ಚೀನಾದ ಆಸ್ಪತ್ರೆಯಲ್ಲಿ ಕೊರೋನಾ ಸ್ಫೋಟ.. ಹಲವರಿಗೆ ಸೋಂಕು ದೃಢ..!

masthmagaa.com:

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ತಿಂಗಳುಗಳ ಬಳಿಕ ಸ್ಥಳೀಯ ಪ್ರಕರಣಗಳು ದೃಢಪಟ್ಟಿದೆ. ಚೀನಾದ ಶಾನ್​ಡಾಂಗ್ ಪ್ರಾಂತ್ಯದ ಕ್ವಿಂಗ್​ಡಾವೋ ನಗರದಲ್ಲಿ 6 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಹೈ ಅಲರ್ಟ್​ ಘೋಷಿಸಲಾಗಿದ್ದು ಕ್ವಿಂಗ್​ಡಾವೋ ನಗರದ ಎಲ್ಲಾ ನಿವಾಸಿಗಳಿಗೆ ಕೊರೋನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಚೀನಾ ರಾಜಧಾನಿ ಬೀಜಿಂಗ್​ನಿಂದ 700 ಕಿ.ಮೀ. ದೂರದಲ್ಲಿರುವ ಈ ನಗರದಲ್ಲಿ ಸುಮಾರು 90 ಲಕ್ಷ ಜನಸಂಖ್ಯೆ ಇದೆ. ಇವರೆಲ್ಲರನ್ನು 5 ದಿನಗಳೊಳಗೆ ಪರೀಕ್ಷೆಗೆ ಒಳಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಾಗಿ ದೃಢಪಟ್ಟ ಎಲ್ಲಾ 6 ಪ್ರಕರಣಗಳು ಕ್ವಿಂಗ್​ಡಾವೋ ಚೆಸ್ಟ್​ ಆಸ್ಪತ್ರೆ ಲಿಂಕ್ ಹೊಂದಿವೆ. ವಿದೇಶದಿಂದ ಬರುವ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ದೃಢಪಟ್ಟರೆ ಅಂತಹವರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಅವರಿಂದಲೇ ಇತರರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸದ್ಯ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ.

ಅಕ್ಟೋಬರ್​ 11ರ ಕೊರೋನಾ ಹೆಲ್ತ್​ ಬುಲೆಟಿನ್​ನಲ್ಲಿ ವಿದೇಶದಿಂದ ಬಂದ 21 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿತ್ತು. ಆದ್ರೆ ಇದರಲ್ಲಿ ಕ್ವಿಂಗ್​ಡಾವೋದ 6 ಸ್ಥಳೀಯ ಪ್ರಕರಣಗಳನ್ನ ಸೇರಿಸಿಲ್ಲ. ಯಾಕೆ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಚೀನಾದಲ್ಲಿ ಇದುವರೆಗೆ 85,578 ಜನರಿಗೆ ಕೊರೋನಾ ಸೋಂಕು ತಗುಲಿದ್ದು 80,714 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 4,634 ಜನ ಮೃತಪಟ್ಟಿದ್ದು, 230 ಸಕ್ರಿಯ ಪ್ರಕರಣಗಳಿವೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ತಿಳಿಸಿದೆ.

Contact Us for Advertisement

Leave a Reply