ತಾಲಿಬಾನಿಗಳ ಹೊಸ ಸರ್ಕಾರ ಹೇಗಿರುತ್ತೆ..? ಅವರು ಹೇಳಿದ್ದೇನು?

masthmagaa.com:

ಅಫ್ಘಾನಿಸ್ತಾನವನ್ನು ಕಂಟ್ರೋಲ್​​ಗೆ ತೆಗೆದುಕೊಂಡಿರೋ ತಾಲಿಬಾನಿಗಳು ಯಾವ ರೀತಿ ಸರ್ಕಾರ ರಚಿಸ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ. ಈ ಹಿಂದೆ 1996ರಲ್ಲಿ ಅಧಿಕಾರಕ್ಕೆ ಬಂದಾಗ ತಾಲಿಬಾನ್ ಸುಪ್ರೀಂ ಲೀಡರ್ ಆಗಿದ್ದ ಮುಲ್ಲಾ ಒಮರ್ ಅವರ ಕೈಲಿ ಕಂಪ್ಲೀಟ್ ಕಂಟ್ರೋಲ್ ಇತ್ತು. ಅವರ ಕೆಳಗಿದ್ದ ಸಮಿತಿ ಅಧ್ಯಕ್ಷರೊಂದಿಗೆ ಆಡಳಿತ ನಡೆಸ್ತಿತ್ತು. ಅದೇ ಮಾದರಿಯಲ್ಲಿ ಈ ಸಲವೂ ಸರ್ಕಾರ ರಚನೆಯಾಗೋ ಸಾಧ್ಯತೆ ಇದೆ ಅಂತ ತಾಲಿಬಾನ್ ನಾಯಕ ವಹೀದುಲ್ಲಾ ಹಶೀಮಿ ಹೇಳಿದ್ದಾರೆ. ಸಂದರ್ಶನವೊಂದ್ರಲ್ಲಿ ಮಾತನಾಡಿರೋ ಅವರು, ಸದ್ಯ ತಾಲಿಬಾನ್ ಸುಪ್ರೀಂ ಲೀಡರ್ ಆಗಿರೋ ಹೈಬತುಲ್ಲಾ ಅಖುಂಡ್​ಜಾದಾ ಸರ್ಕಾರದ ಕಂಪ್ಲೀಟ್ ಕಂಟ್ರೋಲ್ ಹೊಂದಲ್ಲಿದ್ದಾರೆ. ಅವರ ಕೆಳಗಿನ ಸ್ಥಾನದಲ್ಲಿ ಮೂವರಿದ್ದಾರೆ. ಮುಲ್ಲಾ ಒಮರ್ ಪುತ್ರ ಮೌಲವಿ ಯಾಕೂಬ್, ಸಿರಾಜುದ್ದೀನ್ ಹಕ್ಕಾನಿ ಮತ್ತು ಅಬ್ದುಲ್ ಘನಿ ಬರಾದರ್​.. ಇವರಲ್ಲಿ ಒಬ್ಬರು ಕೌನ್ಸಿಲ್ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯೋ ಸಾಧ್ಯತೆ ಇದೆ ಅಂತ ಹೇಳಿದ್ದಾರೆ. ತಾಲಿಬಾನ್ ಸರ್ಕಾರ ರಚನೆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಆದ್ರೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ಖಂಡಿತ ಇರೋದಿಲ್ಲ. ಯಾಕಂದ್ರೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನೆಲೆಯೇ ಇಲ್ಲ. ನಾವು ಸರ್ಕಾರ ರಚನೆ ಬಗ್ಗೆ ಚರ್ಚಿಸುತ್ತಿದ್ದೇವೇ ಹೊರತು, ಯಾವ ವಿಧದ ಸರ್ಕಾರ ತರಬೇಕು ಅಂತ ಚರ್ಚಿಸ್ತಿಲ್ಲ. ಯಾಕಂದ್ರೆ ಅದು ಶರಿಯಾ ಕಾನೂನಿನ ಸರ್ಕಾರ ಅನ್ನೋದು ಈಗಾಗಲೇ ಕ್ಲಿಯರ್ ಆಗಿದೆ. ಈ ವಾರಾಂತ್ಯದಲ್ಲಿ ಈ ಸಂಬಂಧ ಮಹತ್ವದ ಮಾತುಕತೆ ನಡೆಯಲಿದೆ ಅಂತ ಹೇಳಿದ್ದಾರೆ. ಇನ್ನು ದೇಶದ ಸೇನೆಯ ಬಗ್ಗೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದಲ್ಲಿದ್ದ ಯೋಧರು, ಪೈಲಟ್​​ಗಳನ್ನು ನಮ್ಮ ಸೇನೆಗೆ ಸೇರಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ. ನಮ್ಮ ಸದಸ್ಯರನ್ನೂ ಒಳಗೊಂಡಂತೆ ಒಂದು ಹೊಸ ನ್ಯಾಷನಲ್ ಫೋರ್ಸ್​ ರಚಿಸ್ತೀವಿ. ಕೆಲವೊಂದು ಬದಲಾವಣೆಗಳು, ಸುಧಾರಣೆಗಳನ್ನು ಕೈಗೊಳ್ತೀವಿ ಅಂತ ಹೇಳಿದ್ದಾರೆ. ಅದ್ರಲ್ಲೂ ಹಲವಾರು ಪೈಲಟ್​​ಗಳನ್ನು ಈಗಾಗಲೇ ಸಂಪರ್ಕಿಸಿದ್ದು, ಕೆಲಸಕ್ಕೆ ಬನ್ನಿ.. ನಿಮ್ಮ ಸಹೋದರರನ್ನು ಸೇರಿಕೊಳ್ಳಿ. ನಿಮ್ಮ ಸರ್ಕಾರವನ್ನು ಸೇರಿಕೊಳ್ಳಿ ಅಂತ ಮನವಿ ಮಾಡ್ತಿದ್ದೀವಿ ಅಂತ ಕೂಡ ವಹೀದುಲ್ಲಾ ಹಶೀಮಿ ಹೇಳಿದ್ದಾರೆ. ಬೇರೆ ದೇಶದ ಭೂಭಾಗದಲ್ಲಿ ಲ್ಯಾಂಡ್ ಆಗಿರೋ ಅಫ್ಘನಿಸ್ತಾನದ 22 ಯುದ್ಧ ವಿಮಾನ, 24 ಹೆಲಿಕಾಪ್ಟರ್​​ ಮತ್ತು ಸಾವಿರಾರು ಯೋಧರನ್ನು ವಾಪಸ್ ಕಳುಹಿಸಬೇಕು ಅಂತ ಹೇಳಿದ್ದಾರೆ.

ಈ ನಡುವೆ ಹಿಂದಿನ ಸರ್ಕಾರದಲ್ಲಿದ್ದ ಸರ್ಕಾರಿ ನೌಕರರಿಗೂ ಕೂಡ ಕೆಲಸಕ್ಕೆ ಮರಳುವಂತೆ ತಾಲಿಬಾನಿಗಳು ಒತ್ತಾಯಿಸ್ತಿದ್ದಾರೆ. ಮನೆ ಮನೆಗೆ ಹೋಗಿ ದೇಶದ ಆರ್ಥಿಕತೆಯನ್ನು ಹಳಿಗೆ ತರಬೇಕು. ಯಾವುದೇ ಭಯ ಇಲ್ಲದೆ ಕೆಲಸಕ್ಕೆ ಬನ್ನಿ ಅಂತ ಮನವಿ ಮಾಡ್ತಿದ್ದಾರೆ.

ಇನ್ನು ಮಹಿಳೆಯರಿಗೆ ಉದ್ಯೋಗ, ಶಿಕ್ಷಣಕ್ಕೆ ಅವಕಾಶ ಇದೆ ಅಂತ ಹೇಳಿದ್ದ ತಾಲಿಬಾನಿಗಳು ಈಗ ಅವೆಲ್ಲವನ್ನೂ ಧಾರ್ಮಿಕ ಚಿಂತಕರ ಸಮಿತಿ ನಿರ್ಧರಿಸುತ್ತೆ ಅಂತ ಹೇಳಿದೆ. ಮಹಿಳೆಯರು ಕೆಲಸಕ್ಕೆ ಹೋಗೋಕೆ, ಶಿಕ್ಷಣ ಪಡೆಯೋಕೆ ಅವಕಾಶ ನೀಡಬೇಕಾ..? ಮಹಿಳೆಯರು ಯಾವ ರೀತಿ ಬಟ್ಟೆ ಧರಿಸಬೇಕು.. ಅವರಿಗೆ ಯಾವೆಲ್ಲಾ ಹಕ್ಕು, ಸ್ಥಾನ ನೀಡಬೇಕು ಅನ್ನೋದನ್ನ ಸಮಿತಿಯೇ ನಿರ್ಧರಿಸುತ್ತೆ ಅಂತ ವಹೀದುಲ್ಲಾ ಹಶೀಮಿ ಹೇಳಿದ್ದಾರೆ.

ಇನ್ನು ನಿನ್ನೆ ತನ್ನನ್ನು ತಾನು ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಂತ ಘೋಷಿಸಿಕೊಂಡಿದ್ದ ಅಮರುಲ್ಲಾ ಸಲೇಹ್​​​​, ಪಾಕಿಸ್ತಾನಕ್ಕೆ ತಾಂಟ್ ಕೊಟ್ಟಿದ್ದಾರೆ. ಎಲ್ಲಾ ದೇಶಗಳು ಕಾನೂನಿನ ಆಡಳಿತಕ್ಕೆ ಗೌರವಿಸಬೇಕು. ಹಿಂಸಾಚಾರಕ್ಕಲ್ಲ. ಅಫ್ಘಾನಿಸ್ತಾನ ತುಂಬಾ ದೊಡ್ಡದು.. ಹೀಗಾಗಿ ಪಾಕಿಸ್ತಾನಕ್ಕೆ ನುಂಗೋಕೂ ಆಗಲ್ಲ. ತಾಲಿಬಾನಿಗಳಿಗೆ ಆಳಕ್ಕೂ ಆಗಲ್ಲ.. ಅಫ್ಘಾನಿಸ್ತಾನದ ಜನ ತಮ್ಮ ಇತಿಹಾಸದಲ್ಲಿ ತಾಲಿಬಾನಿಗಳಿಗೆ ತಲೆಭಾಗಿದ್ವಿ ಅನ್ನೋದನ್ನ ಉಳಿಯಲು ಬಿಡಬೇಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply