masthmagaa.com:

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ಶಿರೋಮಣಿ ಅಕಾಲಿ ದಳದ (SAD) ಹರ್​ಸಿಮ್ರತ್​ ಕೌರ್ ಬಾದಲ್ ಮೋದಿ ಸಂಪುಟದಿಂದ ಹೊರಬಂದ ಬೆನ್ನಲ್ಲೇ ಮಾತನಾಡಿರುವ ಪ್ರಧಾನಿ ಮೋದಿ, ‘ಮಸೂದೆ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ’ ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಬಿಹಾರದಲ್ಲಿ ರೈಲ್ವೆ ಬ್ರಿಡ್ಜ್​ ಅನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆ ಮಾಡಿದ ಬಳಿಕ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲ್ಲ ಅಂತ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಆದ್ರೆ ನಮ್ಮ ದೇಶದ ರೈತರು ಬುದ್ಧಿವಂತರು. ಮಧ್ಯವರ್ತಿಗಳ ಪರವಾಗಿ ಈಗ ಯಾರು ನಿಂತಿದ್ದಾರೆ ಅಂತ ರೈತರಿಗೆ ಗೊತ್ತಾಗುತ್ತಿದೆ’ ಎಂದಿದ್ದಾರೆ.

‘ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸ್ವಾತಂತ್ರ್ಯ ನೀಡುತ್ತದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಹೆಚ್ಚಿನ ಆಯ್ಕೆ ಮತ್ತು ಅವಕಾಶ ಸಿಗುತ್ತದೆ. ಸಂಸತ್​ನಲ್ಲಿ ಮಸೂದೆ ಅಂಗೀಕಾರ ಆಗಿದ್ದಕ್ಕೆ ದೇಶದ ರೈತರಿಗೆ ಶುಭಾಶಯ. ಮಧ್ಯವರ್ತಿಗಳಿಂದ ರೈತರಿಗೆ ರಕ್ಷಣೆ ನೀಡಲು ಈ ಮಸೂದೆಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿತ್ತು. ಆದ್ರೆ ದಶಕಗಳಿಂದ ದೇಶವನ್ನಾಳಿದ ಜನರು ಈ ವಿಚಾರದ ಬಗ್ಗೆ ರೈತರನ್ನ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ರೈತರಿಗೆ ಸುಳ್ಳು ಹೇಳುತ್ತಿದ್ದಾರೆ’ ಅಂತ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಜೊತೆಗೆ ಕನಿಷ್ಠ ಬೆಂಬಲ ಬೆಲೆ ಮೂಲಕವೂ ರೈತರ ಬೆಳೆಗೆ ಸರಿಯಾದ ಬೆಲೆಯನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಅಂತಾನೂ ಮೋದಿ ಹೇಳಿದ್ದಾರೆ. ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳು ಸಂಸತ್​ನಲ್ಲಿ ಅಂಗೀಕಾರವಾದ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇದರ ನಡುವೆಯೇ ಪ್ರಧಾನಿ ಮೋದಿ ಮಾತನಾಡಿ ತಮ್ಮ ಸರ್ಕಾರ ಮಾಡಿದ್ದು ಸರಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply