ಅರ್ನಬ್ ಗೋಸ್ವಾಮಿ ಅರೆಸ್ಟ್​​​..! ಏನಿದು ಪ್ರಕರಣ..? ಅಸಲಿಯತ್ತು ಏನು..?

masthmagaa.com:

ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಹಠಾತ್‌ ಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ರಾಯಗಢ ಪೊಲೀಸರು ಬಂಧಿಸಿದ್ದಾರೆ. 53 ವರ್ಷದ ಇಂಟೀರಿಯರ್‌ ಡಿಸೈನರ್‌ ಆತ್ಮಹತ್ಯೆಗೆ ‌ ಅರ್ನಬ್‌ ಪ್ರಚೋದನೆ ನೀಡಿರುವ ಆರೋಪದ ಮೇಲೆ ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಅರೆಸ್ಟ್‌ ಮಾಡಲಾಗಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ನಡುವಿನ ಸಮರ ತಾರಕಕ್ಕೇರಿದೆ. ಮುಂಬೈ ಪೊಲೀಸ್‌ ಹಾಗೂ ರಾಯಗಢ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಫಿರೋಜ್ ಶೇಖ್ ಮತ್ತು ನಿತೇಶ್ ಸರ್ದಾರ್​​​​​ರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಮನೆಯಲ್ಲಿ ಹೈಡ್ರಾಮಾ: ಬೆಳಗ್ಗೆ ಸುಮಾರು 6 ಗಂಟೆಯ ಹೊತ್ತಿಗೆ ಪೊಲೀಸರು ಅರ್ನಬ್‌ ಮನೆಗೆ ತೆರಳಿದಾಗ ಅಲ್ಲಿ ಹೈಡ್ರಾಮವೇ ನಡೆದಿತ್ತು. ಅರೆಸ್ಟ್‌ ವಿಷಯ ತಿಳಿದ ಅರ್ನಬ್‌ ಮತ್ತು ಅವರ ಪತ್ನಿ ಸುಮಾರು 1 ಗಂಟೆ ಮನೆ ಬಾಗಿಲು ತೆಗೆಯಲು ನಿರಾಕರಿಸಿದ್ದಾರೆ. ಬಳಿಕ ಅರ್ನಬ್‌ ಬಾಗಿಲು ತೆಗೆದ ತಕ್ಷಣ ʻನಮ್ಮ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿದ್ದಾರೆʼ ಅಂತ ಹೇಳಿಕೊಂಡು ಪತ್ನಿ ವಿಡಿಯೋ ಮಾಡಲು ಶುರು ಮಾಡಿದ್ದಾರೆ. ಪೊಲೀಸರು ತಂದಿದ್ದ ನೊಟೀಸ್​​ನ್ನು ಕೂಡ ಅರ್ನಬ್ ಅವರ ಪತ್ನಿ ಹರಿದುಹಾಕಿದ್ದಾರೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

ರಿಪಬ್ಲಿಕ್‌ ಆರೋಪ: ಅರ್ನಬ್ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಅರ್ನಬ್ ಗೋಸ್ವಾಮಿ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ರಿಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿದೆ. ಮಾತ್ರವಲ್ಲ.. ಸುಮಾರು 8 ಪೊಲೀಸ್ ವಾಹನಗಳು, ಕನಿಷ್ಠ 40-50 ಪೊಲೀಸ್ ಸಿಬ್ಬಂದಿ ಅರ್ನಬ್ ಅವರ ಮನೆಯ ಸುತ್ತಲೂ ನೆರೆದಿದ್ದರು. ಅವರಲ್ಲಿ ಹೆಚ್ಚಿನವರು ಶಸ್ತ್ರಸಜ್ಜಿತರಾಗಿದ್ದರು. ಪತ್ರಕರ್ತನ ಬಂಧನಕ್ಕೆ ಇಷ್ಟೆಲ್ಲ ತಯಾರಿ ಮಾಡಿರುವುದು ಮತ್ತು ಅವರನ್ನು ಭಯೋತ್ಪಾದಕನಂತೆ ನಡೆಸಿಕೊಂಡಿರುವುದು ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಹಿನಿ ಆರೋಪಿಸಿದೆ.

ಏನಿದು ಪ್ರಕರಣ: 2018ರ ಮೇ ತಿಂಗಳಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್‌ ನಾಯಕ್‌ ಮತ್ತು ಅವ್ರ ತಾಯಿ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದ್ರಲ್ಲಿ ತಮ್ಮ ಕಂಪನಿಗೆ ರಿಪಬ್ಲಿಕ್ ‌ಟಿವಿ, ಐಕಾಸ್ಟ್‌ ಎಕ್ಸ್‌ , ಸ್ಮಾರ್ಟ್‌ ವರ್ಕ್‌ ಕಂಪೆನಿಗಳು ಬಾಕಿ ಇರುವ ಹಣವನ್ನ ಕೊಡುತ್ತಿಲ್ಲ. ಇದ್ರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ಬರೆದಿತ್ತು. ರಿಪಬ್ಲಿಕ್‌ ಸಂಸ್ಥೆಯಿಂದ 83 ಲಕ್ಷ ರೂ. ಸೇರಿದಂತೆ 3 ಕಂಪೆನಿಯಿಂದ ಒಟ್ಟು 5.40ಕೋಟಿ ರೂಪಾಯಿ ಬರಲು ಬಾಕಿಯಿತ್ತು. 2 ವರ್ಷಗಳ ಹಿಂದಿನ ಪ್ರಕರಣವನ್ನ ಪೊಲೀಸರು ಸ್ಥಗಿತಗೊಳಿಸಿದ್ದರು. ಇದೀಗ ಡಿಸೈನರ್‌ ಅವರ ಪತ್ನಿ ಹಾಗೂ ಪುತ್ರಿಯ ಹೊಸ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನ ಮತ್ತೊಮ್ಮೆ ತೆರೆಯಲಾಗಿದೆ.

ಅರ್ನಬ್ ಮೇಲೆ ಈ ಹಿಂದಿನ ಕೇಸು: ಈ ಹಿಂದೆ ಅರ್ನಬ್ ಗೋಸ್ವಾಮಿ ಮೇಲೆ ಪ್ರಚೋದನಾಕಾರಿ ಹೇಳಿಕೆ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿತ್ತು. ಪಾಲ್​​​ಘರ್​ ಸಾಧುಗಳ ಹತ್ಯೆ ಘಟನೆ ಮತ್ತು ಸುಶಾಂತ್ ಸಿಂಗ್ ಸಾವಿನ ಬಳಿಕ ಮುಂಬೈ ಪೊಲೀಸ್, ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅರ್ನಬ್ ನಿರಂತರ ವರದಿಗಳನ್ನು ಪ್ರಸಾರ ಮಾಡಿದ್ದರು. ಈ ಸಂಬಂಧ ಅರ್ನಬ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದವು. ಜತೆಗೆ ನಕಲಿ ಟಿಆರ್‌ಪಿ ಹಗರಣದಲ್ಲಿಯೂ ಅವರ ಹೆಸರು ಕೇಳಿಬಂದಿತ್ತು. ಆದ್ರೂ ಕೂಡ ಅರ್ನಬ್ ಗೋಸ್ವಾಮಿ ಬಂಧನವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್‌, ಸ್ಮೃತಿ ಇರಾನಿ ಮತ್ತು ರವಿಶಂಕರ ಪ್ರಸಾದ್ ಖಂಡಿಸಿದ್ದಾರೆ.

masthmagaa.com:

Contact Us for Advertisement

Leave a Reply