ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಕಾಲಿಟ್ಟ ಬ್ರಿಟನ್‌! ಕಿಡಿಕಾರಿದ ಭಾರತ!

masthmagaa.com:

ಅಮೆರಿಕ, ಕೆನಡ ಬಳಿಕ ಈಗ ರಿಷಿ ಸುನಾಕ್‌ ಅವರ ಬ್ರಿಟನ್‌ ಜೊತೆಗೂ ಭಾರತಕ್ಕೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ ಪಾಕಿಸ್ತಾನದಲ್ಲಿರೋ ಬ್ರಿಟನ್‌ ರಾಜತಾಂತ್ರಿಕ ಅಧಿಕಾರಿ ಜೇನ್‌ ಮ್ಯಾರಿಯೊಟ್‌ ಪಾಕ್‌ ಆಕ್ರಮಿತ ಕಾಶ್ಮೀರ, ಅಂದ್ರೆ PoKಗೆ ಭೇಟಿ ನೀಡಿದ್ದಾರೆ. ಜನವರಿ 10ರಂದು ಪಿಒಕೆಯ ಮೀರ್‌ಪುರ್‌ಗೆ ಭೇಟಿ ನೀಡಿದ್ದ ಜೇನ್‌ ಮ್ಯಾರಿಯೊಟ್‌, ʻಬ್ರಿಟನ್‌ನಲ್ಲಿರೋ 70% ಬ್ರಿಟಿಷ್‌-ಪಾಕಿಸ್ತಾನಿಗಳಿಗೆ ಮೀರ್‌ಪುರ್‌ ಜೊತೆ ಸಂಬಂಧ ಇದೆʼ ಅಂತೆಲ್ಲಾ ಉದ್ದಟತನದ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಿಒಕೆ ವಿಚಾರದಲ್ಲಿ ಬ್ರಿಟನ್‌ ಭಾರತವನ್ನ ಕೆಣಕೋ ಕೆಲಸ ಮಾಡಿದೆ. ಇದರ ಬೆನ್ನಲ್ಲೇ ಈ ಘಟನೆ ಬಗ್ಗೆ ಭಾರತ ಕೂಡ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರೋ ವಿದೇಶಾಂಗ ಸಚಿವಾಲಯ ʻ ಭಾರತ ಈ ವಿಚಾರವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಭಾರತದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನ ಸ್ವೀಕಾರ ಮಾಡೋಕಾಗಲ್ಲ. ನಾವು ಯಾವುದೇ ಕಾರಣಕ್ಕೂ ಈ ನಡೆಯನ್ನ ಸಹಿಸಲ್ಲ. ಅಂತರಾಷ್ಟ್ರೀಯ ಸಮುದಾಯ ಭಾರತದ ಸಾರ್ವಭೌಮತೆಗೆ ಬೆಲೆ ಕೊಡ್ಬೇಕುʼ ಅಂತ ಬ್ರಿಟನ್‌ ವಿರುದ್ದ ಭಾರತ ಕಿಡಿಕಾರಿದೆ. ಅಲ್ದೆ ಅಖಂಡ ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಂತ ಮತ್ತೊಮ್ಮೆ ಹೇಳಿದೆ. ಅಂದ್ಹಾಗೆ ಕೆಲ ದಿನಗಳ ಹಿಂದಷ್ಟೇ ಅಮೆರಿಕದ ರಾಯಭಾರಿ ಕೂಡ ಪಾಕ್‌ ಆಕ್ರಮಿತ ಗಿಲ್ಗಿಟ್ ಬಾಲ್ಟಿಸ್ತಾನ್‌ಗೆ ಭೇಟಿ ಕೊಟ್ಟಿದ್ರು. ಆಗಲೂ ಭಾರತ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಅಮೆರಿಕದ ಸಂಗಾತಿ ಅಂತ ಕರೆಸಿಕೊಂಡಿರೋ ಬ್ರಿಟನ್ ಕೂಡ ಅದೇ ನಡೆ ಅನುಸರಿಸ್ತಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಪಾಶ್ಚಿಮಾತ್ಯ ದೇಶಗಳು ಭಾರತವನ್ನ ಕೆಣಕೋಕೆ ಈ ರೀತಿ ಮಾಡ್ತಿದ್ದಾರಾ ಅಥವಾ ಈ ರಾಯಭಾರಿಗೆ ಕೆಲಸ ಇಲ್ಲದೆ ಹೋಗಿದ್ದಾರಾ ಗೊತ್ತಿಲ್ಲ. ಆದ್ರೆ ಈ ಭೇಟಿಯಂತೂ ಭಾರತ ಹಾಗೂ ಬ್ರಿಟನ್‌ ನಡುವೆ ರಾಜತಾಂತ್ರಿಕ ಜಗಳಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply