masthmagaa.com:

ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರ ನಡುವೆ ಇವತ್ತು ನಡೆದ ಸಂಧಾನ ಸಭೆ ಸಕ್ಸಸ್ ಆಗಿದೆ. ಹೀಗಾಗಿ ಇಂದು ರಾತ್ರಿಯಿಂದಲೇ KSRTC, BMTC ಸೇರಿದಂತೆ ನಾಲ್ಕೂ ನಿಗಮಗಳ ಬಸ್​ಗಳು ರಸ್ತೆಗಿಳಿಯಲಿವೆ. ಈ ಮೂಲಕ 3 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯವಾದಂತಾಗಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡರು, ‘ನಮ್ಮ ಬಹುತೇಕ ಬೇಡಿಕೆಗಳನ್ನ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಇದಕ್ಕಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್​​ಗೆ ಅಭಿನಂದನೆಗಳು’ ಅಂತ ಹೇಳಿದ್ರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ‘3 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಎಲ್ಲರನ್ನ ಕರೆಸಿ ಇವತ್ತು ಚರ್ಚೆ ಮಾಡಿದ್ದೇವೆ. ರಾತ್ರಿಯಿಂದಲೇ ಬಸ್​ಗಳನ್ನ ರೋಡಿಗೆ ಇಳಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ. ಸಾರಿಗೆ ನೌಕರರು 10-12 ಬೇಡಿಕೆಗಳನ್ನ ಇಟ್ಟಿದ್ರು. ಅದರಲ್ಲಿ ಸಮಂಜಸ ಎನ್ನುವಂತಹ ಬೇಡಿಕೆಗಳನ್ನ ಈಡೇರಿಸುತ್ತೇವೆ. ಸರ್ಕಾರಿ ನೌಕರರನ್ನಾಗಿ ಮಾಡಿ ಅನ್ನೋದು ಅವರ ಬೇಡಿಕೆ. ಆದ್ರೆ ಇವರನ್ನ ಮಾತ್ರವಲ್ಲ, 30-40 ನಿಗಮಗಳ ನೌಕರರನ್ನ ಕೂಡ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಅಂತ ನಾವು ಹೇಳಿದ್ದೇವೆ’ ಎಂದಿದ್ದಾರೆ.

ಸರ್ಕಾರ ನೀಡಿದ ಭರವಸೆಗಳು:

– ನಿಗಮ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಜಾರಿ ಮಾಡಲು ತೀರ್ಮಾನಿಸಲಾಗಿದೆ.

– ಕೊರೋನಾದಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬಸ್ಥರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.

– ಅಂತರ್-ನಿಗಮ ವರ್ಗಾವಣೆ ಕುರಿತು ಚರ್ಚಿಸಲು ಸಮಿತಿ ರಚನೆಗೆ ತೀರ್ಮಾನ.

– ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಸಲಾಗಿದೆ.

– ನಿಗಮದಲ್ಲಿ HRMS ವ್ಯವಸ್ಥೆ ಜಾರಿ ಮಾಡಲಾಗುವುದು.

– ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೀಡುತ್ತಿದ್ದ ಭತ್ಯೆಯನ್ನ ಕೊರೋನಾ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಅದನ್ನ ಜನವರಿ ನಂತರ ಮುಂದುವರಿಸಲಾಗುತ್ತೆ.

– ಘಟಕ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ತಪ್ಪಿಸಲು ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು.

– ಸಾರಿಗೆ ನೌಕರರ ವೇತನಕ್ಕೆ ಸಂಬಂಧಿಸಿದಂತೆ 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಕುರಿತು ಸರ್ಕಾರದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸಮಿತಿ ರಚಿಸಿ ತೀರ್ಮಾನಿಸಲಾಗುವುದು.

-masthmagaa.com

Contact Us for Advertisement

Leave a Reply