ಸುಶಾಂತ್ ಪ್ರಕರಣದ ತನಿಖೆಗೆ ಮತ್ತೆ ಅಡ್ಡಿ.. ಬಿಹಾರ ಪೊಲೀಸ್ ಅಧಿಕಾರಿ ಮುಂಬೈನಲ್ಲಿ ಕ್ವಾರಂಟೈನ್..!

masthmagaa.com:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಒಂದ್ಕಡೆ ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸುತ್ತಿದ್ರೆ, ಅತ್ತ ಬಿಹಾರ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಮುಂಬೈ ಪೊಲೀಸರು ಬಿಹಾರ ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ. ಇದರ ನಡುವೆಯೇ ಪಾಟ್ನಾದಿಂದ ಮುಂಬೈಗೆ ಬಂದಿದ್ದ ಐಪಿಎಸ್ ಅಧಿಕಾರಿ ಬಿನಯ್ ತಿವಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ವಾರಂಟೈನ್​ನಲ್ಲಿ ಇಟ್ಟಿದ್ದಾರೆ.

ಮುಂಬೈನಲ್ಲಿ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸ್ ತಂಡದ ನೇತೃತ್ವ ವಹಿಸಲು ಬಂದಿದ್ದ ಪಾಟ್ನಾ ಎಸ್​ಪಿ ಬಿನಯ್ ಕುಮಾರ್ ಅವರ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗಿದ್ದು, ಒತ್ತಾಯಪೂರ್ವಕವಾಗಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಅಂತ ಬಿಹಾರ ಪೊಲೀಸರು ಹೇಳಿದ್ದಾರೆ. ಆದ್ರೆ ವಿಮಾನದಲ್ಲಿ ಬಂದಿದ್ದ ಅವರನ್ನು ನಿಯಮದ ಪ್ರಕಾರ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಅಂತ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳ್ತಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಮಹಾನಗರ ಪಾಲಿಕೆಯ ಈ ನಡೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಪೊಲೀಸ್ ಅಧಿಕಾರಿ ಜೊತೆ ನಡೆದುಕೊಂಡ ರೀತಿ ಸರಿ ಇಲ್ಲ. ಇದು ರಾಜಕೀಯವಲ್ಲ. ಬಿಹಾರ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಮುಂಬೈ ಪೊಲೀಸರ ಜೊತೆ ನಮ್ಮ ಡಿಜಿಪಿ ಮಾತನಾಡುತ್ತಾರೆ’ ಅಂತ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರ ಸಚಿವ ಸಂಜಯ್ ಝಾ ಮಾತನಾಡಿದ್ದು, ‘ಈ ಹಿಂದೆ ತನಿಖೆಗಾಗಿ ಮುಂಬೈ ತಲುಪಿದ್ದ ಬಿಹಾರದ ನಾಲ್ವರು ಪೊಲೀಸ್ ಅಧಿಕಾರಿಗಳು ವಿಮಾನದಲ್ಲೇ ಹೋಗಿದ್ದರು. ಅವರನ್ನು ಕ್ವಾರಂಟೈನ್​ಗೆ ಒಳಪಡಿಸಿರಲಿಲ್ಲ. ಆದ್ರೀಗ ತನಿಖೆಯನ್ನು ಚುರುಕುಗೊಳಿಸಬೇಕು ಅಂತ ಉನ್ನತ ಅಧಿಕಾರಿಯನ್ನು ಕಳಿಸಿದ್ರೆ ಕ್ವಾರಂಟೈನ್​ನಲ್ಲಿ ಇಟ್ಟಿದ್ದಾರೆ’ ಅಂತ ಕಿಡಿಕಾರಿದ್ದಾರೆ.

ಅದೇನೇ ಇದ್ರೂ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಪಾಟ್ನಾ ಎಸ್​ಪಿಯನ್ನು ಮುಂಬೈನಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಇದು ಬಿಹಾರ ಪೊಲೀಸರಿಗೆ ಮುಂಬೈ ಪೊಲೀಸರು ಸಹಕಾರ ನೀಡುತ್ತಿಲ್ಲ ಅನ್ನೋ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ ಅಂತ ಹೇಳಲಾಗ್ತಿದೆ.

-masthmagaa.com

 

Contact Us for Advertisement

Leave a Reply