ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್!

masthmagaa.com:

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ವಿಚಾರವಾಗಿ ತೀರ ಗೊಂದಲದಲ್ಲಿದ್ದ ಕಾಂಗ್ರೆಸ್‌ ಕೊನೆಗೂ ತನ್ನ ಅಧಿಕೃತ ನಿಲುವನ್ನ ಪ್ರಕಟಿಸಿದೆ. ಸುಮಾರು 2 ತಿಂಗಳು ಅಳೆದು ತೂಗಿ, ಎಲ್ಲಾ ರೀತಿಯ ಸಮೀಕರಣನ್ನ ಲೆಕ್ಕ ಹಾಕಿ ಈಗ ನಾವು ಬರಲ್ಲ ಅಂತ ಹೇಳಿದೆ. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರಾಮನನ್ನು ಪೂಜಿಸುತ್ತಾರೆ. ಧರ್ಮವು ವೈಯಕ್ತಿಕ ವಿಷಯವಾಗಿದ್ದು, ಆರ್‌ಎಸ್‍ಎಸ್ ಮತ್ತು ಬಿಜೆಪಿ ಅಯೋಧ್ಯೆಯಲ್ಲಿ ಮಂದಿರವನ್ನು ರಾಜಕೀಯಕ್ಕಾಗಿ ಹಿಂದಿನಿಂದಲೂ ಬಳಕೆ ಮಾಡುತ್ತಿದೆ. ಚುನಾವಣಾ ಲಾಭಕ್ಕಾಗಿ ಅಪೂರ್ಣವಾದ ದೇವಾಲಯ ಉದ್ಘಾಟನೆ ಮಾಡ್ತಿದೆ. 2019ರ ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ಬದ್ಧವಾಗಿದ್ದೇವೆ. ಭಗವಾನ್ ರಾಮನನ್ನು ಗೌರವಿಸುವ ಲಕ್ಷಾಂತರ ಜನರ ಭಾವನೆಗಳನ್ನು ಗೌರವಿಸುತ್ತೇವೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ತಮಗೆ ಬಂದಿರೋ ಆಹ್ವಾನವನ್ನ ಗೌರವಯುತವಾಗಿ ನಿರಾಕರಿಸಿದ್ದಾರೆ ಅಂತ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿಯ ರಾಜಕೀಯ ಯೋಜನೆ ಅಂತ ಬಣ್ಣಿಸಿರುವ ಕಾಂಗ್ರೆಸ್, ಇದು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಕಾರ್ಯಕ್ರಮ ಅಂತ ಹೇಳಿದೆ. ಅಂದ್ಹಾಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಭಾಗಿ ಆಗುತ್ತೋ? ಇಲ್ಲವೋ? ಅನ್ನೋದು ಭಾರೀ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್ ಪಕ್ಷ ಹಾಗೂ ಸಂಸತ್‌ನಲ್ಲಿ ಪ್ರಮುಖ ಹುದ್ದೆಗಳಲ್ಲಿ ಇದ್ದ ನಾಯಕರಿಗೆ ಟ್ರಸ್ಟ್‌ನಿಂದ ಆಹ್ವಾನ ಹೋಗಿತ್ತು. ಪಕ್ಷದಲ್ಲಿ ಮುಖ್ಯಸ್ಥರ ಹುದ್ದೆಯಲ್ಲಿ ಇಲ್ಲದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟ್ರಸ್ಟ್‌ ಅಧಿಕೃತ ಆಹ್ವಾನ ನೀಡಲಿರಲಿಲ್ಲ. ಸೋನಿಯಾ ಗಾಂಧಿ ಅವರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ಧಾರೆ ಅಂತಾನೂ ವರದಿಯಾಗಿತ್ತು. ಆದರೆ, ಅಲ್ಪಸಂಖ್ಯಾತ ಮತ ಬ್ಯಾಂಕ್ ಸೇರಿದಂತೆ ಹಲವು ಕಾರಣಗಳಿಂದಾಗಿ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮುಂದಾಗಿವೆ ಅನ್ನೋ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಾಗುವ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದವು. ಇದೀಗ ಕಾಂಗ್ರೆಸ್ ತಾನು ಭಾಗಿಯಾಗಲ್ಲ ಅಂತಾ ಅಧಿಕೃತ ಪ್ರಕಟಣೆ ಹೊರಡಿಸಿದೆ.

-masthmagaa.com

 

Contact Us for Advertisement

Leave a Reply