ಧಾರವಾಡದಲ್ಲಿ ಮತ್ತೊಂದು ಕೊರೋನಾ ಕೇಸ್​.. ವಿದೇಶದಿಂದ ಬಂದವನಿಗೆ ಸೋಂಕು..!

masthmagaa.com:

ವಿದೇಶದಿಂದ ಧಾರವಾಡಕ್ಕೆ ಬಂದಿದ್ದ 33 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ ಅಂತ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ವಿದೇಶದಿಂದ ಆಗಮಿಸಿದ್ದ ಈ ವ್ಯಕ್ತಿಯು ಮಾರ್ಚ್​​ 12ರಂದು ಧಾರವಾಡ ನಗರಕ್ಕೆ ಆಗಮಿಸಿದ್ದರು. ಕೊರೋನಾ ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾರ್ಚ್​ 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನ ತಪಾಸಣೆಗಾಗಿ ಶಿವಮೊಗ್ಗದ ವಿಡಿಆರ್​ಎಲ್​ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿ ಕೊರೋನಾ ಪಾಸಿಟಿವ್ ಅಂತ ಬಂದಿದೆ.

ಸದ್ಯ ಕೊರೋನಾ ವೈರಸ್ ತಗುಲಿರುವ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಧಾರವಾಡದ ಹೊಸಯಲ್ಲಾಪುರ ಸುತ್ತಮುತ್ತ ನಿಯಮಾನುಸಾರ ಸರ್ವೆ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನ ನಿರ್ಬಂಧಿಸಲಾಗಿದೆ. ಜೊತೆಗೆ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ.

-masthmagaa.com

Contact Us for Advertisement

Leave a Reply