ಆದಿಪುರುಷ್ ಸಿನಿಮಾದ ಠಪೋರಿ ಡೈಲಾಗ್ಸ್ ಗೆ ವಿರೋಧ: ಅಳಲು ತೋಡಿಕೊಂಡ ಸಂಭಾಷಣೆಕಾರ!

masthmagaa.com:

ಆದಿಪುರುಷ್‌ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಸಿನಿಮಾ ಎಂಬುದು ಹಲವರ ಅಭಿಪ್ರಾಯ. ಈ ಸಿನಿಮಾದಲ್ಲಿರುವ ಕೆಲವೊಂದು ಸಂಭಾಷಣೆಗಳು ಟಪೋರಿಗಳು ಮಾತಾಡೋ ರೀತಿ ಇದೆ ಅಂತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಇಷ್ಟೇಲ್ಲಾ ಆದಮೇಲೆ ಸಿನಿಮಾದ ಕೆಲವು ಸಂಭಾಷಣೆಯನ್ನ ತೆಗೆದು ಹಾಕ್ತೀವಿ ಅಂತ ಚಿತ್ರತಂಡ ಹೇಳಿದೆ.

ಸಿನಿಮಾಕ್ಕೆ ಚಿತ್ರಕತೆ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿರುವ ಮನೋಜ್ ಮುಂತಶೀರ್ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಶೇರ್‌ ಮಾಡಿದ್ದಾರೆ, “ಆದಿಪುರುಷ್ ಸಿನಿಮಾಕ್ಕೆ ಸುಮಾರು ನಾಲ್ಕು ಸಾವಿರ ಸಾಲುಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಒಂದೈದು ಸಾಲುಗಳಿಂದ ಕೆಲವರ ಭಾವನೆಗೆ ಧಕ್ಕೆ ಆಗಿರಬಹುದು. ಆದರೆ ಉಳಿದ ಸಾಲುಗಳಲ್ಲಿ ನಾನು ಪ್ರಭು ಶ್ರೀರಾಮನನ್ನು ವೈಭವೀಕರಿಸಿದ್ದೇನೆ, ಸೀತಾಮಾತೆಯನ್ನು ಆರಾಧಿಸಿದ್ದೇನೆ ಅದಕ್ಕೆ ನನಗೆ ಗೌರವ ಸಿಗಬಹುದು ಎಂದುಕೊಂಡಿದ್ದೆ ಆದರೆ ಸಿಗಲಿಲ್ಲ. ನನ್ನ ಸ್ವಂತ ಅಣ್ಣ-ತಮ್ಮಂದಿರು ನನ್ನ ವಿರುದ್ಧ ಕೀಳು ಅಭಿರುಚಿಯ ಪದಗಳನ್ನು ಬಳಸುತ್ತಿದ್ದಾರೆ. ಯಾರಿಗಾಗಿ ನಾನು ಕಾರ್ಯಕ್ರಮಗಳಿಗೆ ಹೋಗಿ ಕವನಗಳನ್ನು ಓದಿದ್ದೆನೋ ಅವರೂ ಸಹ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಒಮ್ಮೆಲೆ ನನ್ನ ಸಹೋದರರು ಏಕೆ ಹೀಗಾದರು. ಎಲ್ಲರ ತಾಯಿಯನ್ನೂ ತನ್ನ ತಾಯಿಯಂತೆ ಕಂಡ ಶ್ರೀರಾಮನಿಂದ ಇದನ್ನೇ ಕಲಿತಿರುವುದಾ? ಪ್ರಭು ಶ್ರೀರಾಮ, ತಾಯಿ ಕೌಸಲ್ಯೆಯ ಪಾದದ ಬಳಿ ಕುಳಿತಂತೆಯೇ ಶಬರಿಯ ಕಾಲ ಬಳಿಯೂ ಕುಳಿತಿದ್ದರು. ಮೂರು ಗಂಟೆಯ ಸಿನಿಮಾದಲ್ಲಿ, ನಿಮ್ಮ ಕಲ್ಪನೆಗೆ ಒಗ್ಗದ ಮೂರು ನಿಮಿಷದ ಸನ್ನಿವೇಶದಲ್ಲಿ ನಾನು ಬರೆದಿರಬಹುದು. ಹಾಗೆಂದ ಮಾತ್ರಕ್ಕೆ ನನ್ನ ಮೇಲೆ ಇಷ್ಟು ವಿಷ ಕಾರುವುದೇ? ಸಿನಿಮಾದ ಶಿವೋಹಂ ಹಾಡು ಕೇಳಿಲ್ಲವೆ? ಜೈ ಶ್ರೀರಾಮ್, ರಾಮ್ ಸಿಯಾರಾಮ್ ಹಾಡು ಕೇಳಿಲ್ಲವೆ ಅದನ್ನು ಬರೆದಿರುವುದು ನಾನೇ. ಅದು ಮಾತ್ರವೇ ಅಲ್ಲ. ಥೇರಿ ಮಿಟ್ಟಿ ಮೇ ಮಿಲ್ ಜಾವಾ, ದೇಶ್ ಮೇರೆ ಹಾಡು ಬರೆದಿರುವುದು ಸಹ ನಾನೇ. ನಿಮ್ಮ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ನಾವು ಸನಾತನ ಧರ್ಮದ ಸೇವೆಗೆಂದು ಆದಿಪುರುಷ್ ಮಾಡಿದ್ದೇವೆ. ನಾವುಗಳೇ ಹೀಗೆ ಒಬ್ಬರ ಎದುರು ಒಬ್ಬರು ನಿಂತರೆ ಸನಾತನ ಉಳಿಯುವುದಿಲ್ಲ. ನಿಮ್ಮ ಅಭಿಪ್ರಾಯ, ಮನ್ನಣೆಗಿಂತಲೂ ಮಿಗಿಲಾದದ್ದು ಯಾವುದೂ ಇಲ್ಲ ಹಾಗಾಗಿ ಈ ಪೋಸ್ಟ್ ಹಂಚಿಕೊಂಡಿದ್ದೇನೆ. ಈಗ ಆಕ್ಷೇಪಣೆ ಎತ್ತಿರುವ ಸಂಭಾಷಣೆಗಳ ಪರವಾಗಿ ನಾನು ವಾದ ಮಂಡಿಸಬಲ್ಲೆ. ಆದರೆ ಬೇಡ, ಅದು ನಿಮ್ಮ ಬೇಸರವನ್ನು ಕಡಿಮೆ ಮಾಡಲಾರದೇನೋ. ಯಾವ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಇದೆಯೋ ಆ ಸಂಭಾಷಣೆಗಳನ್ನು ಬದಲಾಯಿಸಲು ನಾನೂ, ನಮ್ಮ ನಿರ್ಮಾಪಕ-ನಿರ್ದೇಶಕರು ನಿರ್ಧರಿಸಿದ್ದೇವೆ. ಆ ಸಂಭಾಷಣೆಗಳು ಈ ವಾರದ ಬಳಿಕ ಸಿನಿಮಾಕ್ಕೆ ಸೇರಿಸುತ್ತೇವೆ” ಅಂತ ಹೇಳಿದ್ದಾರೆ.

masthmagaa.com

Contact Us for Advertisement

Leave a Reply