ನಾರಾಯಣ್ ರಾಣೆ ಕೇಸ್: ಉದ್ಧವ್ ಠಾಕ್ರೆಗೆ ಬಿಜೆಪಿ ತಿರುಗೇಟು!

masthmagaa.com:

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಹೊಡೆಯೋ ಮಾತಾಡಿ ಅರೆಸ್ಟ್ ಆಗಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆಗೆ ಜಾಮೀನು ಸಿಕ್ಕಿದೆ. ನಿನ್ನೆ ಮಧ್ಯಾಹ್ನ ಇವರನ್ನು ಅರೆಸ್ಟ್ ಮಾಡಿದ್ದ ಪೊಲೀಸರು ರಾತ್ರಿ ರಾಯಗಢ ಕೋರ್ಟ್​​ ಮುಂದೆ ಹಾಜರುಪಡಿಸಿದ್ರು. ಈ ವೇಳೆ ರಾಣೆ ಬಂಧನ ನ್ಯಾಯಸಮ್ಮತವಾಗೇ ಇದೆ ಎಂದ ಕೋರ್ಟ್​​, ಇನ್ಮುಂದೆ ಇಂಥಹ ತಪ್ಪು ಮಾಡಬಾರದು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ಈ ಪ್ರಕರಣ ಸಂಬಂಧ ಯಾರಿಗೂ ಬೆದರಿಕೆ ಹಾಕಬಾರದು ಅಂತ ಹೇಳಿದೆ. ಜೊತೆಗೆ 15 ಸಾವಿರ ರೂಪಾಯಿ ಬಾಂಡ್ ಮತ್ತು ಆಗಸ್ಟ್ 31, ಸೆಪ್ಟೆಂಬರ್ 13ರಂದು ಕೋರ್ಟ್​ ಮುಂದೆ ಹಾಜರಾಗಬೇಕು ಅಂತ ಷರತ್ತು ವಿಧಿಸಿ ಜಾಮೀನು ನೀಡಿದೆ. ಇದ್ರ ಬೆನ್ನಲ್ಲೇ ನಾಶಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್​​ ಸಂಬಂಧ ಸೆಪ್ಟೆಂಬರ್ 2ರಂದು ಪೊಲೀಸ್ ಠಾಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಅಂದಹಾಗೆ ರಾಯಗಢದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ್ದ ನಾರಾಯಣ ರಾಣೆ, ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣದ ವೇಳೆ ಸಿಎಂ ಉದ್ಧವ್ ಠಾಕ್ರೆಗೆ ದೇಶ ಸ್ವತಂತ್ರಗೊಂಡ ಇಸವಿ ಕನ್​ಫ್ಯೂಸ್ ಆಯ್ತು. ನಾನೇನಾದ್ರೂ ಅಲ್ಲಿ ಇದ್ದಿದ್ರೆ ಕೆನ್ನೆಗೆ ಬಾರಿಸ್ತಿದ್ದೆ ಅಂತ ಹೇಳಿದ್ರು.

ಇನ್ನು 2018ರಲ್ಲಿ ಉದ್ಧವ್ ಠಾಕ್ರೆ ಮಾತನಾಡಿದ್ದ ವಿಡಿಯೋವೊಂದನ್ನೇ ಬಿಜೆಪಿ ತಿರುಗುಬಾಣವಾಗಿ ಪ್ರಯೋಗಿಸಿದೆ. ಈ ವಿಡಿಯೋದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾತ್ ಬಗ್ಗೆ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ. ಯೋಗಿ ಆದಿತ್ಯನಾತ್ ಹೇಗೆ ಸಿಎಂ ಆಗಲು ಸಾಧ್ಯ..? ಅವರು ಎಲ್ಲವನ್ನು ಬಿಟ್ಟು ಗುಹೆಯಲ್ಲಿ ಹೋಗಿ ಕೂರಬೇಕು. ಸಿಎಂ ಕುರ್ಚಿಯಲ್ಲಿ ಕೂತು ಯೋಗಿ ಅಂತ ಹೇಳಿಕೊಳ್ತಾರೆ. ಆದ್ರೆ ಶಿವಾಜಿ ಮಹಾರಾಜರ ಪ್ರತಿಮೆಗೆ ಹೂವಿನ ಹಾರ ಹಾಕುವಾಗ ಚಪ್ಪಲಿ ಧರಿಸಿದ್ರು. ಅದೇ ಚಪ್ಪಲಿಯಿಂದ ಅವರನ್ನು ಹೊಡೆಯಬೇಕು ಅನ್ನಿಸಿತು. ಶಿವಾಜಿ ಮಹಾರಾಜರ ಮುಂದೆ ನಿಲ್ಲಲು ನೀವ್ಯಾರು ಅಂತ ಪ್ರಶ್ನಿಸಿರೋದನ್ನು ಆ ವಿಡಿಯೋದಲ್ಲಿ ನೋಡಬಹುದು..

ಕೇಂದ್ರ ಸಚಿವ ನಾರಾಯಣ ರಾಣೆ ಕೆನ್ನೆಗೆ ಹೊಡಿತಿದ್ದೆ ಅಂದ್ರೆ, ಉದ್ಧವ್ ಠಾಕ್ರೆ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು ಅಂತ ಹೇಳಿದ್ದಾರೆ. ಎಲ್ಲರೂ ಒಂದೇ.. ಈ ರಾಜಕೀಯದಲ್ಲಿ ಎಲ್ಲರ ನಾಲಗೆನೂ ಉದ್ದನೇ ಅಂತ ಅನ್ನಿಸುತ್ತೆ.

-masthmagaa.com

Contact Us for Advertisement

Leave a Reply