ಕೊರೋನಾದಿಂದ ಹಣಕಾಸಿನ ಸಮಸ್ಯೆ, ಮುಂದಿನ ವಾರ ದೆಹಲಿಗೆ ಸಿಎಂ ಬಿಎಸ್​ವೈ

masthmagaa.com:

ಬೆಳಗಾವಿ: ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹ ಮತ್ತು ಅತಿಯಾದ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ್ರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಧಾರವಾಡ, ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ಅವರು ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಸಿಎಂ ಬಿಎಸ್​ವೈ, ‘ಕೊರೋನಾದಿಂದ ಹಣಕಾಸಿನ ಸಮಸ್ಯೆ ಇದೆ. ಆರ್ಥಿಕ ಸ್ಥಿತಿ ಸರಿ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಬಹುಶಃ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಸರ್ಕಾರಿ ನೌಕರರಿಗೆ ಸಂಬಳ ಕೊಡೋದನ್ನ ನಿಲ್ಲಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಗೂ ಅಲ್ಪಸ್ವಲ್ಪ ಹಣಕಾಸನ್ನು ಬಿಡುಗಡೆ ಮಾಡುತ್ತಿದ್ದೇವೆ. ಬಹುಶಃ ಇನ್ನೆರಡು ಮೂರು ತಿಂಗಳಲ್ಲಿ ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು’ ಎಂದರು.

ಬೆಳೆ ಪರಿಹಾರದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಣ ದುರುಪಯೋಗ ಆಗಬಾರದು. ಪ್ರಾಮಾಣಿಕವಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಅಂತ ಸೂಚಿಸಿದ್ದೇನೆ. ಕೇಂದ್ರ ಸರ್ಕಾರದ ನೀತಿ ನಿಯಮ ಮತ್ತು ಎನ್​ಡಿಆರ್​ಎಫ್ ಸ್ಕೀಂಗಳ ಅಡಿಯಲ್ಲಿ ಏನೇನು ಮಾಡಬಹುದು ಅದನ್ನು ಶಕ್ತಿಮೀರಿ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂಬ ಭರವಸೆ ಕೊಡುತ್ತೇನೆ ಎಂದರು.

ಜೊತೆಗೆ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ಮುಂದಿನ ವಾರ‌ ದೆಹಲಿಗೆ ಹೋಗಿ ಹೆಚ್ಚಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಅಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ರು.

-masthmagaa.com

Contact Us for Advertisement

Leave a Reply