masthmagaa.com:

ಕರ್ನಾಟಕ ಸೇರಿದಂತೆ ಕೊರೋನಾ ಹಾವಳಿ ಹೆಚ್ಚಿರುವ 7 ರಾಜ್ಯಗಳಲ್ಲಿ 1 ಅಥವಾ 2 ದಿನದ ಲೋಕಲ್ ಲಾಕ್​ಡೌನ್ ಜಾರಿ ಮಾಡೋ ಬಗ್ಗೆ ಯೋಚನೆ ಮಾಡಿ ಅಂತ ಪ್ರಧಾನಿ ಮೋದಿ ಆಯಾ ರಾಜ್ಯದ ಸಿಎಂಗಳಿಗೆ ಸೂಚಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಜಾರಿಯಾಗುತ್ತಾ ಅನ್ನೋ ಅನುಮಾನ ಮೂಡಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್, ಇಡೀ ರಾಜ್ಯದಲ್ಲಿ ಲಾಕ್​ಡೌನ್ ಹೇರುವ ಪ್ರಶ್ನೆಯೇ ಇಲ್ಲ. ಮೈಕ್ರೋ ಕಂಟೈನ್​ಮೆಂಟ್​ ಝೋನ್​ಗಳಲ್ಲಿ ಲೋಕಲ್​ ಲಾಕ್​ಡೌನ್​ ಬಗ್ಗೆ ಯೋಚಿಸಿ ಅಂತ ಪ್ರಧಾನಿ ಸೂಚಿಸಿದ್ದಾರೆ. ಮೈಕ್ರೋ ಕಂಟೈನ್​ಮೆಂಟ್​ ಝೋನ್ ಅಂದ್ರೆ ಸೋಂಕಿತರ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಬಂಧ ಹೇರುವುದು. ಆದ್ರೆ ಇಡೀ ಬೆಂಗಳೂರು ಅಥವಾ ಇಡೀ ರಾಜ್ಯವನ್ನು ಲಾಕ್​ಡೌನ್ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಅಂತ ಹೇಳಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ದೆಹಲಿ ಮತ್ತು ಪಂಜಾಬ್ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು. ಇದರಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತು ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಕೂಡ ಭಾಗವಹಿಸಿದ್ದರು.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ದೇಶದಲ್ಲಿ 700ಕ್ಕೂ ಹೆಚ್ಚು ಜಿಲ್ಲೆಗಳಿವೆ. ಅದ್ರಲ್ಲಿ 7 ರಾಜ್ಯಗಳ 60 ಜಿಲ್ಲೆಗಳಲ್ಲೇ ಕೊರೋನಾ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ರಾಜ್ಯದ ಮುಖ್ಯಮಂತ್ರಿಗಳು ಕೊರೋನಾ ಹಾವಳಿ ಹೆಚ್ಚಾಗಿರುವ ಜಿಲ್ಲೆಯ ಒಂದೊಂದು ತಾಲೂಕಿನ ತಹಶೀಲ್ದಾರ್ ಜೊತೆಗೆ ಒಂದೊಂದು ದಿನ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಬೇಕು. ಇದರಿಂದ ಪರಿಸ್ಥಿತಿಯ ಗಂಭೀರತೆ ಕೆಳ ಅಧಿಕಾರಿಗಳವರೆಗೂ ತಲುಪುತ್ತದೆ. ಇದರಿಂದ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. ಇದಲ್ಲದೆ ಮೈಕ್ರೋ ಕಂಟೈನ್​ಮೆಂಟ್​ ಝೋನ್​ಗಳಲ್ಲಿ 1 ಅಥವಾ 2 ದಿನಗಳ ಲೋಕಲ್ ಲಾಕ್​ಡೌನ್​ ಹೇರುವ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಯೋಚಿಸಬೇಕು. ಎಸ್​ಡಿಆರ್​ಎಫ್​ ನಿಧಿಯಿಂದ ರಾಜ್ಯಗಳು ಈ ಹಿಂದೆ ಶೇ. 35ರಷ್ಟು ಹಣವನ್ನು ತೆಗೆಯಬಹುದಿತ್ತು. ಇದೀಗ ಆ ಮಿತಿಯನ್ನು ಶೇ. 50ಕ್ಕೆ ಏರಿಸಲಾಗಿದೆ. ಇದರಿಂದ ಕೊರೋನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ನೆರವಾಗಲಿದೆ. ಇದರ ಜೊತೆಗೆ ಹೆಚ್ಚೆಚ್ಚು ಕೊರೋನಾ ಟೆಸ್ಟ್, ಟ್ರೇಸಿಂಗ್, ಟ್ರೀಟ್​ಮೆಂಟ್​ಗೆ ಒತ್ತು ನೀಡಬೇಕು’ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply