ಯುಕ್ರೇನ್ ಪುಡಿಗಟ್ಟುತ್ತಿದೆ ರಷ್ಯಾ!

masthmagaa.com:

ಯುಕ್ರೇನ್​ ಮತ್ತು ರಷ್ಯಾ ನಡುವೆ ಇಷ್ಟು ದಿನದಿಂದ ನಡೀತಿದ್ದ ಸಂಘರ್ಷ ಕೊನೆಗೂ ಯುದ್ಧವಾಗಿ ಪರಿವರ್ತನೆ ಆಗಿದೆ. ಎರಡು ದೇಶಗಳ ಸೇನೆಗಳು ಪರಸ್ಪರ ಎದುರು ಬದುರು ನಿಂತು ಹೊಡೆದಾಡೋಕೆ ಶುರು ಮಾಡಿದ್ದಾರೆ. ಇತ್ತೀಚೆಗಷ್ಟೇ ಯುಕ್ರೇನ್​ಗೆ ಸೇರಿದ ಡಾನೆಟ್ಸ್ಕ್​ ಮತ್ತು ಲುಹೆನ್ಸ್ಕ್​ ಪ್ರದೇಶಗಳನ್ನ ಸ್ವತಂತ್ರ ಅಂತ ಘೋಷಿಸಿದ್ದ ಪುಟಿನ್​, ಈಗ ಆ ಪ್ರದೇಶಗಳಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ರಷ್ಯಾ ಸೇನೆಯ ಸುಪ್ರೀಂ ಕಮಾಂಡರ್​ ಇನ್​ ಚೀಫ್​ ಆಗಿರೋ ಪುಟಿನ್​ ಕಡೆಯಿಂದ ಈ ಆದೇಶ ಬರ್ತಿದ್ದಂತೇ ರಷ್ಯಾ ಸೇನೆ ಯುಕ್ರೇನ್​ನಲ್ಲಿ ಆಪರೇಷನ್​ ಶುರು ಮಾಡ್ಕೊಂಡು ಬಿಟ್ಟಿದೆ. ಯುಕ್ರೇನ್​ ಸೇನಾ ನೆಲೆ, ಶಸ್ತ್ರಾಗಾರ, ಸರ್ಕಾರಿ ಕಟ್ಟಡ, ಏರ್​ಪೋರ್ಟ್​ಗಳನ್ನ ಗುರಿಯಾಗಿಸಿ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ತಮ್ಮ ಪ್ರದೇಶಗಳನ್ನ ಕಾಪಾಡಿಕೊಳ್ಳಲು ಯುಕ್ರೇನ್​ ಸೇನೆ ಕೂಡ ಪ್ರತಿದಾಳಿ ನಡೆಸ್ತಿದೆ. ಇದರೊಂದಿಗೆ ಎರಡು ಸೇನೆಗಳ ಮಧ್ಯೆ ಯುದ್ಧ ಆರಂಭವಾಗಿಬಿಟ್ಟಿದೆ. ಡಾನೆಟ್ಸ್ಕ್​​ ಮತ್ತು ಲುಹೆನ್ಸ್ಕ್​​ನ ಹಲವು ಕಡೆ ಭಾರಿ ಸ್ಫೋಟ, ಗುಂಡಿನ ಸದ್ದು ಕೇಳಿಸಿವೆ. ಯುಕ್ರೇನ್​ ರಾಜಧಾನಿ ಕ್ವೀವ್​ ಮತ್ತು ಮತ್ತೊಂದು ಪ್ರಮುಖ ನಗರವಾದ ಖಾರಿವ್​ನಲ್ಲಿದ್ದ ಮಿಲಿಟರಿ ಕಮಾಂಡ್​ ಸೆಂಟರ್​​ಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗ್ತಿದೆ. ರಷ್ಯಾದ 5 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನ ಯುಕ್ರೇನ್​ ಸೇನೆ ಹೊಡೆದುರುಳಿಸಿದೆ ಅಂತ ವರದಿಯಾಗಿದೆ. ಯುಕ್ರೇನ್​ ರಾಜಧಾನಿ ಕ್ವಿವ್​ನಲ್ಲೂ ಸ್ಫೋಟ ಸಂಭವಿಸಿದೆ. ಆದ್ರೆ ರಷ್ಯಾ ಹೆಚ್ಚಾಗಿ ದಾಳಿ ಮಾಡ್ತಿರೋದು ಯುಕ್ರೇನ್​ನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ. ದಕ್ಷಿಣದ ಒಡೆಸ್ಸಾ ಮತ್ತು ಮಾರಿವುಪೌಲ್​ನಂಥಾ ಬಂದರು ನಗರಗಳಲ್ಲಿ ರಷ್ಯಾ ತನ್ನ ಯೋಧರನ್ನ ಲ್ಯಾಂಡ್​ ಮಾಡಿಸಿ ಕಾರ್ಯಾಚರಣೆ ನಡೆಸ್ತಿದೆ. ಯುಕ್ರೇನ್​ನ ಉತ್ತರ ಭಾಗದಲ್ಲಿ ರಷ್ಯಾದ ಫ್ರೆಂಡ್​ ಬೆಲಾರುಸ್​​ ಇದೆ. ಇಲ್ಲೂ ದೊಡ್ಡ ಪ್ರಮಾಣದ ಸೇನೆ ನಿಯೋಜಿಸಿಕೊಂಡಿದೆ ರಷ್ಯಾ. ಈ ಬೆಲಾರುಸ್​​ ಗಡಿಗೆ ಹತ್ತಿರದಲ್ಲೇ ಯುಕ್ರೇನ್​ ರಾಜಧಾನಿ ಕ್ವೀವ್​ ಇದೆ. ಸೋ ಕ್ವೀವ್​ ಮೇಲೆ ಉತ್ತರದಿಂದ ದಾಳಿಯಾಗಿರೋ ಚಾನ್ಸಸ್​ ಇದೆ ಎನ್ನಲಾಗ್ತಿದೆ. ರಷ್ಯಾ ಸೇನೆಗೆ ಹೋಲಿಸಿದ್ರೆ ಯುಕ್ರೇನ್​​ ಸೇನೆ ತುಂಬಾ ಸಣ್ಣದು. ಅಲ್ಲದೆ ಯುಕ್ರೇನ್​ ಬಳಿ ಪರಮಾಣು ಶಸ್ತ್ರಾಸ್ತ್ರ ಕೂಡ ಇಲ್ಲ. ಹೀಗಾಗಿ ತನಗೆ ಸೇರಿದ ಡಾನೆಟ್ಸ್ಕ್​, ಲುಹೆನ್ಸ್ಕ್​ ಪ್ರದೇಶಗಳನ್ನ, ತನ್ನ ದೇಶವನ್ನ, ತನ್ನ ಪ್ರಜೆಗಳನ್ನ ರಕ್ಷಿಸಿಕೊಳ್ಳಲು ಯುಕ್ರೇನ್ ಭಾರಿ​ ಹರಸಾಸಹ ಪಡ್ತಿದೆ.

-masthmagaa.com

Contact Us for Advertisement

Leave a Reply