂಗ್ ಸೀನ್ ವೇಳೆ ನಿರ್ದೇಶಕರು ಸಿಗರೇಟ್ ಸೇದುವಾಗ ಅವರ ಬಳಿ ಬಂದ ಡಾ.ರಾಜ್​, ನೀವು ಸಿಗರೇಟ್ ಎಳಿಬೇಡಿ ಅಂತ ನಾನ್ ಹೇಳಲ್ಲ.. ಸ್ವಲ್ಪ ದೂರ ಹೋಗಿ ಎಳೆಯಿರಿ.. ಶೂಟಿಂಗ್ ಸೆಟ್ ದೇವಸ್ಥಾನ ಇದ್ದಂತೆ ಅಂತ ಹೇಳಿದ್ರಂತೆ..

ನಿರ್ಮಾಪಕರೇ ಅನ್ನದಾತರು..ಅಭಿಮಾನಿಗಳೇ ದೇವರು
ಇದು ಅಣ್ಣಾವ್ರ ಮತ್ತೊಂದು ತತ್ವ.. ಈಗಿನ ಕೆಲ ಸ್ಟಾರ್​​ಗಳಿಗೆ ಒಂದೆರಡು ಸಿನಿಮಾ ಹಿಟ್ ಆಗ್ಬಿಟ್ರೆ ಕಾಲು ನೆಲದ ಮೇಲೆ ನಿಲ್ಲಲ್ಲ.. ಅಷ್ಟು ಅಹಂ ಬಂದು ಬಿಡುತ್ತೆ.. ಆದ್ರೆ ಅಣ್ಣಾವ್ರು ಇಡೀ ಕರ್ನಾಟಕದ ಮನೆ ಮಾತಾದ್ರು ಕೂಡ ನಿರ್ಮಾಪಕರನ್ನು ಗೌರವದಿಂದ ಕಾಣುತ್ತಿದ್ದರು. ಅವರನ್ನು ಅನ್ನದಾತರೆಂದೇ ಕರೆಯುತ್ತಿದ್ದರು. ಸಿನಿಮಾ ಸಂಕಷ್ಟಕ್ಕೆ ಸಿಲುಕಿದ್ರೆ ಅಣ್ಣಾವ್ರು ದುಡ್ಡು ಪಡೆಯದೇ ನಟಿಸುತ್ತಿದ್ದರಂತೆ.. ಇದನ್ನ ನಿರ್ಮಾಪಕರು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ್ದು, ವಜ್ರೇಶ್ವರಿ ಕಂಬೈನ್ಸ್ ಹುಟ್ಟಿಗೆ ಕಾರಣವ
ಆಯ್ತು.. ಇನ್ನೊಂದು ವಿಚಾರ ಅಂದ್ರೆ ಅಣ್ಣಾವ್ರು ಅಭಿಮಾನಿಗಳನ್ನು ದೇವರು ಅಂತ ಕರೆಯುತ್ತಿದ್ದರು. ಅದಕ್ಕೂ ಒಂದು ಕಾರಣ ಇದೆ.. ರಾಜ್ ಅವರ 2ನೇ ಸಿನಿಮಾ ಸೋದರಿ ತೆರೆಕಂಡಾಗ ಕೆಲ ಪತ್ರಿಕೆಗಳಲ್ಲಿ ಅವರ ಉದ್ದ ಮೂಗಿನ ಬಗ್ಗೆ ವ್ಯಂಗ್ಯವಾಡಿದ್ದರು. ಇದ್ರಿಂದ ಬೇಸರಗೊಂಡ ರಾಜ್,​ ಪಾರ್ವತಮ್ಮನವರ ಜೊತೆ ಥಿಯೇಟರ್​​ಗೆ ಸಿನಿಮಾ ನೋಡೋಕೆ ಹೋಗ್ತಾರೆ. ವಿಮರ್ಶಕರು ಹೇಳಿದ್ದು ನಿಜವಾದ್ರೆ ನಾನು ಇನ್ಮುಂದೆ ನಟನೆಯನ್ನೇ ಬಿಟ್ಟು ಬಿಡ್ತೀನಿ ಅಂತ ಪಾರ್ವತಮ್ಮ ಬಳಿ ಹೇಳಿರ್ತಾರೆ. ಸಿನಿಮಾ ಮುಗಿದ ಬಳಿಕ ಹೊರ ಬಂದಾಗ ಗಮನಿಸಿದ ಪ್ರೇಕ್ಷಕರು ರಾಜ್​ರನ್ನು ಹೊತ್ತುಕೊಂಡು ದೇವರಿಗೆ ಜೈ ಎಂದು ಕುಣಿದಿದ್ರಂತೆ.. ಆಗ ರಾಜ್, ದೇವರು​ ನಾನಲ್ಲ..ಅಭಿಮಾನಿಗಳೇ ದೇವರು ಅಂದಿದ್ರಂತೆ.. ಅಂದಿನಿಂದ ಕೊನೆಯುಸಿರು ಇರುವವರೆಗೂ ರಾಜ್​ ಅದೇ ತತ್ವದೊಂದಿಗೆ ಬದುಕಿದರು..

ಅಣ್ಣಾವ್ರಿಗೂ ಇಷ್ಟವಿರಲಿಲ್ಲ ಜಾತಿಪದ್ಧತಿ
ಚೆನ್ನೈನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಮಧ್ಯಾಹ್ನದ ವೇಳಗೆ ಎಲ್ಲಾ ಒಟ್ಟಿಗೆ ಕುಳಿತು ಊಟ ಮಾಡ್ತಿದ್ರು.. ಆಗ ಯಾರೋ ಜಾತಿ ವಿಚಾರ ತೆಗೆದು ಚರ್ಚೆ ಮಾಡೋಕೆ ಶುರು ಮಾಡಿದ್ರು. ಈ ವೇಳೆ ಕೆರಳಿ ಕೆಂಡವಾದ ಡಾ.ರಾಜ್​​​​, ನನ್ನ ಮುಂದೆ ಜಾತಿಯ ವಿಚಾರವನ್ನು ಎತ್ತಬೇಡಿ.. ಇದೇ ಕೊನೆಯ ವಾರ್ನಿಂಗ್.. ಹುಷಾರ್ ಎಂದು ಎಚ್ಚರಿಸಿದ್ದರಂತೆ.. ಡಾ.ರಾಜ್ ಈ ರೀತಿ ಕೋಪ ಮಾಡಿಕೊಂಡಿದ್ದು ಅದೇ ಮೊದಲು ಅಂತಾರೆ ಅವರನ್ನು ಹತ್ತಿರದಿಂದ ಬಲ್ಲವರು..

ರಾಜಕೀಯದಿಂದ ದೂರ..ಕನ್ನಡಕ್ಕೆ ಹತ್ತಿರ
ಕರ್ನಾಟಕದ ಮನೆ ಮಾತಾಗಿದ್ದ ಅಣ್ಣಾವ್ರು ರಾಜಕೀಯದಿಂದ ತುಂಬಾ ದೂರವೇ ಉಳಿದುಕೊಂಡಿದ್ದರು. ಯಾರಿಗೂ ಬೆಂಬಲ ಕೊಡಲೂ ಇಲ್ಲ.. ಯಾರ ಪರವಾಗಿ ಪ್ರಚಾರಕ್ಕೂ ಹೋಗಲಿಲ್ಲ.. ಖುದ್ದು ತಾವು ರಾಜಕೀಯಕ್ಕೆ ಬರಲೂ ಇಲ್ಲ.. ಆದ್ರೆ ಕನ್ನಡದ ವಿಚಾರ ಬಂದಾಗ ಬೀದಿಗಿಳಿದು ಹೋರಾಟ ನಡೆಸಿದರು.. 1983ರ ಗೋಕಾಕ್ ಚಳವಳಿ ಹೋರಾಟದಲ್ಲಿ ಸಾಹಿತಿಗಳು ಬೀದಿಗಳಿದಿದ್ದರು. ಆ ಟೈಮಲ್ಲಿ ಅಣ್ಣಾವ್ರು ಮದ್ರಾಸ್​​ನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದರು. ಈ ವೇಳೆ ಸಾಹಿತಿಗಳು ಎಲ್ಲರೂ ಒಟ್ಟಾಗಿ ಹೋಗಿ ನೀವು ಹೋರಾಟಕ್ಕೆ ಬರಬೇಕು ಎಂದು ಆಹ್ವಾನ ನೀಡಿದ್ರು. ಆಗ ರಾಜ್ ಹೇಳಿದ್ದು ಇಷ್ಟೆ.. ಕನ್ನಡದ ಉಳಿವಿನ ಹೋರಾಟಕ್ಕೆ ನನಗೆ ಆಹ್ವಾನ ಕೊಡೋ ಅಗತ್ಯವಿಲ್ಲ.. ಆಜ್ಞೆ ಮಾಡಿ ಅಂತ.. ಡಾ.ರಾಜ್ ಹೋರಾಟಕ್ಕೆ ಇಳಿಯುತ್ತಿದ್ದಂತೆ ಹೋರಾಟದ ದಿಕ್ಕೇ ಬದಲಾಗಿ ಹೋಗಿತ್ತು.

ಅಪರೂಪದ ಯೋಗಪಟು ಅಣ್ಣಾವ್ರು
ಹೌದು.. ಈಗ ಎಲ್ಲರು ಯೋಗ ಯೋಗ ಅಂತಾರೆ.. ಆದ್ರೆ ಅಣ್ಣಾವ್ರು 80ರ ದಶಕದಲ್ಲೇ ಡೈಲಿ ಯೋಗ ಮಾಡ್ತಿದ್ರು. 1978ರಲ್ಲಿ ತೆರೆಕಂಡ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ನೀವು ನೋಡಿರಬಹುದು. ಈ ಸಿನಿಮಾ ಶೂಟಿಂಗ್ ವೇಳೆ ರಾಜ್​​ ಕುಮಾರ್ ಅವರಿಗೆ ಮಂಡಿ ನೋವು ಶುರುವಾಗಿತ್ತು. ಈ ವೇಳೆ ಯಾರೋ ಸಲಹೆ ಕೊಟ್ರು ಅಂತ ಯೋಗ ಕಲಿಯೋಕೆ ಶುರು ಮಾಡಿದ್ರು. ಹೀಗೆ ಕಲಿತ ಯೋಗವನ್ನು ಕೊನೆಯವರೆಗೂ ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಂಡಿದ್ದರು ಡಾ.ರಾಜ್​.. ಕಾಮನಬಿಲ್ಲು ಚಿತ್ರದ ಮೂಲಕ ಅಣ್ಣಾವ್ರ ಯೋಗಾಭ್ಯಾಸ ಬೆಳ್ಳಿ ತೆರೆ ಮೇಲೂ ಬಂದಿದೆ.

ಸದ್ದಿಲ್ಲದೇ ಸಹಾಯ ಮಾಡುತ್ತಿದ್ದರು
ಈಗ ಯಾರಿಗಾದ್ರೂ ಏನಾದ್ರು ಸಹಾಯ ಮಾಡಿದ್ರೆ ಒಂದು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವವರೇ ಜಾಸ್ತಿ.. ಆದ್ರೆ ರಾಜ್​ ಯಾರಿಗೂ ಗೊತ್ತಾಗದಂತೆ ಸಹಾಯ ಮಾಡುತ್ತಿದ್ದರು. ಚಿತ್ರರಂಗದ ಕಲಾವಿದರು, ತಂತ್ರಜ್ಞರು ಏನಾದ್ರು ತೊಂದ್ರೆಯಲ್ಲಿದ್ರೆ ಸ್ಪಂದಿಸುತ್ತಿದ್ರು. ತಾವಾಗೇ ಹೋಗಿ ಅಥವಾ ಪಾರ್ವತಮ್ಮನವರ ಬಳಿ ಹಣ ಕೊಟ್ಟು ಕಳುಹಿಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದ ಬಳಿಕವೂ ರಂಗಭೂಮಿಯನ್ನು ಮರೆಯದ ರಾಜ್​, ನಾಟಕಗಳನ್ನು ಮಾಡಿ, ರಂಗಭೂಮಿಗೆ ಹೆಚ್ಚು ಹಣ ಹರಿದುಬರುವಂತೆ ಮಾಡಿದ್ರು. 1961ರಲ್ಲಿ ಪ್ರವಾಹ ಉಂಟಾದಾಗ ಇಡೀ ಚಿತ್ರರಂಗವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ದೇಣಿಗೆ ಸಂಗ್ರಹಿಸಿದ್ರು. ಫ್ರೀ ಇದ್ದಾಗ ರಸಮಂಜರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗೌರವಧನ ರೂಪದಲ್ಲಿ ಸಿಗುತ್ತಿದ್ದ ಹಣವನ್ನು ಪಾರ್ವತಮ್ಮ ರಾಜ್​ಕುಮಾರ್ ನಡೆಸುತ್ತಿದ್ದ ಶಕ್ತಿಧಾಮ ಎಂಬ ಸಂಸ್ಥೆಗೆ ನೀಡುತ್ತಿದ್ದರು. ಈ ಸಂಸ್ಥೆ ಮೂಲಕ ನಿರ್ಗತಿಕ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುತ್ತಿತ್ತು.

ವೀರಪ್ಪನ್ ಮತ್ತು ಅಣ್ಣಾವ್ರು
ಇಂಥಾ ಡಾ.ರಾಜ್ ಅವರನ್ನು ದಂತಚೋರ, ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡ್ಬಿಟ್ಟ. 2000ನೇ ಇಸವಿಯ ಜುಲೈ 30ರಂದು 70ನೇ ಇಳಿಯವಯಸ್ಸಿನ ರಾಜ್​ಕುಮಾರ್ ಅವರನ್ನು ಕಾಡಿಗೆ ಹೊತ್ತೊಯ್ದ.. ಮೂರೂವರೆ ತಿಂಗಳ ಬಳಿಕ ಅಣ್ಣಾವ್ರನ್ನು ಪಾಪಿ ವೀರಪ್ಪನ್ ಕೈಯಿಂದ ಬಿಡಿಸಿಕೊಂಡು ಬರಲಾಯ್ತು.. ಬಿಟ್ಟು ಕಳುಹಿಸುವಾಗ ನಿಮ್ಮಂಥ ದೊಡ್ಡ ಮನುಷ್ಯರಿಗೆ ತೊಂದ್ರೆ ಕೊಟ್ಟುಬಿಟ್ಟೆ ಅಂತ ಕಟು ಮನಸ್ಸಿನ ವೀರಪ್ಪನ್ ಬೇಜಾರು ಮಾಡಿಕೊಂಡಿದ್ದನಂತೆ.. ಜೊತೆಗೆ ನಿಮಗೇನಾದ್ರು ಆಸೆ ಇದ್ಯಾ ಎಂದು ಕೇಳಿದಾಗ ನಿನ್ನ ಮೀಸೆ ಮುಟ್ಟಿನೋಡಬೇಕು ಎಂದಿದ್ದರಂತೆ ಡಾ.ರಾಜ್​.. ಇದು ನಮ್ಮ ಅಣ್ಣಾವ್ರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ…

ಅಣ್ಣಾವ್ರ ಬಿರುದು ಮತ್ತು ಪ್ರಶಸ್ತಿಗಳು
ಡಾ.ರಾಜ್​ಕುಮಾರ್ ಅವರಿಗೆ ನಟ ಸಾರ್ವಭೌಮ ಅನ್ನೋ ಬಿರುದು ಇದೆ. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್​​ನ್ನು ನೀಡಿ ಗೌರವಿಸಿದೆ. ಇನ್ನು ಹಂಪಿ ವಿಶ್ವವಿದ್ಯಾಲಯ ನಾಡೋಜ ಪದವಿ ನೀಡಿದೆ. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದ್ದು, ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶ್ನಸ್ತಿಯನ್ನೂ ನೀಡಿದೆ. ಇನ್ನು ಚಿತ್ರರಂಗದಲ್ಲಿನ ತಮ್ಮ ಜೀವಮಾನದ ಸಾಧನೆಗೆ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಹೀಗೆ ಅಣ್ಣಾವ್ರು ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ನೇಹಿತರೇ, ಇಂಥ ರಾಜ್​ಕುಮಾರ್​, ಕರ್ನಾಟಕದ ಕಣ್ಮಣಿ 2006ರ ಏಪ್ರಿಲ್ 12ರಂದು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.. ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ರು…

Contact Us for Advertisement

Leave a Reply