masthmagaa.com:

ಚೀನಾದ ವುಹಾನ್​ನಲ್ಲಿ ಕೊರೋನಾ ಸೋಂಕು ತಗುಲಿ ಚೇತರಿಸಿಕೊಂಡ ಬಹುತೇಕರ ಶ್ವಾಸಕೋಶಕ್ಕೆ ಹಾನಿಯಾಗಿದೆ, ಕೆಲವರಿಗಂತೂ ಎರಡನೇ ಸಲ ಸೋಂಕು ತಗುಲಿ ಕ್ವಾರಂಟೈನ್​ನಲ್ಲಿ ಇದ್ದಾರೆ ಅಂತ ಅಧ್ಯಯನವೊಂದು ತಿಳಿಸಿದೆ. ವುಹಾನ್ ಯುನಿವರ್ಸಿಟಿಯ ಝೋಂಗ್​ನಾನ್​ ಆಸ್ಪತ್ರೆಯ ತಂಡ ಈ ಅಧ್ಯಯನ ನಡೆಸಿದೆ.

ಏಪ್ರಿಲ್​ನಲ್ಲಿ ಆರಂಭಿಸಿದ ಈ ಅಧ್ಯಯನದ ಮೊದಲ ಹಂತ ಜುಲೈನಲ್ಲಿ ಪೂರ್ಣಗೊಂಡಿದೆ. ಇದರ ಪ್ರಕಾರ ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ. 90ರಷ್ಟು ಜನರ ಶ್ವಾಸಕೋಶವು ಈಗಲೂ  ಹಾನಿಗೊಳಗಾದ ಸ್ಥಿತಿಯಲ್ಲೇ ಇದೆ. ಅಂದ್ರೆ ಆರೋಗ್ಯವಂತರಿಗೆ ಹೋಲಿಸಿದ್ರೆ ಇವರ ಶ್ವಾಸಕೋಶದ ವೆಂಟಿಲೇಶನ್ ಮತ್ತು ಗ್ಯಾಸ್​ ಎಕ್ಸ್​ಚೇಂಜ್ ಕಾರ್ಯವು ಇನ್ನೂ ಚೇತರಿಸಿಕೊಂಡಿಲ್ಲ. ಅಲ್ಲದೆ ಶೇ. 5ರಷ್ಟು ಜನರಿಗೆ ಮತ್ತೆ ಸೋಂಕು ತಗುಲಿ ಕ್ವಾರಂಟೈನ್​ನಲ್ಲಿ ಇದ್ದಾರೆ ಅಂತ ಅಧ್ಯಯನ ವರದಿ ಮಾಹಿತಿ ನೀಡಿದೆ.

ಅಧ್ಯಯನ ತಂಡವು ರೋಗಿಗಳಿಗೆ 6 ನಿಮಿಷ ನಡೆದಾಡುವ ಪರೀಕ್ಷೆ ಮಾಡಿತು. ಈ ವೇಳೆ ಬೇರೆ ರೋಗಿಗಳು 500 ಮೀಟರ್ ನಡೆದರೆ, ಕೊರೋನಾ ಬಂದು ಗುಣಮುಖರಾದವರಿಗೆ ಕೇವಲ 400 ಮೀಟರ್ ದೂರ ನಡೆಯಲು ಸಾಧ್ಯವಾಯ್ತು. ಇನ್ನು ಕೊರೋನಾದಿಂದ ಚೇತರಿಸಿಕೊಂಡ ಮೂರು ತಿಂಗಳ ಬಳಿಕವೂ ಕೆಲವರು ಆಕ್ಸಿಜನ್​ ಮಷೀನ್ ಮೇಲೆಯೇ ಅವಲಂಬಿತರಾಗಿದ್ದಾರೆ ಅಂತ ಸಂಶೋಧಕರು ಹೇಳಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡ 100 ಜನರ ಪೈಕಿ 10 ಜನರ ದೇಹದಲ್ಲಿ ವೈರಾಣು ವಿರುದ್ಧದ ಪ್ರತಿಕಾಯಗಳು ನಾಶವಾಗಿದ್ದವು. ರೋಗ ನಿರೋಧಕ ವ್ಯವಸ್ಥೆ ಇನ್ನೂ ಚೇತರಿಸಿಕೊಳ್ಳುತ್ತಿದೆ ಅಂತ ವರದಿ ತಿಳಿಸಿದೆ. ಜೊತೆಗೆ ಸಾಕಷ್ಟು ರೋಗಿಗಳು ಖಿನ್ನತೆ ಅನುಭವಿಸಿದ್ದರು. ಅವರ ಕುಟುಂಬ ಸದಸ್ಯರು ಒಂದೇ ಟೇಬಲ್​ನಲ್ಲಿ ಊಟ ಮಾಡಲು ಕೂಡ ನಿರಾಕರಿಸಿದ್ದರು ಅಂತ ಗೊತ್ತಾಗಿದೆ. ಅಲ್ಲದೆ ಗುಣಮುಖರಾದವರ ಪೈಕಿ ಅರ್ಧಕ್ಕೂ ಕಡಿಮೆ ಜನ ಮಾತ್ರ ತಮ್ಮ ತಮ್ಮ ಕೆಲಸಕ್ಕೆ ಹಿಂದಿರುಗಿದ್ದಾರೆ ಅಂತ ವುಹಾನ್ ಯುನಿವರ್ಸಿಟಿಯ ಝೋಂಗ್​ನಾನ್​ ಆಸ್ಪತ್ರೆ ನಡೆಸಿದ ಅಧ್ಯಯನ ತಿಳಿಸಿದೆ.

-masthmagaa.com

Contact Us for Advertisement

Leave a Reply