ಚೀನಾದ ಲ್ಯಾಬ್​ನಿಂದ ಮತ್ತೊಂದು ಬ್ಯಾಕ್ಟೀರಿಯಾ ಲೀಕ್​.. ಸಾವಿರಾರು ಜನರಿಗೆ ಸೋಂಕು

masthmagaa.com:

ವುಹಾನ್​ ಲ್ಯಾಬ್​ನಿಂದಲೇ ಕೊರೋನಾ ವೈರಾಣು ಜಗತ್ತಿಗೆಲ್ಲಾ ಹರಡಿತು ಅನ್ನೋ ಆರೋಪಗಳು ಚೀನಾ ವಿರುದ್ಧ ಕೇಳಿ ಬರುತ್ತಿರುವಾಗಲೇ ಇಂಥದ್ದೇ ಘಟನೆ ಚೀನಾದಲ್ಲಿ ಕಳೆದ ವರ್ಷವೂ ನಡೆದಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ಪ್ರಾಣಿಗಳ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದ ಚೀನಾ ಸರ್ಕಾರಿ ಸ್ವಾಮ್ಯದ ಜೈವಿಕ ಔಷಧ ಕೇಂದ್ರದಿಂದ ಬ್ಯಾಕ್ಟೀರಿಯಾ ಲೀಕ್​ ಆಗಿ ಸುಮಾರು 3,000ಕ್ಕೂ ಹೆಚ್ಚು ಜನರಿಗೆ ಬ್ರುಸಿಲ್ಲೋಸಿಸ್ ಎಂಬ ಕಾಯಿಲೆ ತಗುಲಿತ್ತು.

ಚೀನಾದ ಉತ್ತರ-ಪಶ್ಚಿಮ ಭಾಗದಲ್ಲಿ ಬರುವ ಗನ್ಸು ಪ್ರಾಂತ್ಯದ ಲಾನ್​ಝೌ ನಗರದ ವೆಟರ್ನರಿ ರಿಸರ್ಚ್​ ಇನ್​ಸ್ಟಿಟ್ಯೂಟ್​ನ ಔಷಧ ಕಾರ್ಖಾನೆಯಲ್ಲಿ ಬ್ರುಸಿಲ್ಲೋಸಿಸ್ ರೋಗ ಮೊದಲು ಕಾಣಿಸಿಕೊಂಡಿತ್ತು. ಇದು ಬ್ರುಸಿಲ್ಲಾ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದೆ. ಈ ಕಾಯಿಲೆ ಮೊದಲು ಸಾಕು ಪ್ರಾಣಿಗಳಿಗೆ ತಗುಲಿ, ಅವುಗಳ ನಿಕಟ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಹರಡುತ್ತದೆ.

ಬ್ರುಸಿಲ್ಲೋಸಿಸ್ ರೋಗವನ್ನು ಮಾಲ್ಟಾ ಅಥವಾ ಮೆಡಿಟರೇನಿಯನ್ ಜ್ವರ ಅಂತಾನೂ ಕರೆಯುತ್ತಾರೆ. ಕಲುಷಿತ ಆಹಾರದಿಂದ ಅಥವಾ ಉಸಿರಾಡುವಾಗ ಬ್ಯಾಕ್ಟೀರಿಯಾವನ್ನು ದೇಹದೊಳಗೆ ತೆಗೆದುಕೊಳ್ಳುವುದರಿಂದ ಈ ಕಾಯಿಲೆ ಬರುತ್ತದೆ. ತಲೆ ನೋವು, ಮಾಂಸಖಂಡದ ನೋವು, ಜ್ವರ ಮತ್ತು ಆಯಾಸ ಈ ರೋಗದ ಲಕ್ಷಣಗಳಾಗಿವೆ. ಕೆಲವೊಂದು ರೋಗ ಲಕ್ಷಣಗಳು ಹೋಗಬಹುದು ಅಥವಾ ಮತ್ತೆ ಕಾಣಿಸಿಕೊಳ್ಳಬಹುದು. ಆದ್ರೆ ಕೆಲವೊಂದು ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಹಾಗೆಯೇ ಉಳಿದಿರುತ್ತದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

ಅಂದ್ಹಾಗೆ ಈ ಬ್ಯಾಕ್ಟೀರಿಯಾದ ಸೋಂಕು ಕೊರೋನಾ ಸೋಂಕಿಗಿಂತ ಸಂಪೂರ್ಣ ಭಿನ್ನವಾಗಿದೆ. ಬ್ರುಸಿಲ್ಲಾ ಅನ್ನೋದು ಒಂದು ಬ್ಯಾಕ್ಟೀರಿಯಾ, ವೈರಾಣು ಅಲ್ಲ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಅಷ್ಟು ಮಾರಕ ಕೂಡ ಅಲ್ಲ. ಈ ರೋಗದಿಂದ ಚೀನಾದಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ.

ಲಾನ್​ಝೌನ ಸ್ಥಳೀಯ ಅಧಿಕಾರಿಗಳ ಪ್ರಕಾರ, ಲಾನ್​ಝೌ ವೆಟರ್ನರಿ ರಿಸರ್ಚ್​ ಇನ್​ಸ್ಟಿಟ್ಯೂಟ್​ನ ಔಷಧ ಕಾರ್ಖಾನೆಯಲ್ಲಿದ್ದ ವೇಸ್ಟ್ ಗ್ಯಾಸ್​ ಅನ್ನು ಅಲ್ಲಿನ ಕಾರ್ಮಿಕರು ಡಿಸ್​ಇನ್ಫೆಕ್ಟ್ ಮಾಡಿರಲಿಲ್ಲ. ಹೀಗಾಗಿ 2019ರ ನವೆಂಬರ್​ನಲ್ಲಿ ಈ ಬ್ಯಾಕ್ಟೀರಿಯಾವು ಗಾಳಿಯ ಮೂಲಕ ಅಲ್ಲಿ ಕೆಲಸ ಮಾಡುತ್ತಿದ್ದ 181 ಜನರ ದೇಹ ಹೊಕ್ಕಿತ್ತು. ಬಳಿಕ ಸುತ್ತಮುತ್ತಲಿನ 3,000ಕ್ಕೂ ಹೆಚ್ಚು ಜನರಿಗೆ ಹರಡಿತ್ತು.

ಇದರ ಬೆನ್ನಲ್ಲೇ ಲಸಿಕೆ ಉತ್ಪಾದನೆಯ ಲೈಸೆನ್ಸ್​ ಅನ್ನು ರದ್ದುಗೊಳಿಸಿ, ಕಾಯಿಲೆ ಸ್ಫೋಟಕ್ಕೆ ಕಾರಣವಾದ 8 ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯ್ತು ಅಂತ ಸಿಎನ್​ಎನ್​ ಸುದ್ದಿಸಂಸ್ಥೆ ವರದಿ ಮಾಡಿದೆ.

2019ರ ನವೆಂಬರ್​ನಲ್ಲಿ ಬ್ರುಸಿಲ್ಲಾ ಬ್ಯಾಕ್ಟೀರಿಯಾ ಸ್ಫೋಟಗೊಂಡ ಒಂದು ತಿಂಗಳ ನಂತರ ಕೊರೋನಾ ಸೋಂಕು ಕೂಡ ಚೀನಾದಲ್ಲಿ ಕಾಣಿಸಿಕೊಂಡಿತ್ತು ಅನ್ನೋದು ಗಮನಾರ್ಹ.

-masthmagaa.com

Contact Us for Advertisement

Leave a Reply