ಹುಬ್ಬಳ್ಳಿ: 26ನೇ ಯುವಜನೋತ್ಸವಕ್ಕೆ ಮೋದಿಯಿಂದ ಅದ್ದೂರಿ ಚಾಲನೆ

masthmagaa.com:

ರಾಜ್ಯದಲ್ಲಿ ಮುಂಬರೊ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ರಂಗೇರ್ತಿದೆ. ಅತ್ತ ಕಾಂಗ್ರೆಸ್‌ ಪಕ್ಷ ಬಸ್‌ಯಾತ್ರೆ ಮಾಡಿ ಜನರನ್ನ ಆಕರ್ಷಿಸೋಕೆ ಹೊರಟಿದ್ರೆ, ಇತ್ತ ಬಿಜೆಪಿ ಪ್ರಧಾನಿ ಮೋದಿ ಅವ್ರನ್ನ ರಾಜ್ಯಕ್ಕೆ ಕರೆಸಿ ಕಾಂಗ್ರೆಸ್‌ಗೆ ಟಕ್ಕರ್‌ ಕೊಟ್ಟಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಜನವರಿ 12ರಿಂದ 16ರವರೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡೋಕೆ ಹುಬ್ಬಳ್ಳಿಗೆ ಇಂದು ಮೋದಿ ಆಗಮಿಸಿದ್ದು, ಮೋದಿಯವರನ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ವಾಗತಿಸಿದ್ದಾರೆ.‌ ಇದೇ ವೇಳೆ ಏರ್‌ಪೋರ್ಟ್‌ನಿಂದ ಕಾರ್ಯಕ್ರಮ ಆಯೋಜನೆಗೊಂಡಿದ್ದ ರೈಲ್ವೆ ಮೈದಾನದವರೆಗೆ ಮೋದಿ ರೋಡ್‌ ಶೋ ಕೂಡ ಮಾಡಿದ್ದಾರೆ. ಮಾರ್ಗ ಮಧ್ಯದಲ್ಲಿ ಕಾರ್‌ ನಿಲ್ಲಿಸಿ, ಜನರತ್ತ ಕೈ ಬೀಸಿದ್ದಾರೆ.) ರೋಡ್‌ಶೋ ವೇಳೆ ಭದ್ರತಾಲೋಪ ಜರುಗಿದ್ದು, ಬ್ಯಾರಿಕೇಡ್‌ ಹಾರಿ ಬಾಲಕನೊಬ್ಬ ಮೋದಿ ಸಮೀಪಕ್ಕೆ ತೆರಳಿದ್ದಾನೆ. ಪ್ರಧಾನಿಗೆ ಹಾರ ಹಾಕಲು ಬಾಲಕ ಯತ್ನಿಸಿದ್ದು, ಈ ವೇಳೆ ಬಾಲಕನಿಂದ ಪ್ರಧಾನಿ ಮೋದಿ ಹೂವಿನ ಹಾರ ಪಡೆದಿದ್ದಾರೆ. ಬಳಿಕ ಬಾಲಕನನ್ನು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆದ್ರೆ ಯಾವುದೇ ಭದ್ರತಾ ಲೋಪ ಆಗಿಲ್ಲ, 10 ವರ್ಷದ ಬಾಲಕ ಅತಿ ಉತ್ಸಾಹದಿಂದ ಬಂದು ಮೋದಿಗೆ ಹಾರ ಹಾಕೋಕೆ ಬಂದಿದಷ್ಟೇ ಅಂತ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ರೋಡ್‌ ಶೋ ಮುಗಿಸಿ ಕಾರ್ಯಕ್ರಮಕ್ಕೆ ಬಂದ ಮೋದಿ ರಿಮೋಟ್‌ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಮೋದಿಗೆ ಏಲಕ್ಕಿಯಿಂದ ತಯಾರಿಸಿದ ಹಾರ, ಟೋಪಿ, ಬಿದರಿ ಕಲೆಯಲ್ಲಿ ಅರಳಿದ ವಿವೇಕಾನಂದ ಮೂರ್ತಿ ಹಾಗೂ ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರಧ್ವಜವನ್ನ ಗಿಫ್ಟ್‌ಆಗಿ ನೀಡಲಾಗಿದೆ.
ಇನ್ನು ಕಾರ್ಯಕ್ರಮವನ್ನ ಉದ್ದೇಶಿಸಿ ಮಾತಾಡಿದ ಬೊಮ್ಮಾಯಿ, ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಭಾರತ ಶೇಕಡಾ 40ರಷ್ಟು ಯುವಕರು ಇರುವ ದೇಶ. ಮೋದಿ ಯುವ ಸಮೂಹಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆ ಜಾರಿ ಮಾಡಲಾಗಿದೆ ಅಂತ ಹೇಳಿದ್ದಾರೆ.
ಇನ್ನು ಯುವ ಸಮೂಹವನ್ನ ಉದ್ದೇಶಿಸಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಏಳಿ, ಎದ್ದೇಳಿ ಅಂತ ವಿವೇಕಾನಂದರ ವಾಣಿಯನ್ನ ಹೇಳೋ ಮೂಲಕ ಯುವಕರಿಗೆ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದಾರೆ, ಯುವಕರೇ ದೇಶದ ಭವಿಷ್ಯ ಅಂತ ಸ್ವಾಮಿ ವಿವೇಕಾನಂದರು ಹೇಳಿದ್ರು ಅಂತ ಮೋದಿ ವಿವೇಕರ ಗುಣಗಾನ ಮಾಡಿದ್ದಾರೆ. ಜೊತೆಗೆ ಬ್ರಿಟಿಷರ ಸೇನೆ ವಿರುದ್ಧ ಸಂಗೊಳ್ಳಿ ರಾಯಣ್ಣ ಯುದ್ಧ ಸಾರಿದ್ರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು. ದೇಶವನ್ನು ಮುನ್ನಡೆಸುವುದು ಯುವಕರ ಕರ್ತವ್ಯ. ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ. ಯುವಕರಿಗೆ ಇದೊಂದು ಐತಿಹಾಸಿಕ ಕ್ಷಣ. ಸಾಧನೆ ಮಾಡೋಕೆ ಯುವ ಸಮುದಾಯಕ್ಕೆ ಇದು ಸರಿಯಾದ ಸಮಯ, ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡ್ತಿವೆ. ರನ್‌ ವೇ ರೆಡಿಯಿದೆ, ನೀವು ಟೇಕಾಫ್‌ ಆಗೋದೊಂದೇ ಬಾಕಿ ಅಂತ ಮೋದಿ ಹೇಳಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದವರಿಗಾಗಿ ಸುಮಾರು 600 ಬಾಣಸಿಗರು ಧಾರವಾಡ ಕೃಷಿ ವಿವಿ ಆವರಣದಲ್ಲಿ ಅಡುಗೆ ತಯಾರಿ ಮಾಡಿದ್ದಾರೆ. ಆಲೂ ಪರೋಟಾ, ಜಾಮೂನು, ಚಿತ್ರನ್ನ, ಆಮ್ಲೆಟ್ ಸೇರಿ ಬಗೆ ಬಗೆಯ ಭಕ್ಷ್ಯಗಳನ್ನ ತಯಾರಿಸಲಾಗಿದೆ. ಇನ್ನು ಮತ ಗಳಿಕೆಗಾಗಿ ವಿವೇಕಾನಂದರ ಜಯಂತಿಯನ್ನ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತ ಜೆಡಿಎಸ್‌ ನಾಯಕ, ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply