ಕೊರೋನಾ: ಜಗತ್ತಿನಲ್ಲಿ ಇವತ್ತು ಏನೆಲ್ಲಾ ಬೆಳವಣಿಗೆ ಆಯ್ತು ಗೊತ್ತಾ?

masthmagaa.com:

ದ್ವೀಪರಾಷ್ಟ್ರ ನ್ಯೂಜಿಲ್ಯಾಂಡ್​​ನಲ್ಲಿ ಕೊರೋನಾ ನಿಯಂತ್ರಣಕ್ಕೆ ಜಾರಿಗೆ ತಂದಿರೋ ನಿರ್ಬಂಧಗಳನ್ನ ವಿರೋಧಿಸಿ ಮತ್ತು ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ವಿಕಲಚೇತನರು ಕಡ್ಡಾಯವಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಬೇಕು ಅನ್ನೋ ನಿಯಮವನ್ನ ವಿರೋಧಿಸಿ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ. ‘ನಾವು ಲ್ಯಾಬ್​​ನಲ್ಲಿರೋ ಇಲಿಗಳಲ್ಲ’, ನಮಗೆ ಸ್ವಾತಂತ್ರ್ಯ ಕೊಡಿ, 2018 ಅನ್ನ ನಮಗೆ ವಾಪಸ್ ಕೊಡಿ ಅನ್ನೋ ಪೋಸ್ಟರ್​​ಗಳನ್ನ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ನ್ಯೂಜಿಲ್ಯಾಂಡ್​ ಪಾರ್ಲಿಮೆಂಟ್​ ಸುತ್ತಮುತ್ತ ಭದ್ರತೆಯನ್ನ ಹೆಚ್ಚಿಸಲಾಗಿದೆ.
– ಅತ್ತ ಆಸ್ಟ್ರೇಲಿಯಾದಲ್ಲಿ ಕೊರೋನಾ ಲಸಿಕೆ ಹಾಕಿಸದೇ ಇರೋರು ಐಸಿಯು ಸೇರುವ ಅಥವಾ ಸಾವನ್ನಪ್ಪೋ ಪ್ರಮಾಣ ಲಸಿಕೆ ಹಾಕ್ಕೊಂಡವರಿಗಿಂತ 16 ಪಟ್ಟು ಹೆಚ್ಚಿರುತ್ತೆ. ಹೀಗಾಗಿ ಲಸಿಕೆ ಹಾಕ್ಕೊಳ್ಳಿ ಅಂತ ಆರೋಗ್ಯಾಧಿಕಾರಿಗಳು ಜನರಿಗೆ ಆಗ್ರಹಿಸಿದ್ದಾರೆ.
– ಎರಡೂ ಡೋಸ್​ ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಅಮೆರಿಕ ನಿನ್ನೆಯಿಂದ ತನ್ನ ಗಡಿಯನ್ನ ಓಪನ್ ಮಾಡಿದ ಬೆನ್ನಲ್ಲೇ ಏರ್​ಪೋರ್ಟ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಸುಮಾರು ಒಂದೂವರೆ ವರ್ಷದ ಬಳಿಕ ತಮ್ಮವರನ್ನ ನೋಡಿ ಕುಟುಂಬಸ್ಥರು ಏರ್​ಪೋರ್ಟ್​ನಲ್ಲೇ ಆನಂದಭಾಷ್ಪ ಹಾಕಿದ್ದಾರೆ.
– ಚೀನಾದಲ್ಲಿ ಕಳೆದ 24 ಗಂಟೆಯಲ್ಲಿ 62 ಹೊಸ ಕೊರೋನಾ ಪ್ರಕರಣ ವರದಿಯಾಗಿದೆ. ಇದರಲ್ಲಿ 43 ಸ್ಥಳೀಯ ಕೇಸ್​​ಗಳಾಗಿದ್ರೆ, 19 ವಿದೇಶದಿಂದ ಬಂದ ಹಿನ್ನೆಲೆ ಹೊಂದಿದೆ. ಒಂದೇ ಒಂದು ಕೊರೋನಾ ಕೇಸ್​ ವರದಿಯಾಗ್ಬಾರ್ದು ಅನ್ನೋ ಅಪ್ರೋಚ್​ ಇಟ್ಟುಕೊಂಡಿರೋ ಚೀನಾದಲ್ಲಿ ಕಳೆದೊಂದು ತಿಂಗಳಿಂದ ಡಬಲ್​ ಡಿಜಿಟ್​​ಗೆ ಕೇಸಸ್​ ವರದಿಯಾಗ್ತಿದೆ. ಅತ್ತ ರಷ್ಯಾ ಜೊತೆ ಗಡಿ ಹಂಚಿಕೊಂಡಿರೋ ಹಿಯಾಹೆ (Heihe) ನಗರದಲ್ಲಿ ಲೇಟೆಸ್ಟ್ ಕೊರೋನಾ ಔಟ್​​ಬ್ರೇಕ್​​ನ ಮೂಲದ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ಯುವಾನ್​ ಕೊಡೋದಾಗಿ ಘೋಷಿಸಲಾಗಿದೆ. ಒಂದು ಲಕ್ಷ ಯುವಾನ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 11 ಲಕ್ಷ ಆಗುತ್ತೆ. ಯಾವುದಾದ್ರೂ ಸ್ಥಳದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಾಗ ತಕ್ಷಣ ಆ ಪ್ರದೇಶದಕ್ಕೆ ಕ್ರಮ ಕೈಗೊಂಡು, ಸೋಂಕಿತರ ಸಂಪರ್ಕಿತರನ್ನ ಪತ್ತೆಹಚ್ಚಿದ್ರೆ ಇನ್ನಷ್ಟು ಜನರಿಗೆ ಹರಡೋದನ್ನ ತಡೆಯಲು ಈ ರೀತಿ ನಗದು ಬಹುಮಾನ ಘೋಷಿಸಲಾಗಿದೆ.
– ಕೊರೋನಾ ಹಾವಳಿ ಇಡ್ತಿರೋ ರಷ್ಯಾದಲ್ಲಿ ಕಳೆದ 24 ಗಂಟೆಯಲ್ಲಿ 39 ಸಾವಿರ ಕೇಸ್​ ದೃಢಪಟ್ಟಿದೆ. ದಾಖಲೆಯ 1,211 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
– ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಂಗಾಪುರ್​​ನಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯ ಮೂಲದ ಮಲೇಷ್ಯಾದ ವ್ಯಕ್ತಿಯ ಗಲ್ಲು ಶಿಕ್ಷೆಯನ್ನ ಸಿಂಗಾಪುರ್​ ಕೋರ್ಟ್​ ತಡೆಹಿಡಿದಿದೆ. ಎಲ್ಲವೂ ಅಂದುಕೊಂಡಂತೆಯಾದ್ರೆ ಬುಧವಾರ ಈ ನಾಗೇಂದ್ರನ್​ ಕೆ ಧರ್ಮಲಿಂಗಮ್​​ಗೆ ಗಲ್ಲಿಗೇರಿಸಬೇಕಿತ್ತು. ಆದ್ರೀಗ ಈತನಿಗೆ ಕೊರೋನಾ ಪಾಸಿಟಿವ್ ಬಂದಿರೋ ಹಿನ್ನೆಲೆ ಗಲ್ಲಿಗೇರಿಸೋದನ್ನ ತಡೆ ಹಿಡಿಯಲಾಗಿದೆ. ಈತ 2010ರಲ್ಲಿ ಮಲೇಷ್ಯಾದಿಂದ ಸಿಂಗಾಪುರ್​ಗೆ ಅಕ್ರಮವಾಗಿ ಮಾದಕ ವಸ್ತು ಪೂರೈಸುವಾಗ ಸಿಕ್ಕಿಬಿದ್ದಿದ್ದ. ಆದ್ರೆ ಗಲ್ಲು ಶಿಕ್ಷೆ ಅನ್ನೋದು ತುಂಬಾ ಗಂಭೀರ ಪ್ರಕರಣಗಳಲ್ಲಿ ಕೊಡ್ಬೇಕು ಅನ್ನೋದು ವಿಶ್ವಸಂಸ್ಥೆ ತಜ್ಞರ ಅಭಿಪ್ರಾಯ. ಆದ್ರೆ ಈ ಕೇಸ್​​ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲೇ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

-masthmagaa.com

Contact Us for Advertisement

Leave a Reply