ಪಂಜಾಬ್ ಸೋಲಿಗೆ ಕಾರಣವಾಯ್ತಾ ಅಂಪೈರ್​ನ ಈ ತಪ್ಪು ನಿರ್ಧಾರ?

masthmagaa.com:

ಐಪಿಎಲ್​ನಲ್ಲಿ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್​ ಇಲೆವೆನ್ ಪಂಜಾಬ್​ ನಡುವಿನ ರೋಚಕ ಪಂದ್ಯದಲ್ಲಿ ಡೆಲ್ಲಿ ತಂಡ ಜಯಭೇರಿ ಬಾರಿಸಿದೆ. ಒಂದು ಹಂತದಲ್ಲಿ ಪಂದ್ಯವು ಪಂಜಾಬ್ ಕೈಯಲ್ಲಿತ್ತು. ಆದ್ರೆ ಕೊನೆಯ 3 ಎಸೆತಗಳಲ್ಲಿ 1 ರನ್ ಕಲೆ ಹಾಕಲು ಪಂಜಾಬ್​ ಬ್ಯಾಟ್ಸ್​ಮನ್​ಗಳು ವಿಫಲವಾದ ಹಿನ್ನೆಲೆ ಪಂದ್ಯ ಟೈ ಆಯ್ತು. ಬಳಿಕ ಸೂಪರ್​ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತು.

ಪಂಜಾಬ್ ತಂಡದ ಸೋಲಿನಲ್ಲಿ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮಾಡಿದ ಒಂದು ತಪ್ಪು ಕೂಡ ಸೇರಿಕೊಂಡಿದೆ. ಅಂದ್ಹಾಗೆ 19ನೇ ಓವರ್​ನಲ್ಲಿ ಪಂಜಾಬ್ ತಂಡದ ಮಯಾಂಕ್ ಅಗರ್​ವಾಲ್ ಮತ್ತು ಕ್ರಿಸ್ ಜೋರ್ಡನ್ 2 ರನ್​ಗೆ ಓಡುತ್ತಿದ್ದಾಗ ಸ್ಕ್ವೇರ್​ ಲೆಗ್ ಅಂಪೈರ್ ನಿತಿನ್ ಮೆನನ್ ಒಂದು ರನ್ ಶಾರ್ಟ್ ಅಂತ ತೀರ್ಪು ನೀಡಿದ್ರು. ಅಂದ್ರೆ ಕ್ರಿಸ್ ಜೋರ್ಡನ್​ ಕ್ರೀಸ್ ಅನ್ನು ಸರಿಯಾಗಿ​ ಮುಟ್ಟಿಲ್ಲ ಅಂತ ಹೇಳಿದ್ರು. ಬಳಿಕ ಟಿವಿ ರಿಪ್ಲೈನಲ್ಲಿ ನೋಡಿದಾಗ ಕ್ರಿಸ್ ಜೋರ್ಡನ್ ಸರಿಯಾಗೇ ಕ್ರೀಸ್ ಮುಟ್ಟಿದ್ದಾರೆ ಅನ್ನೋದು ಗೊತ್ತಾಗಿತ್ತು. ಆದ್ರೆ ಪಂದ್ಯ ಮುಂದುವರಿದ್ರಿಂದ ಲೆಗ್ ಅಂಪೈರ್ ತಮ್ಮ ತೀರ್ಪನ್ನು ವಾಪಸ್ ತೆಗೆದುಕೊಳ್ಳಲಿಲ್ಲ.

ಕೊನೆಗೆ ಇದೇ ಒಂದು ರನ್​ ಪಂದ್ಯದ ಗತಿಯನ್ನೇ ಬದಲಿಸಿತು. ಮೊದಲು ಪಂದ್ಯ ಟೈ ಆಗಿ ಬಳಿಕ ನಡೆದ ಸೂಪರ್​ ಓವರ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲು ಅನುಭವಿಸಿತು. ಪಂದ್ಯ ಮುಗಿದ ಬಳಿಕವೂ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಅಂಪೈರ್​ಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದು ಕೂಡ ಕಂಡು ಬಂತು.

ಇದೀಗ ಫೀಲ್ಡ್​ ಅಂಪೈರ್​ ನಿತಿನ್ ಮೆನನ್ ಅವರ ತಪ್ಪು ತೀರ್ಪಿನ ಬಗ್ಗೆ ನಾಯಕ ಕೆ.ಎಲ್. ರಾಹುಲ್ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಅವರ ಗಮನಕ್ಕೆ ತಂದಿದ್ದಾರೆ. ಪಂಜಾಬ್ ತಂಡದ ಕೋ-ಓನರ್ ಮತ್ತು ಬಾಲಿವುಡ್ ನಟಿ ಪ್ರೀತಿ ಝಿಂಟಾ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂಪೈರ್ ಅವರ ತಪ್ಪು ಗೊತ್ತಾದ ಬಳಿಕವಾದ್ರೂ ಅದನ್ನು ಸರಿಪಡಿಸಿಕೊಳ್ಳುವ ನಿಯಮ ಬರಬೇಕು ಅಂತ ಪ್ರೀತಿ ಝಿಂಟಾ ಆಗ್ರಹಿಸಿದ್ದಾರೆ.

ಮತ್ತೊಂದುಕಡೆ ಸೆಹ್ವಾಗ್ ಕೂಡ ಅಂಪೈರ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಂಪೈರ್​ಗೇ ಕೊಡಬೇಕಿತ್ತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply