masthmagaa.com:

ಭಾರತದಿಂದ ಚೀನಾಗೆ ರಫ್ತು ಮಾಡಿದ ಮೀನಿನ ಪ್ಯಾಕೇಟಿನಲ್ಲಿ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆ ಭಾರತದ ಕಂಪನಿಯಿಂದ ಮೀನು ಮತ್ತು ಇತರ ಸಮುದ್ರ ಆಹಾರಗಳನ್ನ ಆಮದು ಮಾಡಿಕೊಳ್ಳುವುದನ್ನ ಚೀನಾ ಸ್ಥಗಿತಗೊಳಿಸಿದೆ. ಅಂದ್ಹಾಗೆ ಕೋಲ್ಕತ್ತಾದ ಬಸು ಇಂಟರ್​ನ್ಯಾಷನಲ್ ಎಂಬ ರಫ್ತು ಕಂಪನಿ ಚೀನಾಗೆ ಮೀನನ್ನು ಕಳಿಸಿತ್ತು. ಹೀಗೆ ಬಂದ 3 ಮೀನಿನ ಪ್ಯಾಕೆಟ್​ನಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಈ ಕಂಪನಿಯಿಂದ ಮೀನನ್ನು ಆಮದು ಮಾಡಿಕೊಳ್ಳುವುದನ್ನ ಒಂದು ವಾರ ಕಾಲ ಸ್ಥಗಿತ ಮಾಡಲಾಗಿದೆ ಅಂತ ಚೀನಾ ಘೋಷಿಸಿದೆ.

ಚೀನಾದಲ್ಲಿ ಇಂತಹ ಪ್ರಕರಣಗಳು ವರದಿಯಾಗಿರೋದು ಇದೇ ಮೊದಲಲ್ಲ. ಇತ್ತೀಚೆಗೆ ಇಂಡೋನೇಷ್ಯಾದಿಂದ ಆಮದು ಮಾಡಿಕೊಂಡ ಮೀನಿನ ಪ್ಯಾಕೆಟ್​ನಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಬಳಿಕ ಅಲ್ಲಿಂದಲೂ ಮೀನಿನ ಆಮದನ್ನ ಚೀನಾ ಬಂದ್ ಮಾಡಿತ್ತು. ಅಂದ್ಹಾಗೆ ಆಹಾರದ ಪ್ಯಾಕೇಜಿಂಗ್​ನಿಂದ​ ಕೊರೋನಾ ಸೋಂಕು ಹರಡುವುದಿಲ್ಲ ಅಂತ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ರೆ ಚೀನಾ ಮಾತ್ರ ವಿದೇಶದಿಂದ ಆಮದು ಮಾಡಿಕೊಂಡ ಮೀನಿನ ಪ್ಯಾಕೆಟ್​ನಲ್ಲಿ ಕೊರೋನಾ ಇದೆ ಅಂತ ಪದೇಪದೆ ಹೇಳ್ತಿದೆ. ಬೇರೆ ದೇಶಗಳಲ್ಲಿ ಕಾಣದ ವೈರಸ್ ಚೀನಾದಲ್ಲಿ ಹೇಗೆ ಪತ್ತೆಯಾಗ್ತಿದೆ..? ನಿಜವಾಗಲೂ ವೈರಸ್ ಪತ್ತೆಯಾಗ್ತಿದೆಯಾ..? ಕೊರೋನಾ ಹರಡದಂತೆ ತಡೆಯಲು ಚೀನಿಯರು ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದಾರಾ..? ಆಹಾರದ ಪ್ಯಾಕೆಟ್​ಗಳ ಮೂಲಕವೂ ಸೋಂಕು ಹರಡುತ್ತಾ..? ಹಾಗಿದ್ರೆ ಉಳಿದ ದೇಶಗಳ ಕಥೆ ಏನು..? ಎಲ್ಲಾ ದೇಶಗಳಲ್ಲೂ ಆಮದು ಮಾಡಿಕೊಂಡ ವಸ್ತುಗಳನ್ನ ಪರೀಕ್ಷಿಸುವ ಅನಿವಾರ್ಯತೆ ಇದೆಯಾ..? ಅನ್ನೋ ಹಲವು ಪ್ರಶ್ನೆಗಳು ಮೂಡುತ್ತವೆ. ಈ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕು. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ತನ್ನ ಹೇಳಿಕೆಯನ್ನ ಮರು ಪರಿಶೀಲಿಸಿ ಜನರ ಗೊಂದಲವನ್ನ ಬಗೆಹರಿಸಬೇಕು.

-masthmagaa.com

Contact Us for Advertisement

Leave a Reply