10 ತಿಂಗಳು ಕೊರೋನಾ..46 ಬಾರಿ ಪಾಸಿಟಿವ್​..7 ಸಲ ಆಸ್ಪತ್ರೆಗೆ ದಾಖಲು!

masthmagaa.com:

ಇದೀಗ ವ್ಯಕ್ತಿಯೊಬ್ಬರು ನಿರಂತರವಾಗಿ 10 ತಿಂಗಳ ಕಾಲ ಕೊರೋನಾದಿಂದ ಬಳಲಿರೋ ಪ್ರಕರಣ ಬೆಳಕಿಗೆ ಬಂದಿದೆ. ಪಶ್ಚಿಮ ಇಂಗ್ಲೆಂಡ್​​ನ ಬ್ರಿಸ್ಟಲ್​ನಲ್ಲಿರೋ 72 ವರ್ಷದ ಡೇವ್ ಸ್ಮಿತ್​​ಗೆ ಕಳೆದ 10 ತಿಂಗಳಲ್ಲಿ 46 ಬಾರಿ ಕೊರೋನಾ ಪಾಸಿಟಿವ್ ಬಂದಿದ್ದು, 7 ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ನಾನು ಬದುಕೋದೇ ಇಲ್ಲ ಅಂತ ಭಾವಿಸಿದ್ದೆ. ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಕುಟುಂಬಸ್ಥರನ್ನು ಕರೆಸಿ, ಎಲ್ಲರೊಂದಿಗಿನ ವಿವಾದ ಬಗೆಹರಿಸಿಕೊಂಡು ಗುಡ್​ ಬೈ ಕೂಡ ಹೇಳಿಯಾಗಿತ್ತು ಅಂತ ಹೇಳಿದ್ದಾರೆ. ಪತ್ನಿ ಲಿಂಡಾ ಕೂಡ ಡೇವ್ ಸ್ಮಿತ್ ಜೊತೆಗೇ ಕ್ವಾರಂಟೈನ್​​ಗೆ ಒಳಗಾಗಿದ್ರು. ಆ ಕ್ಷಣಗಳನ್ನು ನೆನೆದ ಲಿಂಡಾ ಕೂಡ, ಹಲವು ಬಾರಿ ಡೇವ್ ಸ್ಮಿತ್ ಈ ಕೊರೋನಾ ಗೆದ್ದು ಬರ್ತಾರೆ ಅಂತ ನಾವು ಭಾವಿಸಿಯೇ ಇರಲಿಲ್ಲ. ಹತ್ತತ್ರ ಒಂದು ವರ್ಷದ ಈ ಸಮಯ ನಮ್ಮ ಪಾಲಿಗೆ ನರಕವಾಗಿತ್ತು ಅಂತ ಹೇಳಿದ್ದಾರೆ. ಇನ್ನು ಬ್ರಿಸ್ಟಲ್ ಯುನಿವರ್ಸಿಟಿಯ ಇನ್ಫೆಕ್ಶಿಯಸ್ ಡಿಸೀಸ್​ ಕನ್ಸಲ್ಟೆಂಟ್ ಆಗಿರೋ ಎಡ್ ಮೊರಾನ್​ ಮಾತನಾಡಿ, ಈ 10 ತಿಂಗಳ ಅವಧಿಯಲ್ಲಿ ನಿರಂತರವಾಗಿ ಡೇವ್ ಸ್ಮಿತ್ ತನ್ನ ದೇಹದಲ್ಲಿ ಜೀವಂತ ಕೊರೋನಾ ವೈರಾಣುವನ್ನು ಹೊಂದಿದ್ದರು ಅಂತ ಹೇಳಿದ್ಧಾರೆ. ಅಂದ್ರೆ ಈ ಅವಧಿಯಲ್ಲಿ ಕೊರೋನಾ ವೈರಾಣು ಡೇವ್ ಸ್ಮಿತ್ ಅವರ ದೇಹದಲ್ಲಿ ನಿರಂತರವಾಗಿ ಹಾವಳಿ ಇಡುತ್ತಲೇ ಇತ್ತು. ನಂತರ ಕಾಕ್ಟೇಲ್ ಆಫ್ ಸಿಂಥೆಟಿಕ್ ಆ್ಯಂಟಿಬಾಡೀಸ್​ ಟ್ರೀಟ್ಮೆಂಟ್ ನೀಡಲಾಯ್ತು. ಇದಾದ 45 ದಿನಗಳ ಬಳಿಕ ಡೇವ್ ಸ್ಮಿತ್​​ಗೆ ಮತ್ತೆ ಟೆಸ್ಟ್​ ಮಾಡಿಸಿದಾಗ ಮೊದಲ ಬಾರಿಗೆ ನೆಗೆಟಿವ್ ರಿಪೋರ್ಟ್​ ಬಂತು. ಅಂದ್ರೆ ಕೊರೋನಾ ಬಂದ 305 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್​ನಲ್ಲಿ ನೆಗೆಟಿವ್ ರಿಪೋರ್ಟ್​ ಬಂದಿತ್ತು. ಅಂದಹಾಗೆ ಈ ಕಾಕ್ಟೇಲ್ ಆಫ್ ಸಿಂಥೆಟಿಕ್ ಆ್ಯಂಟಿಬಾಡೀಸ್​ ಅನ್ನೋ ಟ್ರೀಟ್ಮೆಂಟ್​ನ್ನು ಅಮೆರಿಕದ ಬಯೋಟೆಕ್ ಸಂಸ್ಥೆ ರೀಜೆನೆರಾನ್​​​ ಅಭಿವೃದ್ಧಿಪಡಿಸಿದೆ. ಆದ್ರೆ ಇದರ ಬಳಕೆಗೆ ಯುನೈಟೆಡ್ ಕಿಂಗ್​ಡಮ್​​​​ನಲ್ಲಿ ಅನುಮತಿ ಇಲ್ಲ. ಆದ್ರೂ ಕೂಡ ದೀರ್ಘಕಾಲದಿಂದ ಕೊರೋನಾದಿಂದ ಬಳಲುತ್ತಿದ್ದ ಡೇವ್ ಸ್ಮಿತ್​​ಗೆ ಸಹಾನುಭೂತಿಯ ಆಧಾರದ ಮೇಲೆ ಚಿಕಿತ್ಸೆ ನೀಡಲಾಗಿತ್ತು. ಇದ್ರಿಂದ ನನ್ನ ಜೀವವನ್ನು ನನಗೆ ವಾಪಸ್ ಕೊಟ್ಟಂಗೆ ಆಯ್ತು ಅಂತ ಡೇವ್ ಸ್ಮಿತ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply