ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೆ 2 ಪದಕ.. 41 ವರ್ಷ ಬಳಿಕ ಇತಿಹಾಸ

masthmagaa.com:

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇವತ್ತು ಎರಡು ಪದಕ ಬಂದಿದೆ. ರೆಸ್ಲರ್ ರವಿ ದಹಿಯಾ ಬೆಳ್ಳಿ ಪದಕ ತಂದುಕೊಟ್ರೆ, ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ, ಎರಡು ಬೆಳ್ಳಿ, ಮೂರು ಕಂಚು.. ಇವತ್ತು ನಡೆದ ಪುರುಷರ 57 ಕೆಜಿ ವಿಭಾಗದ ಫ್ರೀಸ್ಟೈಲ್​ ರೆಸ್ಲಿಂಗ್​ನ ಫೈನಲ್​​ನಲ್ಲಿ ಭಾರತದ ರವಿ ದಹಿಯಾ ಸೋತ್ರು. ರಷ್ಯನ್​ ಒಲಿಂಪಿಕ್​ ಕಮಿಟಿಯ ಆಟಗಾರ 7-4 ಅಂಕಗಳಿಂದ ರವಿ ಅವರನ್ನ ಸೋಲಿಸಿದ್ರು. ಈ ಮೂಲಕ ಚಿನ್ನದ ಪದಕ ರಷ್ಯಾ ಪಾಲಾದ್ರೆ, ಭಾರತಕ್ಕೆ ಬೆಳ್ಳಿ ಪದಕ ಸಿಕ್ತು. ಇನ್ನು ಪುರುಷರ ಹಾಕಿಯಲ್ಲಿ ಭಾರತ ಜರ್ಮನಿ ತಂಡವನ್ನ 5-4 ಗೋಲುಗಳೊಂದಿಗೆ ಸೋಲಿಸಿ ಕಂಚಿನ ಪದಕವನ್ನ ಗೆದ್ದಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಹಾಕಿಯಲ್ಲಿ ಭಾರತ ಮೆಡಲ್​ ಗೆದ್ದಂತಾಗಿದೆ. ಈ ಹಿಂದೆ 1980ರಲ್ಲಿ ನಡೆದ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕ ಗೆದ್ದಿತ್ತು. ಅದಾದ ಬಳಿಕ ಒಂದು ಪದಕ ಕೂಡ ಗೆದ್ದಿರಲಿಲ್ಲ. ಈಗ ಕಂಚಿನ ಪದಕ ಸಿಕ್ಕಿದೆ. ಅಂದ್ಹಾಗೆ ಭಾರತದ ಹಾಕಿ ತಂಡ ಇದುವರೆಗೆ 8 ಸಲ ಚಿನ್ನದ ಪದ ಗೆದ್ದಿದೆ. ಎಲ್ಲವೂ 1980 ಮತ್ತು ಅದಕ್ಕಿಂತ ಮೊದಲು. ಇವತ್ತು ಮ್ಯಾಚ್​ ಗೆಲ್ಲುತ್ತಿದ್ದಂತೇ ಪ್ರಧಾನಿ ಮೋದಿ ದೂರವಾಣಿ ಮೂಲಕ ಹಾಕಿ ತಂಡದ ಜೊತೆ ಮಾತನಾಡಿದ್ದಾರೆ. ಜೊತೆಗೆ ರವಿ ದಹಿಯಾ ಜೊತೆಗೂ ಮಾತನಾಡಿದ್ದಾರೆ. ಮತ್ತೊಂದುಕಡೆ ವಿವಿಧ ರಾಜ್ಯಗಳು ತಮ್ಮ ರಾಜ್ಯದಿಂದ ಹೋದ ಹಾಕಿ ಆಟಗಾರರಿಗೆ ನಗದು ಬಹುಮಾನ ಘೋಷಿಸಿದೆ. ಪಂಜಾಬ್ ಮತ್ತು ಮಧ್ಯಪ್ರದೇಶ ಸರ್ಕಾರ ತಲಾ ಒಂದು ಕೋಟಿ ಘೋಷಿಸಿದೆ. ಇನ್ನು ಹರಿಯಾಣದ ಇಬ್ಬರು ಹಾಕಿ ಆಟಗಾರರಿಗೆ ಅಲ್ಲಿನ ಸರ್ಕಾರ ಎರಡೂವರೆ ಕೋಟಿ ನಗದು, ಸ್ಪೋರ್ಟ್ಸ್​​ ಡಿಪಾರ್ಟ್​​ಮೆಂಟ್​​ನಲ್ಲಿ ಜಾಬ್​ ಮತ್ತು ರಿಯಾಯಿತಿ ದರದಲ್ಲಿ ಪ್ಲಾಟ್​ ನೀಡೋದಾಗಿ ಘೋಷಿಸಿದೆ. ಇನ್ನು ರೆಸ್ಲಿಂಗ್​ನಲ್ಲಿ ಬೆಳ್ಳಿ ಗೆದ್ದ ರವಿ ಕುಮಾರ್ ದಹಿಯಾ ಹರಿಯಾಣದವರಾಗಿದ್ಧಾರೆ. ಅವರಿಗೆ 4 ಕೋಟಿ ನಗದು, ಕ್ಲಾಸ್​ ಒನ್​ ಕೆಟಗರಿಯ ಜಾಬ್​, 50 ಪರ್ಸೆಂಟ್​ ರಿಯಾಯಿತಿ ದರದಲ್ಲಿ ಜಮೀನು ನೀಡೋದಾಗಿ ಹೇಳಿದೆ. ಅಲ್ಲದೆ ದಹಿಯಾ ಅವರ ಸ್ವಗ್ರಾಮದಲ್ಲಿ ರೆಸ್ಲಿಂಗ್ ಸ್ಟೇಡಿಯಂ ಕಟ್ಟೋದಾಗಿಯೂ ಸರ್ಕಾರ ಘೋಷಿಸಿದೆ. ಇನ್ನು ಇವತ್ತು ಕಂಚಿನ ಪದಕಕ್ಕಾಗಿ ನಡೆದ 86 ಕೆಜಿ ವಿಭಾಗದ ರೆಸ್ಲಿಂಗ್​​ನಲ್ಲಿ ದೀಪಕ್​ ಪೂನಿಯಾ ಸೋತ್ರು. ನಾಳೆ ಭಾರತದ ಮಹಿಳಾ ಹಾಕಿ ತಂಡ ಗ್ರೇಟ್​ ಬ್ರಿಟನ್​ ಜೊತೆ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದೆ. ನಾಳೆ ಬೆಳಗ್ಗೆ 7 ಗಂಟೆಗೆ ಮ್ಯಾಚ್​ ಶುರುವಾಗಲಿದೆ. ಇನ್ನು ಪದಕ ಪಟ್ಟಿಯಲ್ಲಿ ಯಾವ ದೇಶ ಎಷ್ಟನೇ ಸ್ಥಾನದಲ್ಲಿದೆ ಅಂತ ನೋಡೋದಾದ್ರೆ, 34 ಚಿನ್ನದ ಪದಕದೊಂದಿಗೆ ಚೀನಾ ಮೊದಲ ಸ್ಥಾನ, ಯುಎಸ್​ 29, ಜಪಾನ್​ 22, ಆಸ್ಟ್ರೇಲಿಯಾ 17 ಚಿನ್ನದ ಪದಕದೊಂದಿಗೆ 2,3, ನಾಲ್ಕನೇ ಸ್ಥಾನದಲ್ಲಿವೆ. ಭಾರತ 5 ಪದಕದೊಂದಿಗೆ 65ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply