masthmagaa.com:

ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ವೇಗಿ ನವದೀಪ್ ಸೈನಿ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯ ಅವರ ಬೆರಳಿಗೆ ಹೊಲಿಗೆ ಹಾಕಲಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎನ್ನಲಾಗ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರ್​ಸಿಬಿ ತಂಡದ ಫಿಸಿಯೋಥೆರಪಿಸ್ಟ್​ ಈವನ್ ಸ್ಪೀಚ್​ಲಿ, ‘ಭಾನುವಾರ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ನವದೀಪ್ ಸೈನಿ 18ನೇ ಓವರ್​​ನ​ ಕೊನೆಯ ಎಸೆತವನ್ನು​​ ಬೌಲ್​​ ಮಾಡುವಾಗ ಬಲಗೈ ಹೆಬ್ಬೆರಳಿಗೆ ಗಾಯವಾಗಿದೆ. ಇದರ ಬೆನ್ನಲ್ಲೇ ಪಂದ್ಯವನ್ನು ಅರ್ಧಕ್ಕೆ ಬಿಟ್ಟು ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ. ಅದೃಷ್ಟವಶಾತ್ ನಮ್ಮ ಬಳಿ ಉತ್ತಮ ಸರ್ಜನ್ ಇದ್ದಾರೆ. ಅವರು ಗಾಯಕ್ಕೆ ಸ್ಟಿಚ್ ಹಾಕಿದ್ದಾರೆ. ಅಂದ್ಹಾಗೆ ಈ ಹಿಂದೆ ವಿರಾಟ್​ ಕೊಹ್ಲಿಗೂ ಹೀಗೆ ಆಗಿತ್ತು. ನಂತರ ನಡೆದ ಪಂದ್ಯದಲ್ಲಿ ಅವರು ಶತಕ ಬಾರಿಸಿ ಮಿಂಚಿದ್ರು. ಆದ್ರೆ ಇಬ್ಬರ ಗಾಯವನ್ನ ಹೋಲಿಸುವುದು ಸರಿಯಲ್ಲ. ಕೆಲವರು ಇದನ್ನ ಮ್ಯಾನೇಜ್ ಮಾಡ್ತಾರೆ, ಕೆಲವರಿಗೆ ಆಗಲ್ಲ. ಸೈನಿ ಅವರ ಬಲಗೈ ಹೆಬ್ಬೆರಳಿಗೇ ಗಾಯವಾಗಿರೋದ್ರಿಂದ ಅವರು ಮುಂದಿನ ಪಂದ್ಯಕ್ಕೆ ಲಭ್ಯವಾಗುತ್ತಾರೋ, ಇಲ್ಲವೋ ಅನ್ನೋದನ್ನ ಈಗಲೇ ಹೇಳಲು ಸಾಧ್ಯವಿಲ್ಲ’ ಅಂತ ಹೇಳಿದ್ದಾರೆ.

ಒಂದ್ವೇಳೆ ವೇಗಿ ನವದೀಪ್​ ಸೈನಿ ಮುಂದಿನ ಪಂದ್ಯಕ್ಕೆ ಅಲಭ್ಯರಾದ್ರೆ ಆರ್​ಸಿಬಿಗೆ ಅದು ದೊಡ್ಡ ಪೆಟ್ಟುಕೊಡುವ ಸಾಧ್ಯತೆ ಇದೆ. ಈ ಬಾರಿಯ ಐಪಿಎಲ್​ನಲ್ಲಿ ಸೈನಿ ಹೆಚ್ಚು ವಿಕೆಟ್​​ಗಳನ್ನು ಪಡೆಯದಿದ್ದರೂ ರನ್​ ಕಂಟ್ರೋಲ್ ಮಾಡ್ತಿದ್ರು. ಪ್ರತಿ ಗಂಟೆಗೆ 140 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಬ್ಯಾಟ್ಸ್​ಮನ್​ಗಳ ಎದೆಯಲ್ಲಿ ನಡುಕು ಹುಟ್ಟಿಸುತ್ತಿದ್ದರು. ಅಂದ್ಹಾಗೆ ಈ ಬಾರಿಯ ಐಪಿಎಲ್​ನಲ್ಲಿ 11 ಪಂದ್ಯಗಳನ್ನ ಆಡಿರುವ ಆರ್​ಸಿಬಿ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್​ಗೆ ಹೋಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಅಕ್ಟೋಬರ್ 28ರಂದು ಮುಂಬೈ ವಿರುದ್ಧ ಮುಂದಿನ ಪಂದ್ಯ ನಡೆಯಲಿದೆ. ಇಂತಹ ಸಂದರ್ಭದಲ್ಲೇ ತಂಡದ ವೇಗಿ ಬೆರಳಿಗೆ ಗಾಯ ಮಾಡಿಕೊಂಡು ಕೂತಿದ್ದಾರೆ.

-masthmagaa.com

Contact Us for Advertisement

Leave a Reply