masthmagaa.com:

ಏನಿದು ಗುಪ್‍ಕರ್ ಗುಂಪು..!?
ಫ್ರೆಂಡ್ಸ್, ಗುಪ್ಕರ್ ಗುಂಪು, ಗುಪ್ಕರ್ ಡಿಕ್ಲಾರೇಷನ್…ಗುಪ್ಕರ್ ಗ್ಯಾಂಗ್, ಗುಪ್ಕರ್ ಡಿಕ್ಲಾರೇಷನ್ ಅಂತಷ್ಟೇ ಎಲ್ಲರೂ ಹೇಳ್ತಿದ್ದಾರೆ. ಆದ್ರೆ ಹಾಗಂದ್ರೆ ಏನು ಅಂತ ಯಾರೂ ಹೇಳ್ತಿಲ್ಲ. 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲಾಯ್ತು. ಅದಕ್ಕೂ ಒಂದು ದಿನ ಹಿಂದೆ ಅಂದ್ರೆ ಆಗಸ್ಟ್ 4ರಂದು ಗುಪ್‍ಕರ್ ರಸ್ತೆಯಲ್ಲಿರೋ ಫಾರೂಖ್ ಅಬ್ದುಲ್ಲಾ ಮನೆಯಲ್ಲಿ ಜಮ್ಮು ಕಾಶ್ಮೀರದ ಒಟ್ಟು 6 ಪಕ್ಷಗಳು ಸೇರಿ ರಾಜ್ಯದ ಅಸ್ಮಿತೆ, ಸ್ವಾಯತ್ತತೆ ಮತ್ತು ವಿಶೇಷ ಸ್ಥಾನಮಾನ ಉಳಿಸಿಕೊಳ್ಳಲು ಒಟ್ಟಾಗಿ ಹೋರಾಡೋದಾಗಿ ಘೋಷಿಸಿದ್ವು. ಇದನ್ನು ಗುಪ್ಕರ್ ಡಿಕ್ಲಾರೇಷನ್ ಅಂತ ಕರೆಯಲಾಯ್ತು. ಆದ್ರೆ ಇದಾದ ಮರುದಿನವೇ ಅಂದ್ರೆ ಆಗಸ್ಟ್ 5ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರ, ಗುಪ್ಕರ್ ಗ್ಯಾಂಗ್‍ನ ನಾಯಕರನ್ನು ಎತ್ತಾಕ್ಕೊಂಡು ಹೋಗಿ ಜೈಲಿನಲ್ಲಿಡ್ತು.. ಇನ್ನು ಕೆಲವು ಸೀನಿಯರ್ ಲೀಡರ್​​​​​ಗಳನ್ನು ಮನೆಯಲ್ಲೇ ಗೃಹಬಂಧನಕ್ಕೆ ಒಳಪಡಿಸಿತು. ಇತ್ತೀಚೆಗಷ್ಟೇ ಆ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಅದ್ರ ಬೆನ್ನಲ್ಲೇ ರಾಜಕೀಯ ಕೂಡ ಜೋರಾಗಿದ್ದು, ಮತ್ತೆ ಆ ಎಲ್ಲಾ ನಾಯಕರು ಒಟ್ಟಾಗಿ ಗುಪ್ಕರ್ ಡಿಕ್ಲಾರೇಷನ್ ಪಾರ್ಟ್-2 ಘೋಷಿಸಿದ್ದಾರೆ. ಇದ್ರಲ್ಲಿ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ತರಲು ಹೋರಾಡಲು ನಿರ್ಧರಿಸಲಾಗಿದೆ. ಜೆಕೆಪಿಡಿಪಿ, ಜೆಕೆಎನ್‍ಸಿ, ಸಿಪಿಐ(ಎಂ), ಪಿಯುಎಫ್, ಜೆಕೆಪಿಎಂ ಮತ್ತು ಜೆಕೆಪಿಸಿಸಿ ಅಂದ್ರೆ ಕಾಂಗ್ರೆಸ್ ಕೂಡ ಶಾಮೀಲಾಗಿದೆ. ಆದ್ರೆ ಕಾಂಗ್ರೆಸ್ ಮೇಲ್ನೋಟಕ್ಕೆ ಮಾತ್ರ ನಾವು ಇದ್ರಲ್ಲಿ ಇಲ್ಲವೇ ಇಲ್ಲ ಅಂತಿದೆ. ಆದ್ರೆ ಈಗ ಈ ಗ್ಯಾಂಗ್‍ನ ಅಸಲಿ ಮುಖವಾಡ ಕಳಚಿಬಿದ್ದಿದೆ. ಜಮ್ಮು ಕಾಶ್ಮೀರದಲ್ಲಿ ದೊಡ್ಡ ದೊಡ್ಡ ನಾಯಕರೆನ್ನಿಸಿಕೊಂಡವರು ನಡೆಸಿದ ಭಯಂಕರ ಭ್ರಷ್ಟಾಚಾರವೊಂದರ ಮೇಲಿನ ಪರದೆ ಸರಿದಿದೆ.

ಬೆಳಕಿನ ಹೆಸರಲ್ಲಿ ಕತ್ತಲೆ ಕಾನೂನು..!
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭೂ ಸುಧಾರಣೆ ಕಾನೂನು ಬಂದಿದ್ದೇ ಜಮ್ಮು ಕಾಶ್ಮೀರದಲ್ಲಿ.. 1,950ರಲ್ಲಿ ಜಾರಿಗೆ ಬಂದ ಈ ಕಾನೂನು 22 ಎಕರೆ ಭೂಮಿಯನ್ನು ಹೊಂದಲು ಅವಕಾಶ ನೀಡಿತು. 1,976ರಲ್ಲಿ ಬಂದ ಮತ್ತೊಂದು ಕಾನೂನು 12 ಎಕರೆ ಮಾತ್ರವೇ ಹೊಂದಲು ಅವಕಾಶ ನೀಡಿತು. ಆದ್ರು ಕೂಡ ಕಣಿವೆ ರಾಜ್ಯದಲ್ಲಿ ಪ್ರಭಾವಶಾಲಿಗಳು ಕಂಡ ಕಂಡಲ್ಲಿ ಬೇಲಿ ಹಾಕಿ ದೊಡ್ಡ ದೊಡ್ಡ ಭೂಭಾಗವನ್ನು ಅತಿಕ್ರಮಿಸಿಕೊಂಡಿದ್ರು. ಹೀಗೇ ಮುಂದುವರಿಯುತ್ತಿರುವಾಗ 2001ರಲ್ಲಿ ಅಧಿಕಾರದಲ್ಲಿದ್ದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಖ್ ಅಬ್ದುಲ್ಲಾ ಒಂದು ಕಾನೂನು ತಂದ್ರು. ಅದೇ ರೋಶನಿ ಆಕ್ಟ್.. ರೋಶನಿ ಅಂದ್ರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ.. ರೋಶನಿ ಆಕ್ಟ್ ವಿದ್ಯುತ್‍ಗೆ ಸಂಬಂಧಿಸಿದಂತೆ ತಂದ ಒಂದು ಕಾನೂನಾಗಿತ್ತು. ಇದನ್ನು ಜಮ್ಮು ಕಾಶ್ಮೀರ ಸ್ಟೇಟ್ ಲ್ಯಾಂಡ್ ಆಕ್ಟ್-2001 ಅಂತ ಕೂಡ ಕರೆಯಲಾಯ್ತು. ಈ ಕಾನೂನಿನಲ್ಲಿ 1991ಕ್ಕೂ ಮುನ್ನ ಯಾರೆಲ್ಲಾ ಅಕ್ರಮವಾಗಿ ಬೇಲಿ ಹಾಕಿದ್ದಾರೋ ಅವರಿಗೆ ಆ ಜಮೀನನ್ನು ಕಾನೂನು ಪ್ರಕಾರವೇ ನೀಡಲಾಗುತ್ತೆ. ಆದ್ರೆ ಸರ್ಕಾರ ನಿಗದಿಪಡಿಸಿದ ಹಣವನ್ನು ಪಾವತಿ ಮಾಡಬೇಕು ಅಂತ ಹೇಳಲಾಯ್ತು.. ಈ ಯೋಜನೆ ಮೂಲಕ 2.5 ಲಕ್ಷ ಎಕರೆಯಷ್ಟು ಜಮೀನನ್ನು ಕಾನೂನಿನಂತೆ ಒತ್ತುವರಿದಾರರ ಹೆಸರಿಗೆ ಮಾಡಿಕೊಡಲಾಗುತ್ತೆ. ಅದಕ್ಕೆ ಬದಲಾಗಿ ಮಾರುಕಟ್ಟೆ ಮೌಲ್ಯದಂತೆ 25 ಸಾವಿರ ಕೋಟಿ ರೂಪಾಯಿ ಸರ್ಕಾರಕ್ಕೆ ಹರಿದು ಬರುತ್ತೆ.. ಇದ್ರ ಮೂಲಕ ಜಮ್ಮು ಕಾಶ್ಮೀರದ ಎಲ್ಲಾ ಮನೆಗಳಿಗೆ ವಿದ್ಯುತ್ ಪೂರೈಸುವ ಕೆಲಸ ಮಾಡಲಾಗುತ್ತೆ ಅಂತ ಹೇಳಿಕೊಂಡಿತ್ತು ಸರ್ಕಾರ.. ಆಗ ನ್ಯಷನಲ್ ಕಾನ್ಫರೆನ್ಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್‍ಡಿಎ ಒಕ್ಕೂಟದ ಮೈತ್ರಿ ಪಕ್ಷವೂ ಆಗಿತ್ತು. ಆ ಸರ್ಕಾರದಲ್ಲಿ ಒಮರ್ ಅಬ್ದುಲ್ಲಾ ಮಂತ್ರಿಯೂ ಆಗಿದ್ರು.

ಲೂಟಿಗೆ ನಿರ್ಮಿಸಿಕೊಂಡರು ರಹದಾರಿ..!
ಆದ್ರೆ ಇಲ್ಲಿ ಒಂದು ವಿವಾದ ಹುಟ್ಟಿಕೊಂಡಿತು.. ಅದೇ ಒತ್ತುವರಿಯ ಅವಧಿಯನ್ನು 1990ರವರೆಗೆ ಸೀಮಿತಗೊಳಿಸಿದ್ದು.. ಈಗ ಜನರು ನಾನ್ 1992ರಲ್ಲಿ ಬೇಲಿ ಹಾಕಿದ್ದೆ.. 1990ರಲ್ಲಿ ಬೇಲಿ ಹಾಕಿದ್ದವರಿಗೆ ಅವರವರ ಹೆಸರಿಗೆ ಮಾಡಿಕೊಂಡ್ರು. 2 ವರ್ಷ ಲೇಟ್ ಬೇಲಿ ಹಾಕಿದ ನನಗೆ ಯಾಕೆ ಕೊಡಲ್ಲ ಅಂತ ಮಾತನಾಡಿಕೊಳ್ಳೋಕೆ ಶುರು ಮಾಡಿದ್ರು. ಇದಾದ ಬಳಿಕ 2002ರಲ್ಲಿ ನಡೆದ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ಪಕ್ಷ ಸೋತು ಹೋಯ್ತು. ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಪಿಡಿಪಿ ಸರ್ಕಾರ ಅಧಿಕಾರಕ್ಕೆ ಬಂತು.. 1990ರವರೆಗೆ ಸೀಮಿತಗೊಳಿಸಲಾಗಿದ್ದ ಅವಧಿಯನ್ನು ಹೊಸ ಸರ್ಕಾರ 2004ರವರೆಗೆ ವಿಸ್ತರಿಸಿಬಿಡ್ತು. ನಂತರ 2005ರಲ್ಲಿ ಗುಲಾಂ ನಬಿ ಆಜಾದ್ ಸಿಎಂ ಆಗ್ತಾರೆ. ಅವರು 2 ವರ್ಷ ಕಳೆದ ಬಳಿಕ ಒತ್ತುವರಿಯ ಅವಧಿಯನ್ನು 2007ಕ್ಕೆ ವಿಸ್ತರಿಸಿಬಿಟ್ರು.

ಸಿಎಜಿ ರಿಪೋರ್ಟ್‍ನಲ್ಲಿ ಬಯಲಾಯ್ತು ಲೂಟಿ..!
2011ರ ಸಿಎಜಿ ರಿಪೋರ್ಟ್‍ನಲ್ಲಿ ಜಮ್ಮು ಕಾಶ್ಮೀರದ ಅಸಲಿ ಬಣ್ಣ ಬಯಲಾಯ್ತು.. ರೋಶನಿ ಆಕ್ಟ್ ಹೆಸರಲ್ಲಿ ಜಮ್ಮುವಿನಲ್ಲಿ 71 ಸಾವಿರ ಮತ್ತು ಕಾಶ್ಮೀರದಲ್ಲಿ 4 ಸಾವಿರ ಎಕರೆ ಅಂದ್ರೆ ಒಟ್ಟು 75 ಸಾವಿರ ಎಕರೆ ಪ್ರದೇಶವನ್ನು ಒತ್ತುವರಿದಾರರಿಗೆ ಖಾತೆ ಮಾಡಿಕೊಡಲಾಗಿತ್ತು. ಓ ಹಾಗಾದ್ರೆ ಭರ್ಜರಿ ದುಡ್ಡು ಕೂಡ ಕಲೆಕ್ಷನ್ ಆಗಿದೆ ಅಂತ ನೀವು ಅನ್ಕೊಂಡ್ರೆ ಅದು ತಪ್ಪು ಅಭಿಪ್ರಾಯ.. ಯಾಕಂದ್ರೆ 75 ಸಾವಿರ ಎಕರೆಯಿಂದ ಸರ್ಕಾರಕ್ಕೆ ಹರಿದು ಬಂದಿದ್ದು ಕೇವಲ 76 ಕೋಟಿ ರೂಪಾಯಿ ಮಾತ್ರ… 76 ಕೋಟಿ ಎಲ್ಲಿ.. ಸಾವಿರಾರು ಕೋಟಿ ಎಲ್ಲಿ.. ಉಳಿದ ದುಡ್ಡೆಲ್ಲಾ ಎಲ್ಲಿ ಹೋಯ್ತು.. ಇದ್ರಲ್ಲೇ ಗೊತ್ತಾಗುತ್ತೆ ಇದೊಂದು ದೊಡ್ಡ ಲೂಟಿ ಅಂತ..

ದೊಡ್ಡ ನಾಯಕರಿಂದಲೇ ಹಗಲುದರೋಡೆ..!
ಅದೇ ವರ್ಷ ಅಂದ್ರೆ 2011ರಲ್ಲಿ ಜಮ್ಮು ಕಾಶ್ಮೀರದ ಹೈಕೋರ್ಟ್ ಮೆಟ್ಟಿಲೇರಿದ ಶೇಖ್ ಶಕೀಲ್ ಅಹ್ಮದ್, ರೋಶನಿ ಆಕ್ಟ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ವರ್ಷ ಅಂದ್ರೆ 2020ರ ಅಕ್ಟೋಬರ್ 9ರಂದು ತೀರ್ಪು ನೀಡಿದೆ. ಈ ಕಾನೂನು ಅಸಂವಿಧಾನಿಕವಾಗಿದ್ದು, ಈ ಕಾಯ್ದೆಯಡಿ ಯಾರಿಗೆಲ್ಲಾ ಭೂಮಿ ನೀಡಲಾಗಿದ್ಯೋ ಅದನ್ನು ವಾಪಸ್ ಪಡೆಯಬೇಕು ಅಂತ ಆದೇಶಿಸಿದೆ. ಅದರಂತೆ ಜಮ್ಮು ಕಾಶ್ಮೀರ ಸರ್ಕಾರ ರೋಶನಿ ಆಕ್ಟ್ ರದ್ದು ಮಾಡಿ, ಅದರ ಮೂಲಕ ಯಾರಿಗೆಲ್ಲಾ ಭೂಮಿಯನ್ನು ಖಾತೆ ಮಾಡಿ ಕೊಡಲಾಗಿತ್ತೋ ಅದನ್ನೆಲ್ಲಾ ವಶಕ್ಕೆ ಪಡೀತಾ ಇದೆ. ಅಕ್ರಮವಾಗಿ ಭೂಮಿ ಪಡೆದವರ ಒಂದೊಂದೇ ಪಟ್ಟಿಯನ್ನು ತನ್ನ ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡ್ತಾ ಇದೆ. ಆಶ್ಚರ್ಯ ಅಂದ್ರೆ ಅದರಲ್ಲಿ ಮಾಜಿ ಸಿಎಂ ಎನ್‍ಸಿಯ ಫಾರೂಕ್ ಅಬ್ದುಲ್ಲಾ ಕೂಡ ಸರ್ಕಾರಿ ಜಮೀನು ಅಕ್ರಮವಾಗಿ ಪಡೆದು ಮನೆ ನಿರ್ಮಿಸಿದ್ದಾರೆ ಅಂತ ಗೊತ್ತಾಗಿದೆ. ಒಂದ್ವೇಳೆ ಇದು ಸಾಬೀತಾದ್ರೆ ಫಾರೂಕ್ ಅಬ್ದುಲ್ಲಾ ತಮ್ಮ ವೃದ್ದಾಪ್ಯ ಜೀವನವನ್ನು ಜೈಲಿನಲ್ಲೇ ಕಳೆಯಬೇಕಾಗುತ್ತೆ. ಇವ್ರು ಮಾತ್ರ ಅಲ್ಲ.. ಪಿಡಿಪಿ ಮುಫ್ತಿ ಮೆಹಬೂಬಾ, ವಿವಿಧ ಕಾಂಗ್ರೆಸ್ ನಾಯಕರ ಹೆಸರು ಮತ್ತು ಅವರ ಸಂಬಂಧಿಕರ ಹೆಸರು ಕೂಡಾ ಕೇಳಿ ಬಂದಿದೆ. ಇದೇ ಕಾರಣಕ್ಕೆ ಈಗ ಗುಪ್ಕರ್ ಗ್ಯಾಂಗ್ ಸದಸ್ಯರು ಒಟ್ಟಾಗಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply