masthmagaa.com:

ಹಾಯ್ ಫ್ರೆಂಡ್ಸ್, ಮಹಾಮಾರಿ ರೋಗಗಳು ಶುರುವಾಗಿದ್ದು ಯಾವಾಗ ಗೊತ್ತಾ..? ವಿಶ್ವದ ಮೊದಲ ಮಹಾಮಾರಿ ರೋಗ ಯಾವುದು..? ಕಾಲ ಕಳೆದಂತೆ ಹುಟ್ಟಿಕೊಂಡ ಒಂದೊಂದೇ ಮಹಾಮಾರಿಗಳು ಜನರ ಮೇಲೆ ಬೀರಿದ ಪರಿಣಾಮಗಳೇನು..? ಕಾಯಿಲೆಗಳಿಂದ ಜನ ಕಲಿತ ಪಾಠವೇನು..? ಎಲ್ಲವನ್ನು ಈ ರಿಪೋರ್ಟ್​​ನಲ್ಲಿ ನೋಡ್ತಾ ಹೋಗೋಣ..

ಕ್ರಿ.ಪೂ.430: ಅಥೆನ್ಸ್
ಇದು ವಿಶ್ವದ ಇತಿಹಾಸದಲ್ಲಿ ದಾಖಲಾದ ಮೊದಲ ಸಾಂಕ್ರಾಮಿಕ ರೋಗವಾಗಿತ್ತು. ಪೆಲೊಪೊನ್ನೇಷಿಯನ್ ಯುದ್ಧದ ವೇಳೆ ಹರಡೋಕೆ ಶುರುವಾಯ್ತು. ಗ್ರೀಕ್‍ನ ಎರಡು ಶಕ್ತಿಶಾಲಿ ರಾಜ್ಯಗಳಾದ ಅಥೇನ್ಸ್ ಮತ್ತು ಸ್ಪಾರ್ತಾ ರಾಜ್ಯಗಳ ನಡುವೆ ನಡೆದ ಯುದ್ಧ ಇದಾಗಿತ್ತು. ಲಿಬಿಯಾ, ಇಥಿಯೋಪಿಯಾ, ಈಜಿಪ್ಟ್ ಸೇರಿದಂತೆ ಹಲವು ದೇಶಗಳಿಗೆ ಹರಡಿತ್ತು. ಅಥೆನ್ಸ್ ಗಡಿ ದಾಟಿ ಸ್ಪಾರ್ತಾ ಕಡೆಗೂ ಈ ಕಾಯಿಲೆ ಹರಡೋಕೆ ಶುರುವಾಗಿತ್ತು. ಜ್ವರ, ಬಾಯಾರಿಕೆ, ಗಂಟಲು ಮತ್ತು ನಾಲಗೆಯಲ್ಲಿ ರಕ್ತ ಬರುವಿಕೆ, ಚರ್ಮ ಕೆಂಪಾಗುವುದು ಇದರ ಲಕ್ಷಣವಾಗಿತ್ತು. ಇದನ್ನು ಇಂದಿನ ಟೈಫಾರ್ಡ್ ಜ್ವರಕ್ಕೆ ಹೋಲಿಸಲಾಗುತ್ತೆ. ಇದು ಅಥೆನ್ಸ್ ಸೇನೆಯನ್ನು ದುರ್ಬಲಗೊಳಿಸಿ, ಸ್ಪಾರ್ತಾದ ಸೇನೆ ಗೆಲ್ಲುವಂತೆ ಮಾಡಿತ್ತು. ಇದು ಮೂರನೇ ಎರಡು ಭಾಗದಷ್ಟು ಜನಸಂಖ್ಯೆಯನ್ನು ಕಡಿಮೆ ಮಾಡಿತ್ತು. ಅಂದ್ರೆ ಅಷ್ಟು ಜನರನ್ನು ಬಲಿ ಪಡೆದುಕೊಂಡಿತ್ತು.

ಕ್ರಿ.ಶ.165: ಅಂಟೋನಿನ್ ಪ್ಲೇಗ್
ಅಂಟೋನಿನ್ ಪ್ಲೇಗ್ ನ್ನು ಆರಂಭಿಕ ಹಂತದ ಸಿಡುಬಿಗೆ ಹೋಲಿಸಬಹುದಾಗಿದೆ. ಜರ್ಮನ್ನರು ಮತ್ತು ರೋಮನ್ನರಲ್ಲಿ ಹರಡಿದ್ದ ಈ ಕಾಯಿಲೆ ಕ್ರಿ.ಶ 180ರವರೆಗೆ ಅಂದ್ರೆ 15 ವರ್ಷಗಳ ಕಾಲ ಜನರನ್ನು ಕಾಡಿತ್ತು. ಜ್ವರ, ಗಂಟಲು ನೋವು, ವಾಂತಿ-ಬೇಧಿ, ಕೀವುಭರಿತ ಗುಳ್ಳೆಗಳು ಈ ಭಯಾನಕ ಕಾಯಿಲೆಯ ಲಕ್ಷಣವಾಗಿತ್ತು. ಜನ ಮಾತ್ರವಲ್ಲ.. ಮಾರ್ಕಸ್ ಔರೇಲಿಯಸ್ ಕೂಡ ಇದಕ್ಕೆ ಬಲಿಪಶುವಾಗಿದ್ದ.

ಕ್ರಿ.ಶ.250: ಸೈಪ್ರಿಯನ್ ಪ್ಲೇಗ್
ಟ್ಯುನಿಶಿಯಾ ಜ್‍ನಲ್ಲಿ ಕ್ರೈಸ್ತ ಬಿಷಪ್ ಒಬ್ಬರಲ್ಲಿ ಈ ಕಾಯಿಲೆ ಮೊಟ್ಟ ಮೊದಲಿಗೆ ಪತ್ತೆಯಾಯ್ತು. ವಾಂತಿ-ಬೇಧಿ, ಗಂಟಲುನೋವು, ಜ್ವರ, ಕೈ-ಕಾಲುಗಳಲ್ಲಿ ಗ್ಯಾಂಗ್ರೀನ್ ಆಗೋದು ಈ ಕಾಯಿಲೆಯ ಲಕ್ಷಣವಾಗಿತ್ತು. ಈ ಕಾಯಿಲೆಗಳಿಂದ ಪಾರಾಗಲು ಜನ ದೇಶ ಬಿಟ್ಟು ದೇಶಗಳಿಗೆ ಹೋದ್ರು. ಇದ್ರಿಂದ ಈ ರೋಗ ಬೇರೆಬೇರೆ ದೇಶಗಳಿಗೆ ಹರಡಿಕೊಳ್ತು. ಮುಂದಿನ 3 ಶತಮಾನಗಳ ಕಾಲ ಈ ಕಾಯಿಲೆ ಜನರನ್ನು ಹಿಂಡಿ ಹಿಪ್ಪೆ ಮಾಡಿತ್ತು.

ಕ್ರಿ.ಶ.541: ಜಸ್ಟೀನಿಯನ್ ಪ್ಲೇಗ್
ಈಜಿಪ್ಟ್​​​​ನಲ್ಲಿ ಶುರುವಾದ ಈ ಮಹಾಮಾರಿ ಮೆಡಿಟರೇನಿಯನ್ ಸಮುದ್ರದ ಮೂಲಕ ಪ್ಯಾಲೆಸ್ತೀನ್ ಮತ್ತು ಬೈಜಂಟೈನ್ ಸಾಮ್ರಾಜ್ಯಕ್ಕೂ ಹರಡಿತ್ತು. ಇದು ಸಾಮ್ರಾಜ್ಯಗಳು ಹರಡುವ ದಿಕ್ಕನ್ನೇ ಬದಲಿಸಿಬಿಡ್ತು. ಹರಿದು ಹಂಚಿಹೋಗಿದ್ದ ರೋಮನ್ ಸಾಮ್ರಾಜ್ಯವನ್ನು ಒಗ್ಗೂಡಿಸಬೇಕೆಂಬ ಜಸ್ಟೀನಿಯನ್ ಕನಸು ಕನಸಾಗೇ ಉಳೀತು. ಎಲ್ಲಾ ಯೋಜನೆಗಳು ಹಾಳಾದವು. ಕ್ರೈಸ್ತ ಧರ್ಮ ಹರಡುವಿಕೆಗೆ ಅಗತ್ಯವಾದ ವಾತಾವರಣವನ್ನು ಕಲ್ಪಿಸಿತು ಈ ಕಾಯಿಲೆ. ಇದು ಜಗತ್ತಿನ ಶೇ.26ರಷ್ಟು ಜನಸಂಖ್ಯೆಯನ್ನು ಕಡಿಮೆ ಮಾಡಿತು.

ಕ್ರಿ.ಶ.11ನೇ ಶತಮಾನ: ಕುಷ್ಠರೋಗ
11ನೇ ಶತಮಾನದ ಸುಮಾರಿಗೆ ಕುಷ್ಠರೋಗ ಯೂರೋಪಿನಲ್ಲಿ ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿ ಹರಡಿಕೊಳ್ತು. ಹೀಗಾಗಿ ಈ ರೋಗಕ್ಕೆ ತುತ್ತಾದವರಿಗಾಗಿ ಹಲವಾರು ಆಸ್ಪತ್ರೆಗಳು ಕೂಡ ನಿರ್ಮಾಣವಾದವು. ಇದು ನಿಧಾನವಾಗಿ ಅಭಿವೃದ್ಧಿಹೊಂದುವ ಬ್ಯಾಕ್ಟೀರಿಯಾ ಆಧಾರಿತ ಕಾಯಿಲೆಯಾಗಿದ್ದು, ನಿಧಾನವಾಗಿ ದೇಹದ ಒಂದೊಂದೇ ಅಂಗಗಳು ವಿಕಾರವಾಗುತ್ತಾ ಸಾಗುತ್ತೆ. ಆಗಿನ ಕಾಲದಲ್ಲಿ ಈ ಕಾಯಿಲೆ ದೇವರು ಕೊಡುವ ಶಿಕ್ಷೆ ಅಂತ ನಂಬಲಾಗಿತ್ತು. ಹೀಗಾಗಿಯೇ ಈ ಕಾಯಿಲೆ ಬಂದವರನ್ನು ಬಹಿಷ್ಕರಿಸಲಾಗುತ್ತಿತ್ತು. ಇಂದಿಗೂ ಕೂಡ ಸಾವಿರಾರು ಜನ ಈ ರೋಗಕ್ಕೆ ತುತ್ತಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಇದ್ದರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ.

ಕ್ರಿ.ಶ.1347: ದಿ ಬ್ಲಾಕ್ ಡೆತ್
ಇದು ಕ್ರಿಸ್ತಶಕ 1347ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ರೋಗ..ಏಷ್ಯಾದಲ್ಲಿ ಶುರುವಾದ ಈ ಕಾಯಿಲೆ ಪಾಶ್ಚಿಮಾತ್ಯ ದೇಶಗಳಿಗೆ ಅತಿವೇಗವಾಗಿ ಹರಡಿಕೊಂಡಿತು. ವಿಶ್ವದ ಒಟ್ಟು ಜನಸಂಖ್ಯೆಯ 3ನೇ 1ರಷ್ಟು ಜನರನ್ನು ಬಲಿ ಪಡೆದಿದ್ದ ಈ ಕಾಯಿಲೆ ಹಾವಳಿ ಎಷ್ಟಿತ್ತು ಅಂದ್ರೆ, ನಗರದ ತುಂಬಾ ಅಲ್ಲಲ್ಲಿ ಹೆಣಗಳು ಬಿದ್ದಿರುತ್ತಿದ್ದವು. ಅದ್ರಲ್ಲೂ ಕೆಲವೊಂದು ಶವಗಳು ಕೊಳೆತು ಇಡೀ ನಗರ ವಾಸನೆಯಿಂದ ಕೂಡಿರುತ್ತಿತ್ತು.

ಈ ಕಾಯಿಲೆಯ ಎಫೆಕ್ಟ್​​​ಗೆ ಬ್ರಿಟನ್ ಮತ್ತು ಫ್ರಾನ್ಸ್ ತಮ್ಮ ಶಕ್ತಿಯನ್ನು ಕಳೆದುಕೊಂಡವು.. ಯುದ್ಧ ಮಾಡುತ್ತಿದ್ದ ಎರಡೂ ದೇಶಗಳು ಯುದ್ಧವಿರಾಮ ಘೋಷಿಸಿಕೊಂಡವು. ಪ್ಲೇಗ್‍ನಿಂದ ಆರ್ಥಿಕ ಪರಿಸ್ಥಿತಿ ಮತ್ತು ಜನಸಂಖ್ಯೆಯಲ್ಲಿ ಬದಲಾವಣೆ ಉಂಟಾಗಿದ್ದರಿಂದ ಯೂರೋಪಿನಲ್ಲಿ ಅಸ್ತಿತ್ವದಲ್ಲಿದ್ದ ಉಳಿಗಮಾನ್ಯ ಪದ್ಧತಿ ವ್ಯವಸ್ಥೆಯನ್ನು ನಾಶಪಡಿಸಿತು. ಜೊತೆಗೆ ಒಂದಷ್ಟು ಮಂದಿ ಯೂರೋಪಿಯನ್ನರು ಉತ್ತರ ಅಮೆರಿಕದಲ್ಲಿ ಹೋಗಿ ನೆಲೆಸಿದ್ರು.

ಕ್ರಿ.ಶ.1492: ದಿ ಕೊಲಂಬಿಯನ್ ಎಕ್ಸ್​​​​ಚೇಂಜ್
ಯೂರೋಪಿಯನ್ನರು ಕೆರಿಬಿಯನ್ ಸಮುದ್ರದ ಮೂಲಕ ಅಮೆರಿಕ ತಲುಪಿದ ಬಳಿಕ ಸಿಡುಬು, ದಡಾರ ಮತ್ತು ಪ್ಲೇಗ್‍ನಂತಹ ಕಾಯಿಲೆಗಳು ಅಲ್ಲಿನ ಮೂಲ ನಿವಾಸಿಗಳಿಗೆ ಹರಡಿತು. ಇದ್ರಿಂದ ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳ ಶೇ.90ರಷ್ಟು ಮೂಲ ನಿವಾಸಿಗಳು ಮೃತಪಟ್ಟರು. ಉತ್ತರ ಅಮೆರಿಕಾದ ಹಿಸ್ಪಾನಿಯೋಲಾ ದ್ವೀಪಕ್ಕೆ ಕ್ರಿಸ್ಟೋಫರ್ ಕೊಲಂಬಸ್ ಹೋಗುವಾಗ ಟೈನೋ ಸಮುದಾಯದ ಸಂಖ್ಯೆ 60 ಸಾವಿರ ಜನರಿದ್ದರು. ಅದೇ 1548ರ ವೇಳೆಗೆ ಈ ಸಂಖ್ಯೆ 500ಕ್ಕೆ ಬಂದಿಳಿದಿತ್ತು. ಇದೇ ರೀತಿ ಎರಡೂ ಖಂಡಗಳ ಮೂಲ ನಿವಾಸಿಗಳ ನಾಶವಾಯ್ತು.

1520ರಲ್ಲಿ ಸಿಡುಬು ಅಜ್ಟೆಕ್ ಸಾಮ್ರಾಜ್ಯವನ್ನೇ ನಾಶ ಮಾಡಿತ್ತು. ಈ ಕಾಯಿಲೆ ಕೆಲವರನ್ನು ಬಲಿತೆಗೆದುಕೊಂಡ್ರೆ, ಇನ್ನು ಕೆಲವರನ್ನು ಶಕ್ತಿಹೀನರನ್ನಾಗಿ ಮಾಡಿ ಬದುಕಲು ಬಿಟ್ಟಿತು. ಇದು ಜನರನ್ನು ದುರ್ಬಲಗೊಳಿಸಿತು. ಇದ್ರಿಂದಾಗಿ ಯೂರೋಪಿನ ವಸಾಹತುಶಾಹಿಗಳನ್ನು ವಿರೋಧಿಸಲು ಜನರಿಗೆ ಸಾಧ್ಯವಾಗಲಿಲ್ಲ. ರೈತರು ಬೆಳೆಗಳನ್ನು ಉತ್ಪಾದಿಸಲು ಸಾಧ್ಯವಾಗದ ಮಟ್ಟಿಗೆ ಬಂದು ಬಿಟ್ರು. 2019ರ ಸಂಶೋಧನೆಯೊಂದರ ಪ್ರಕಾರ 16 ಮತ್ತು 17ನೇ ಶತಮಾನದಲ್ಲಿ ಅಮೆರಿಕದ 56 ಮಿಲಿಯನ್ ಅಂದ್ರೆ 5 ಕೋಟಿ 60 ಲಕ್ಷದಷ್ಟು ಮೂಲ ನಿವಾಸಿಗಳು ಈ ಮಹಾಮಾರಿಗೆ ಬಲಿಯಾಗಿದ್ದರು.

ಕ್ರಿ.ಶ.1665: ದಿ ಗ್ರೇಟ್ ಪ್ಲೇಗ್ ಆಫ್ ಲಂಡನ್
ಬ್ಲಾಕ್ ಡೆತ್ ಮುಗಿದ ಬಳಿಕವೂ ಲಂಡನ್‍ನಲ್ಲಿ ಪ್ಲೇಗ್ ಪದೇ ಪದೇ ಕಾಟ ಕೊಡ್ತಾ ಇತ್ತು. 1348ರಿಂದ 1665ರವರೆಗೆ 300 ವರ್ಷಗಳ ಕಾಲ ಪ್ರತಿ 10 ವರ್ಷಕ್ಕೊಮ್ಮೆಯಂತೆ 40 ಬಾರಿ ಮಹಾಮಾರಿ ಕಾಟ ಕೊಡ್ತು. ಪ್ರತಿ ಬಾರಿ ಬಂದಾಗಲೂ ಲಂಡನ್‍ನ ಶೇ.20ರಷ್ಟು ಜನಸಂಖ್ಯೆಯನ್ನು ಬಲಿ ತೆಗೆದುಕೊಳ್ತಿತ್ತು ಈ ಪ್ಲೇಗ್.. 1500ರ ಆರಂಭದಲ್ಲಿ ಇಂಗ್ಲೆಂಡ್ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆಯನ್ನು ಜಾರಿತೆ ತಂತು. ಯಾವುದಾದ್ರು ಒಂದು ಮನೆಯಲ್ಲಿ ಯಾರಿಗಾದ್ರೂ ಪ್ಲೇಗ್ ಬಂದಿದ್ರೆ ಅಂಥಹ ಮನೆಗಳನ್ನು ಗುರುತು ಮಾಡಲಾಗುತ್ತಿತ್ತು. ಆ ಮನೆಯಿಂದ ಯಾರಾದ್ರೂ ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕಾದ್ರೆ ಬಿಳಿ ಕೋಲು ಹಿಡಿದುಕೊಂಡು ಹೋಗಬೇಕಿತ್ತು. ನಾಯಿ, ಬೆಕ್ಕಿನಂತಹ ಪ್ರಾಣಿಗಳು ಕೂಡ ಈ ಸೋಂಕು ಹರಡುತ್ತವೆ ಅಂತ ತಿಳಿಯಲಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿಗಳನ್ನು ಕೊಂದು ಹಾಕಲಾಯ್ತು. 1665ರಲ್ಲಿ ಲಂಡನ್‍ನಲ್ಲಿ ಬಂದ ದಿ ಗ್ರೇಟ್ ಪ್ಲೇಗ್ 7 ತಿಂಗಳಲ್ಲಿ 1 ಲಕ್ಷ ಜನರನ್ನು ಬಲಿ ಪಡೆದುಕೊಂಡಿತು. ಆಗ ಎಲ್ಲಾ ಮನರಂಜನೆ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಯ್ತು. ಅಲ್ಲದೆ ಕಾಯಿಲೆ ಹರಡೋದನ್ನು ತಡೆಯಲು ಸೋಂಕಿತರನ್ನು ಬಲವಂತವಾಗಿ ಮನೆಯಲ್ಲೇ ಕೂಡಿಹಾಕಲಾಯ್ತು. ಅವರ ಮನೆಯ ಬಾಗಿಲಿನ ಮೇಲೆ ಕೆಂಪು ಬಣ್ಣದಲ್ಲಿ ಇಂಟು ಮಾರ್ಕ್ ಹಾಕಿ, ದೇವರೇ ನಮ್ಮನ್ನು ಕ್ಷಮಿಸು ಅಂತ ಕೂಡ ಬರೆಯಲಾಗುತ್ತಿತ್ತು. ಅಂದ್ರೆ ಈ ಮಹಾಮಾರಿ ಮೂಲಕ ವಿಶ್ವದಲ್ಲಿ ಕ್ವಾರಂಟೈನ್ ಅನ್ನೋ ಪದ್ಧತಿ ಶುರುವಾಯ್ತು.

ಕ್ರಿ.ಶ.1817ರಲ್ಲಿ ಕಾಲರಾ
1817ರಿಂದ 150 ವರ್ಷಗಳ ಕಾಲ ಕಾಲರಾ ಇಡೀ ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿತು. ಆರಂಭದಲ್ಲಿ ಇದು ರಷ್ಯಾದಲ್ಲಿ ಆರಂಭವಾಗಿ, 1 ಲಕ್ಷ ಜನ ಸಾವನ್ನಪ್ಪಿದ್ರು. ಅಷ್ಟೇ ಅಲ್ಲ.. ನೀರು ಮತ್ತು ಆಹಾರದ ಮೂಲಕ ಹರಡುತ್ತಿದ್ದ ಈ ರೋಗ ಬ್ರಿಟಿಷ್ ಸೇನೆ ಮೂಲಕ ಭಾರತಕ್ಕೂ ಬಂದು ಇಲ್ಲೂ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ನಂತರದಲ್ಲಿ ಅದೇ ಬ್ರಿಟಿಷ್ ನೌಕಾಪಡೆ ಈ ಮಹಾಮಾರಿಯನ್ನು ಸ್ಪೇನ್, ಆಫ್ರಿಕ, ಇಂಡೋನೇಷ್ಯಾ, ಚೀನಾ, ಜಪಾನ್, ಇಟಲಿ, ಜರ್ಮನಿ ಮತ್ತು ಅಮೆರಿಕಾಗೆ ಹರಡಿತು. ಇದ್ರಿಂದ ಈ ದೇಶಗಳಲ್ಲೂ ಒಂದೂವರೆ ಲಕ್ಷ ಜನ ಸಾವನ್ನಪ್ಪಿದ್ರು.

1875: ಫಿಜಿ ದಡಾರ ಮಹಾಮಾರಿ
ಒಸೆನಿಯಾದ ಫಿಜಿ ಬ್ರಿಟಿಷ್ ಸಾಮ್ರಾಜ್ಯ ಸೇರಿದ ಬಳಿಕ ಬ್ರಿಟಿಷರ ತಂಡವೊಂದು ಭೇಟಿ ನೀಡಿತು. ಆದ್ರೆ ಈ ತಂಡ ಭಯಾನಕ ದಡಾರವನ್ನು ಹೊತ್ತು ತಂದಿತ್ತು. ಈ ತಂಡ ಮರಳಿದ ಬಳಿಕವೂ ಅವರ ಸಂಪರ್ಕಕ್ಕೆ ಬಂದಿದ್ದ ಮೂಲ ನಿವಾಸಿಗಳು ಮತ್ತು ಪೊಲೀಸರಿಂದ ಸೋಂಕು ಹರಡಿಕೊಂಡಿತು. ಅದು ಕೂಡ ಯಾವ ರೀತಿ ಅಂದ್ರೆ ಇಡೀ ದ್ವೀಪದ ತುಂಬಾ ಹೆಣದ ರಾಶಿ ತುಂಬಿಕೊಂಡಿತ್ತು. ಇಡೀ ಗ್ರಾಮಕ್ಕೆ ಗ್ರಾಮವೇ ಈ ಮಹಾಮಾರಿಗೆ ಬಲಿಯಾಗಿತ್ತು. ಇಡೀ ಗ್ರಾಮಕ್ಕೆ ಹಚ್ಚಲಾಗುತ್ತಿತ್ತು. ಈ ವೇಳೆ ಜೀವಂತವಾಗಿದ್ದ ರೋಗಿಗಳು ಕೂಡ ಈ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದರು. ಈ ದ್ವೀಪದ 3ನೇ 1ರಷ್ಟು ಜನಸಂಖ್ಯೆ ಈ ಮಹಾಮಾರಿಗೆ ಬಲಿಯಾಗಿತ್ತು.

ಕ್ರಿ.ಶ.1889: ರಷ್ಯನ್ ಫ್ಲೂ
ಇದು ಶುರುವಾಗಿದ್ದು ಸೈಬೀರಿಯಾ ಮತ್ತು ಖಜಕಿಸ್ತಾನದಲ್ಲಿ.. ನಂತರ ಫಿನ್ಲಾಂಡ್, ಪೋಲೆಂಡ್ ಮತ್ತು ಯೂರೋಪ್‍ಗೆ ಹರಡಿಕೊಳ್ತು. ನಂತರದ ವರ್ಷಗಳಲ್ಲಿ ಈ ಕಾಯಿಲೆ ಅಮೆರಿಕ ಮತ್ತು ಆಫ್ರಿಕಾಗೂ ಹರಡಿಕೊಂಡಿತು. 1890ರ ವೇಳೆಗೆ ಈ ಮಹಾಮಾರಿಗೆ ಒಟ್ಟು 3.60 ಲಕ್ಷ ಜನ ಸಾವನ್ನಪ್ಪಿದ್ರು.

ಕ್ರಿ.ಶ.1918: ಸ್ಪ್ಯಾನಿಶ್ ಫ್ಲೂ
1918ರಲ್ಲಿ ಶುರುವಾದ ಈ ಕಾಯಿಲೆ ಬಲಿ ಪಡೆದಿದ್ದು ಬರೋಬ್ಬರಿ 5 ಕೋಟಿ ಜನರನ್ನು.. ಯೂರೋಪ್, ಅಮೆರಿಕ ಮತ್ತು ಏಷ್ಯಾದಲ್ಲಿ ಮೊದಲು ಹುಟ್ಟಿಕೊಂಡ ಈ ಕಾಯಿಲೆ ಬರುಬರುತ್ತಾ ಇಡೀ ಜಗತ್ತಿಗೆ ಹರಡಿಕೊಂಡಿತು. ಇದಕ್ಕೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಔಷಧಗಳು ಕೂಡ ಆಗಿನ ಕಾಲದಲ್ಲಿ ಇರಲಿಲ್ಲ. ಸ್ಪೇನ್ ರಾಜಧಾನಿ ಮ್ಯಾಡ್ರಿಡ್‍ನಲ್ಲಿ ಹುಟ್ಟಿಕೊಂಡಿದ್ದರಿಂದ ಈಕಾಯಿಲೆಗೆ ಸ್ಪ್ಯಾನಿಷ್ ಫ್ಲೂ ಅಂತ ಕರೆಯಲಾಯ್ತು.

ಕ್ರಿ.ಶ.1957: ಏಷ್ಯನ್ ಫ್ಲೂ
ಹಾಂಗ್‍ಕಾಂಗ್‍ನಲ್ಲಿ ಶುರುವಾದ ಈ ರೋಗ ಮೊದಲಿಗೆ ಚೀನಾ, ಅಮೆರಿಕಾದಲ್ಲಿ ಹರಡಿ ನಂತರ ಇಡೀ ವಿಶ್ವಕ್ಕೇ ಹರಡಿತು. ಇಂಗ್ಲೆಂಡ್‍ನಲ್ಲಿ 6 ತಿಂಗಳಲ್ಲಿ ಈ ಕಾಯಿಲೆಗೆ 14 ಸಾವಿರ ಜನ ಸಾವನ್ನಪ್ಪಿದ್ರು. 1958ರಲ್ಲಿ ಇದರ ಎರಡನೇ ಅಲೆ ಶುರುವಾಗಿ ಮತ್ತಷ್ಟು ಬಲಿ ಪಡೆದುಕೊಂಡಿತು. ಇಡೀ ವಿಶ್ವದಲ್ಲಿ ಈ ಮಹಾಮಾರಿಗೆ 11 ಲಕ್ಷಕ್ಕೂ ಅಧಿಕ ಜನ ಸಾವನ್ನಪ್ಪಿದ್ರು. ಅಮೆರಿಕ ಒಂದರಲ್ಲೇ 1.16 ಲಕ್ಷ ಜನ ಸಾವನ್ನಪ್ಪಿದ್ರು.

ಕ್ರಿ.ಶ.1981: ಏಡ್ಸ್
1981ರಲ್ಲಿ ಮೊದಲ ಬಾರಿಗೆ ಹೆಚ್‍ಐವಿ ಏಡ್ಸ್ ವಿಶ್ವದ ಗಮನ ಸೆಳೀತು. ಇದು ದೇಹದ ರಕ್ತ ಮತ್ತು ದ್ರವೀಯ ಅಂಶಗಳಿಂದ ಹರಡುವ ಕಾಯಿಲೆಯಾಗಿದೆ. ಜೊತೆಗೆ ಇದು ಉಳಿದ ವೈರಸ್‍ಗಳಂತೆ ಗಾಳಿಯ ಮೂಲಕ ಹರಡುವುದಿಲ್ಲ. ಮೊಟ್ಟ ಮೊದಲಿಗೆ ಅಮೆರಿಕದ ಸಲಿಂಗಿಗಳಲ್ಲಿ ಪತ್ತೆಹಚ್ಚಲಾಯ್ತು. ಆದ್ರೆ ಇದು 1920ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಚಿಂಪಾಂಜಿಗಳ ಮೂಲಕ ಹರಡಿತ್ತು ಅಂತ ಕೂಡ ಹೇಳಲಾಗುತ್ತೆ. ಇದಕ್ಕೆ ನಿಧಾನಗತಿಯ ಚಿಕಿತ್ಸೆ ಇದ್ರೂ ಕೂಡ ಕಾಯಿಲೆ ಪತ್ತೆಯಾದ ಸಮಯದಿಂದ ಈವರೆಗೆ ಒಟ್ಟು ಮೂರೂವರೆ ಕೋಟಿ ಜನ ಸಾವನ್ನಪ್ಪಿದ್ದಾರೆ.

ಫ್ರೆಂಡ್ಸ್, ನಂತರ 2003ರಲ್ಲಿ ಸಾರ್ಸ್ ಬಂತು, ಆಮೇಲೆ ಎಬೋಲಾ ಬಂತು.. ಆದ್ರೆ ಇವುಗಳು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ.. ಜೊತೆಗೆ ವಿಜ್ಞಾನ ಕೂಡ ಮುಂದುವರಿದಿದ್ದರಿಂದ ಅಷ್ಟೊಂದು ಸಾವು ನೋವು ಸಂಭವಿಸಲಿಲ್ಲ. ಆದ್ರೆ ಕೊರೋನಾ ಮಾತ್ರ ವಿಜ್ಞಾನ ಲೋಕಕ್ಕೆ ಪ್ರಶ್ನೆಯಾಗಿ 16 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿದೆ. ಈಗಲೂ ಮಂದಗತಿಯಲ್ಲಿ ಬಲಿ ಪಡೆದುಕೊಳ್ಳುತ್ತಲೇ ಇದೆ.. ಹೀಗೆ ಇತಿಹಾಸದ ಪುಟಗಳಲ್ಲಿ ಒಂದರ ನಂತರ ಒಂದು ಕಾಯಿಲೆಗಳು ತಮ್ಮ ಮುದ್ರೆಯನ್ನು ಒತ್ತಿವೆ.. ಈಗ ಆ ಇತಿಹಾಸದ ಪುಟ ಸೇರುವ ಹೊಸ್ತಿಲಲ್ಲಿದೆ ಕೊರೋನಾ..

-masthmagaa.com

Contact Us for Advertisement

Leave a Reply