masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಏಳುತ್ತಿರೋ ಹಿನ್ನೆಲೆ ಇವತ್ತು ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ರು. ಪ್ರಧಾನಿ ಮೋದಿ ಏನಂದ್ರು ಅನ್ನೋದ್ರ ವಿವರ ಇಲ್ಲಿದೆ ನೋಡಿ..

‘ಕೊರೋನಾ ಪೀಡಿತ ದೇಶಗಳಲ್ಲಿ ಹೆಚ್ಚಿನ ದೇಶಗಳು ಕೊರೋನಾದ ಹಲವು ಅಲೆಗಳನ್ನ ಎದುರಿಸಬೇಕಾಯ್ತು. ನಮ್ಮ ದೇಶದಲ್ಲೂ ಕೆಲವೊಂದು ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಢೀರ್ ಏರಿಕೆಯಾಗಿದೆ. ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಪಾಸಿಟಿವಿಟಿ ರೇಟ್ ಜಾಸ್ತಿ ಇದೆ. ಕೊರೋನಾ ಕೇಸಸ್​ ಕೂಡ ಜಾಸ್ತಿಯಾಗ್ತಿದೆ. ಇಲ್ಲಿವರೆಗೆ ಕೊರೋನಾದಿಂದ ಬಚಾವ್ ಆಗಿದ್ದ, ಸೇಫ್ ಝೋನ್ ಎನಿಸಿಕೊಂಡಿದ್ದ ಜಿಲ್ಲೆಗಳಲ್ಲಿ ಕೊರೋನಾ ಜಾಸ್ತಿಯಾಗ್ತಿದೆ. ಕಳೆದ ಕೆಲ ವಾರಗಳಿಂದ 70 ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ 150 ಪರ್ಸೆಂಟ್ ಏರಿಕೆಯಾಗಿದೆ. ಇದನ್ನ ನಾವು ಇಲ್ಲಿಗೆ ನಿಲ್ಲಿಸದಿದ್ರೆ, ಇಡೀ ದೇಶವ್ಯಾಪಿ ಕೊರೋನಾ ಸ್ಫೋಟಗೊಳ್ಳುವ ಪರಿಸ್ಥಿತಿ ಬರಬಹುದು. ಮೇಲಕ್ಕೇಳುತ್ತಿರೋ ಕೊರೋನಾದ ಎರಡನೇ ಅಲೆಯನ್ನ ಕೂಡಲೇ ತಡೆಯಬೇಕು. ಇದಕ್ಕಾಗಿ ನಾವು ಫಾಸ್ಟಾಗಿ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕು. ಕೆಲವೊಂದು ಏರಿಯಾಗಳಲ್ಲಿ ಮಾತ್ರ ಯಾಕೆ ಕೊರೋನಾ ಪರೀಕ್ಷೆ ಕಮ್ಮಿಯಾಗ್ತಿದೆ ಅನ್ನೋದನ್ನ ಯೋಚಿಸಬೇಕು. ಕೆಲವೊಂದು ಏರಿಯಾಗಳಲ್ಲಿ ಮಾತ್ರ ವ್ಯಾಕ್ಸಿನೇಷನ್ ಯಾಕೆ ಕಮ್ಮಿಯಾಗ್ತಿದೆ? ಬಹುಶಃ ಇದು ಗುಡ್​ ಗವರ್ನೆನ್ಸ್​ಗೆ ಪರೀಕ್ಷಾ ಸಮಯ ಕೂಡ ಹೌದು. ಕೊರೋನಾ ವಿರುದ್ಧ ಹೋರಾಡಿದ ಅನುಭವ, ಆತ್ಮವಿಶ್ವಾಸ ನಮಗಿದೆ. ಆದ್ರೆ ನಮ್ಮ ಈ ಆತ್ಮವಿಶ್ವಾಸ ಓವರ್ ಕಾನ್ಫಿಡೆನ್ಸ್ ಆಗಬಾರದು. ಕೊರೋನಾ ವಿರುದ್ಧದ ನಮ್ಮ ಯಶಸ್ಸು ನಿರ್ಲಕ್ಷ್ಯ ಆಗಬಾರದು. ಅಟ್​ ದಿ ಸೇಮ್​ ಟೈಂ ಜನ ಪ್ಯಾನಿಕ್ ಆಗದಂತೆಯೂ ನೋಡಿಕೊಳ್ಳಬೇಕು. ನಾವು ಪ್ರೊ ಆ್ಯಕ್ಟಿವ್ ಆಗಬೇಕು. ಮೈಕ್ರೋ ಕಂಟೈನ್​ಮೆಂಟ್​ ಝೋನ್​​ಗಳ ಬಗ್ಗೆ ಸ್ಥಳೀಯ ಆಡಳಿತ ಚಿಂತಿಸಬೇಕು. ಕೊರೋನಾವನ್ನ ಅಲ್ಲೇ ನಿಯಂತ್ರಣ ಮಾಡೋ ಪ್ರಯತ್ನ ಮಾಡಬೇಕು. ಕೊರೋನಾ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಟೆಸ್ಟ್, ಟ್ರಾಕ್, ಟ್ರೀಟ್​ ಬಗ್ಗೆಯೂ ಗಂಭೀರತೆ ಬರಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನ ಆದಷ್ಟು ಬೇಗ ಪತ್ತೆಹಚ್ಚಬೇಕು. ಸೋಂಕಿತರನ್ನ ತಕ್ಷಣ ಪತ್ತೆಹಚ್ಚಲು ಹೆಚ್ಚೆಚ್ಚು RT-PCR​ ಟೆಸ್ಟ್ ಮಾಡಬೇಕು. RT-PCR ಟೆಸ್ಟ್​ಗಳನ್ನ 70 ಪರ್ಸೆಂಟ್​ ಮೇಲಿರುವಂತೆ ನೋಡಿಕೊಳ್ಳಬೇಕು. ಟೈಯರ್ 2 ಮತ್ತು ಟೈಯರ್ 3 ನಗರಗಳಿಗೂ ಈಗ ಕೊರೋನಾ ಹರಡಿದೆ. ಕಳೆದ ವರ್ಷ ಹೀಗಿರಲಿಲ್ಲ. ಸಣ್ಣ ಸಣ್ಣ ನಗರಗಳಲ್ಲಿ ಹೆಚ್ಚೆಚ್ಚು ಕೊರೋನಾ ಟೆಸ್ಟ್ ಮಾಡಬೇಕು. ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅವರ ಟ್ರಾವೆಲ್​ ಹಿಸ್ಟರಿಯನ್ನ ಇಟ್ಟುಕೊಳ್ಳಬೇಕು. ವಿದೇಶದಿಂದ ಬರುವವರ ಸಂಪರ್ಕಿತರನ್ನ ಪತ್ತೆಹಚ್ಚಲು ನಿಯಮಗಳನ್ನ ಪಾಲಿಸಬೇಕು. ನಿಮ್ಮ ರಾಜ್ಯದಲ್ಲಿ ರೂಪಾಂತರಗೊಳ್ಳುತ್ತಿರುವ ಕೊರೋನಾ ಬಗ್ಗೆ ತಿಳಿದುಕೊಳ್ಳಲು ಸ್ಯಾಂಪಲ್​ಗಳನ್ನ ಜೀನೋಮ್​ ಸೀಕ್ವೆನ್ಸಿಂಗ್​ಗೆ ಕಳಿಸಿಕೊಡಬೇಕು. ಈಗ ನಮ್ಮ ಬಳಿ ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಅನ್ನೋ ದೊಡ್ಡ ಅಸ್ತ್ರವಿದೆ. ಹೀಗಾಗಿ ವ್ಯಾಕ್ಸಿನೇಷನ್ ಹೆಚ್ಚಿಸಬೇಕು. ಲಸಿಕಾ ಕೇಂದ್ರಗಳನ್ನ ಹೆಚ್ಚಿಸಬೇಕು. ಲಸಿಕೆ ವೇಸ್ಟ್ ಆಗದಂತೆ ಎಲ್ಲಾ ರಾಜ್ಯಗಳು ನೋಡಿಕೊಳ್ಳಬೇಕು. ಯಾವ ಲಸಿಕೆ ಮೊದಲು ಬರುತ್ತೋ ಅದನ್ನೇ ಮೊದಲು ಬಳಸಬೇಕು. ಇಲ್ಲಾಂದ್ರೆ ಹೊಸ ಲಸಿಕೆ ಬಂತು ಅಂತ ಹಳೆ ಲಸಿಕೆ ಬಿಟ್ಟು ಹೊಸ ಲಸಿಕೆ ಹಾಕ್ತಾರೆ. ಆಗ ಹಳೆ ಲಸಿಕೆ ಅಲ್ಲೇ ಉಳಿದು, ಅದರ ಎಕ್ಸ್​ಪೈರಿ ಡೇಟ್ ಮುಗಿದು ಅದು ಹಾಳಾಗುತ್ತೆ. ಹಾಗೆ ಆಗದಂತೆ ನೋಡಿಕೊಳ್ಳಿ. ಇದುವರೆಗೆ ಕೊರೋನಾ ವಿರುದ್ಧ ನಾವು ಗಳಿಸಿದ ಯಶಸ್ಸು ನಮ್ಮೆಲ್ಲರ ಸಾಮೂಹಿಕ ಹೋರಾಟವಾಗಿತ್ತು. ಈಗಲೂ ಅಷ್ಟೇ ನಮ್ಮ ಸಾಮೂಹಿಕ ಪ್ರಯತ್ನ ಮತ್ತು ಹೋರಾಟದ ಪ್ರತಿಫಲ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಈ ಪರಿಸ್ಥಿತಿಯಿಂದ ಹೊರಬರಬೇಕು. ಇಲ್ಲಾಂದ್ರೆ ಈ ಪರಿಸ್ಥಿತಿ ಎರಡು ವರ್ಷ, ಮೂರು ವರ್ಷ ಮುಂದುವರಿಯಬಹುದು. ಕೊರೋನಾದಲ್ಲಿ ಕಾಣಿಸಿಕೊಂಡಿರೋ ಬದಲಾವಣೆ… ಅಂದ್ರೆ ಎರಡನೇ ಅಲೆಯನ್ನ ನಿಗ್ರಹಿಸುತ್ತೇವೆ ಅನ್ನೋ ವಿಶ್ವಾಸ ಇದೆ. ಆಸ್ಪತ್ರೆಗಳ ಬಗ್ಗೆ ಕೆಲ ರಾಜ್ಯಗಳು ಪ್ರಶ್ನೆ ಮಾಡಿವೆ. ಅದನ್ನ ಸಂಜೆಯೊಳಗೆ ಪಟ್ಟಿ ಮಾಡಿ ನನಗೆ ಕಳುಹಿಸಿ. ಏನು ಮಾಡಬಹುದು ಅಂತ ನನ್ನ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಸಮಸ್ಯೆ ಇದ್ರೆ ಅದನ್ನ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply