ವಲಸೆ ಕಾರ್ಮಿಕರಿಗೆ ಮಮತಾ ಸರ್ಕಾರದಿಂದ ಅನ್ಯಾಯ: ಅಮಿತ್ ಶಾ

masthmagaa.com:

ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ನಡುವಿನ ಸಂಘರ್ಷ ಮತ್ತೆ ಮುಂದುವರಿದಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರೋ ಗೃಹ ಸಚಿವ ಅಮಿತ್ ಶಾ, ವಲಸೆ ಕಾರ್ಮಿಕರನ್ನು ತಾಯ್ನಾಡಿಗೆ ಕಳುಹಿಸುವ ಕೇಂದ್ರದ ಯೋಜನೆಗೆ ಪಶ್ಚಿಮ ಬಂಗಾಳ ಸರ್ಕಾರ ಅಡ್ಡಗಾಲು ಹಾಕ್ತಿದೆ ಎಂದಿದ್ದಾರೆ.

ಸುಮಾರು 2 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಪಶ್ಚಿಮ ಬಂಗಾಳ ಕಾರ್ಮಿಕರು ಕೂಡ ತವರಿಗೆ ಮರಳುವ ಆಸೆ ಹೊಂದಿದ್ದಾರೆ. ಅವರನ್ನ ಕಳುಹಿಸಲು ಕೇಂದ್ರ ಸರ್ಕಾರ ಪ್ರಯತ್ನ ಪಡುತ್ತಿದ್ದರೂ ರಾಜ್ಯ ಸರ್ಕಾರದಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ರೈಲುಗಳು ಪಶ್ಚಿಮ ಬಂಗಾಳ ಪ್ರವೇಶಿಸಲು ರಾಜ್ಯ ಸರ್ಕಾರ ಬಿಡುತ್ತಿಲ್ಲ. ಇದು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯ  ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೊರೋನಾ ಹಾವಳಿ ಶುರುವಾಗದಗಿನಿಂದಲೂ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇದೆ. ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡ್ತಿದೆ ಅನ್ನೋ ಆರೋಪ ಮಮತಾ ಸರ್ಕಾರದ ಮೇಲಿದೆ. ಈ ಹಿನ್ನೆಲೆ ಇತ್ತೀಚೆಗಷ್ಟೇ ಕೇಂದ್ರದ ತಂಡವೊಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿತ್ತು.

-masthmagaa.com

Contact Us for Advertisement

Leave a Reply