EVM & VVPAT ಪರಿಶೀಲನೆಗೆ ಸಲ್ಲಿಕೆಯಾದ ಅರ್ಜಿಗಳು ವಜಾ

masthmagaa.com:

ಇವಿಎಂ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. EVM ಮತ್ತು VVPATನ ಸಂಪೂರ್ಣ ಪರಿಶೀಲನೆ ಕೋರಿ ಹಾಕಲಾದ ಎಲ್ಲಾ ಅರ್ಜಿಗಳನ್ನ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಜೊತೆಗೆ ಮತ್ತೆ ಬ್ಯಾಲಟ್‌ ಪೇಪರ್‌ ವೋಟಿಂಗ್‌ ನಡೆಸೋಕೆ ಕೋರಿ ಬಂದ ಅರ್ಜಿಗಳನ್ನ ಕೂಡ ಕೋರ್ಟ್‌ ರಿಜೆಕ್ಟ್‌ ಮಾಡಿದೆ. ʻನಾವು ಈ ಬಗ್ಗೆ ಬಹಳ ವಿವರವಾಗಿ ಚರ್ಚೆ ನಡೆಸಿ, ಎಲ್ಲಾ ಅರ್ಜಿಗಳನ್ನ ವಜಾಗೊಳಿಸಿದ್ದೇವೆ. ಕಣ್ಣುಮುಚ್ಚಿ ಒಂದು ಸಿಸ್ಟಮ್‌ ಬಗ್ಗೆ ಅಪನಂಬಿಕೆ ತೋರಿಸೋದ್ರಿಂದ ಅನಗತ್ಯ ಸಂದೇಹಗಳು ಹುಟ್ಟಿಕೊಳ್ಳುತ್ವೆʼ ಅಂತ ನ್ಯಾಯಮೂರ್ತಿಗಳಾದ ಸಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಹೇಳಿದೆ. ಇನ್ನು ಈ ವೇಳೆ ಸುಪ್ರೀಂ ಕೋರ್ಟ್‌ VVPAT ಮತ್ತು EVM ಸಂಬಂಧ ಕೆಲ ನಿರ್ದೇಶನಗಳನ್ನೂ ನೀಡಿದೆ. ʻಜೂನ್‌ 1ರ ಕೊನೆಯ ಹಂತದ ಚುನಾವಣೆ ನಂತ್ರ EVMನ ಸಿಂಬಲ್‌ ಲೋಡಿಂಗ್‌ ಪ್ರಾಸೆಸ್‌ ಮುಕ್ತಾಯವಾದ್ಮೇಲೆ, SLU ಅಂದ್ರೆ ಸಿಂಬಲ್‌ ಲೋಡಿಂಗ್‌ ಯುನಿಟ್‌ನ್ನ ಕಂಪ್ಲೀಟ್‌ ಆಗಿ ಸೀಲ್‌ ಮಾಡಿ ಚುನಾವಣೆ ನಂತರದ 45 ದಿನಗಳ ಕಾಲ ಜೋಪಾನವಾಗಿ ಸ್ಟೋರ್‌ರೂಮ್‌ನಲ್ಲಿ ಇಡಬೇಕುʼ ಅಂತೇಳಿದೆ. ಅಲ್ದೇ, ʻಒಂದು ಪಕ್ಷ ಚುನಾವಣೆ ಫಲಿತಾಂಶ ಡಿಕ್ಲೇರ್‌ ಆದ ಬಳಿಕ…ಚುನಾವಣೆಯಲ್ಲಿ ಎರಡನೇ ಸ್ಥಾನ ಅಥ್ವಾ ಮೂರನೇ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಫಲಿತಾಂಶದ ಕುರಿತು ಡೌಟ್‌ ಇದ್ರೆ, ಸುಮಾರು 5%ನಷ್ಟು EVM ಮಷೀನ್‌ನ ಮೆಮರಿ ಪರಿಶೀಲಿಸಲು ಅನುಮತಿ ಇದೆ. ಇಂಜಿನಿಯರ್‌ಗಳ ತಂಡ ಈ ಕೆಲಸವನ್ನ ಮಾಡುತ್ತೆ. ಈ ಮನವಿಯನ್ನ ಅಭ್ಯರ್ಥಿಗಳು ಫಲಿತಾಂಶ ಘೊಷಣೆಯಾದ 7 ದಿನಗಳ ಒಳಗೆ ಮಾಡಬೇಕು. ಜೊತೆಗೆ ಈ ಪರಿಶೀಲನೆ ಮಾಡೋಕೆ ಖುದ್ದು ಅಭ್ಯರ್ಥಿಗಳೇ ವೆಚ್ಚ ಬರಿಸ್ಬೇಕು. ಎಲ್ಲಿಯಾದ್ರು EVMನಲ್ಲಿ ದೋಷ ಇರೋದು ಸಾಬೀತಾದ್ರೆ….ಅಭ್ಯರ್ಥಿಗಳು ನೀಡಿರೋ ಹಣ ವಾಪಸ್ಸು ಮಾಡಲಾಗುತ್ತೆʼ ಅಂತ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಇನ್ನೊಂದ್ಕಡೆ ಅರ್ಜಿಗಳನ್ನ ವಜಾಗೊಳಿಸಿರೋ ಸುಪ್ರೀಂ ಕೋರ್ಟ್‌ ನಿರ್ಧಾರವನ್ನ ಪ್ರಧಾನಿ ನರೇಂದ್ರ ಮೋದಿಯವ್ರು ಹಾಡಿ ಹೊಗಳಿದ್ದಾರೆ. ʻEVM ಮಷೀನ್‌ನ VVPAT ಜೊತೆ ಪರಿಶೀಲಿಸ್ಬೇಕೆಂಬ ಅರ್ಜಿಗಳನ್ನ ಸುಪ್ರೀಂ ಕೋರ್ಟ್‌ ವಜಾಗೊಳಿಸಿ, ವಿಪಕ್ಷಗಳಿಗೆ ಕಪಾಳಮೋಕ್ಷ ಮಾಡಿದೆ. ವಿಪಕ್ಷಗಳು ಇಡೀ ದೇಶಕ್ಕೆ ಕ್ಷಮಾಪಣೆ ಕೇಳ್ಬೇಕು. ಇಡೀ ಜಗತ್ತೆ ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆಯನ್ನ ಹೊಗಳ್ತಿದ್ರೆ, ಈ ವಿಪಕ್ಷಗಳು ಮಾತ್ರ ತಮ್ಮ ಸ್ವಂತ ಲಾಭಕ್ಕಾಗಿ ಈ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡ್ತಿವೆʼ ಅಂತ ಬಿಹಾರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply