ಉತ್ತರಾಖಂಡ್​​ನಲ್ಲಿ ಭಾರಿ ಮಳೆ! 22 ಮಂದಿ ಬಲಿ

masthmagaa.com:

ಕೇರಳವನ್ನು ಹಿಂಡಿ ಹಿಪ್ಪೆ ಮಾಡಿದ ಮಳೆರಾಯ ಈಗ ಉತ್ತರಾಖಂಡ್​ ಮೇಲೆ ವಕ್ರ ದೃಷ್ಟಿ ಬೀರಿದ್ದಾನೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ನೀರಿನಿಂದ ಆವೃತವಾಗಿವೆ. ಸೇತುವೆಗಳು ನಾಶವಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಸ್ತೆಯಲ್ಲಿ ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದ್ದು, ನಡ್ಕೊಂಡು ಹೋಗೋದು ಕೂಡ ಕಷ್ಟವಾಗಿದೆ. ನೈನಿತಾಲ್​​ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ನದಿ ನೀರಿನ ಮಟ್ಟ ಜಾಸ್ತಿಯಾಗಿದೆ. ನೇಪಾಳ ಮೂಲದ ಸೇರಿದಂತೆ ಈವರೆಗೆ 22 ಮಂದಿ ಪ್ರಾಣ ಕಳ್ಕೊಂಡಿದ್ದಾರೆ ಅಂತ ಸರ್ಕಾರ ಮಾಹಿತಿ ನೀಡಿದೆ. ಇನ್ನೂ ಕೂಡ ಕೆಲವು ಪ್ರವಾಸಿಗರು ಮತ್ತು ಸ್ಥಳೀಯರು ಅಪಾಯಕಾರಿ ಸ್ಥಳಗಳಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಕಾರ್ಯಾಚರಣೆ ನಡೀತಾ ಇದೆ. 10 ಎನ್​ಡಿಆರ್​ಎಫ್ ತಂಡಗಳು ಮತ್ತು ಮೂರು ಹೆಲಿಕಾಪ್ಟರ್​​ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಕಳೆದ 24 ಗಂಟೆಗಳಲ್ಲಿ 200 ಮಿಲಿಮೀಟರ್​ಗೂ ಹೆಚ್ಚು ಮಳೆಯಾಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಕರೆ ಮಾಡಿ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಈ ನಡುವೆ ಮಳೆಯ ನಡುವೆ ಪ್ರವಾಹದಲ್ಲಿ ಆನೆಮರಿಯೊಂದು ಸಿಲುಕಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಬಂದು ರಕ್ಷಿಸಿದ್ರು.

-masthmagaa.com

Contact Us for Advertisement

Leave a Reply