masthmagaa.com:

ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು 7 ಜನರನ್ನ ಬಂಧಿಸಿದ್ದಾರೆ. ಅದರಲ್ಲಿ ಒಬ್ಬ ಪೊಲೀಸ್​ ಸಿಬ್ಬಂದಿ ಕೂಡ ಇರೋದು ಇಂಟರೆಸ್ಟಿಂಗ್. 8ನೇ ಆರೋಪಿಗಾಗಿ ಹುಡುಕಾಟ ನಡೀತಿದ್ದು ಆತನೂ ಒಬ್ಬ ಪೊಲೀಸ್ ಅನ್ನೋದು ವೆರಿ ವೆರಿ ಇಂಟರೆಸ್ಟಿಂಗ್.

ಹಾಗಾದ್ರೆ ಈ ‘ಕಳ್ಳ’ ಪೊಲೀಸರು ಮಾಡಿದ್ದೇನು..?

ಈ ಘಟನೆ ಅರ್ಥ ಆಗಬೇಕು ಅಂದ್ರೆ ಈ ರೋಚಕ ಪೊಲೀಸ್ ದರೋಡೆಯ ಹಿನ್ನೆಲೆ ತಿಳಿದುಕೊಳ್ಳಬೇಕು. ಬೆಂಗಳೂರಿನ ನಗರತ್​ ಪೇಟೆಯಲ್ಲಿ ಕಾರ್ತಿಕ್ ಅನ್ನೋ ವ್ಯಕ್ತಿ ಒಂದು ಸಣ್ಣ ಗೋಲ್ಡ್ ಶಾಪ್ ಇಟ್ಟುಕೊಂಡಿದ್ದ. ಶಾಪ್ ಜಾಗವನ್ನ ಜೀತು ಅಡಕ್ ಮತ್ತು ಆತನ ಮಗ ಸೂರಜ್​ರಿಂದ ಬಾಡಿಗೆಗೆ ಪಡೆದಿದ್ದ. ಆದ್ರೆ ಕಾರ್ತಿಕ್ ಯಾವುದೇ ಲೈಸೆನ್ಸ್ ಇಲ್ಲದೇ ಗೋಲ್ಡ್ ಶಾಪ್ ಇಟ್ಟಿದ್ದಾನೆ ಅನ್ನೋದು ಜೀತು ಅಡಕ್ ಮತ್ತು ಸೂರಜ್​ಗೆ ಗೊತ್ತಾಯ್ತು. ಆಗಲೇ ಇಬ್ಬರೂ ಸೇರಿ ಇಲ್ಲಿಂದ ಚಿನ್ನ ಲೂಟಿ ಮಾಡೋ ಪ್ಲಾನ್ ಮಾಡಿದ್ರು. ಹೆಂಗಿದ್ರೂ ಇವನತ್ರ ಲೈಸೆನ್ಸ್ ಇಲ್ಲ, ಸೋ ಈತ ಪೊಲೀಸರಿಗೆ ಕಂಪ್ಲೇಂಟ್ ಕೊಡಲ್ಲ ಅಂತ ಭಾವಿಸಿ ದರೋಡೆಗೆ ಸ್ಕೆಚ್ ಶುರು ಮಾಡಿದ್ರು. ಇದೇ ಉದ್ದೇಶದಿಂದ ನದೀಮ್ ಪಾಶಾ ಅನ್ನೋ ತನ್ನ ಸ್ನೇಹಿತನನ್ನ ಈ ಕಾರ್ಯಕ್ಕೆ ಸೇರಿಸಿಕೊಂಡರು. ಈ ನದೀಮ್ ಪಾಶಾ ಪೊಲೀಸ್ ರೇಡ್ ರೀತಿ ಮಾಡೋಣ. ಚಿನ್ನವನ್ನ ಸೀಝ್ ಮಾಡಿದಂಗೆ ಮಾಡಿ ತಗೊಂಡು ಬರೋಣ ಅಂತ ಐಡಿಯಾ ಕೊಟ್ಟ. ನದೀಮನ ಈ ಪ್ಲಾನ್ ಜೀತು ಅಡಕ್, ಸೂರಜ್ ಇಬ್ಬರಿಗೂ ಇಷ್ಟ ಆಯ್ತು. ಆದ್ರೆ ಈ ನಕಲಿ ಪೊಲೀಸ್ ರೇಡ್​ಗೆ ರಿಯಲ್​ ಪೊಲೀಸರ ಸಹಾಯ ಇದ್ರೆ ಎಷ್ಟು ರೋಚಕವಾಗಿರುತ್ತೆ ಅಲ್ವಾ ಅಂತ ಪ್ಲಾನ್ ಮಾಡಿದ ನದೀಮ್, ತನಗೆ ಪರಿಚಯದ ಇಬ್ಬರು ಪೊಲೀಸರನ್ನ ಇದಕ್ಕೆ ಸೇರಿಸಿಕೊಂಡ. ಬಂದ ‘ಲಾಭ’ದಲ್ಲಿ ಪಾಲುಕೊಡೋ ಕಂಡೀಶನ್​​ ಮೇರೆಗೆ ಅಶೋಕ್ ಹಾಗೂ ಚೌಡೇಗೌಡ ಅನ್ನೋ ಇಬ್ಬರು ಪೊಲೀಸರು ನದೀಮನ ಚಿನ್ನ ಲೂಟಿ ಪ್ಲಾನಿಗೆ ಸೇರಿಕೊಂಡರು. ನವೆಂಬರ್​ 11ನೇ ತಾರೀಖು ನದೀಮ್ ಮತ್ತು ಇಬ್ಬರು ರಿಯಲ್ ಪೊಲೀಸರು ಕಾರ್ತಿಕ್​ನ ಚಿನ್ನದಂಗಡಿಗೆ ನುಗ್ಗಿ ‘ರೇಡ್ ಆಗಿದೆ. ಡಾಕ್ಯುಮೆಂಟ್ಸ್ ತೋರಿಸು’ ಅಂತ ಕೇಳಿದ್ದಾರೆ. ಈ ಕಾರ್ತಿಕ್ ಹತ್ರ ಯಾವುದೇ ಡಾಕ್ಯುಮೆಂಟ್ ಇಲ್ಲ! ಸೋ, ‘ನಿಮ್ಮ ಚಿನ್ನ ಸೀಝ್ ಮಾಡ್ತೀವಿ’ ಅಂತ ಎಲ್ಲಾ ದೋಚಿಕೊಂಡು ಹೋಗಿದ್ದಾರೆ. ಆದ್ರೆ ಅದರಲ್ಲಿ ಇದ್ದಿದ್ದು ಬರೀ 240 ಗ್ರಾಂ ಮಾತ್ರ. ಅದನ್ನ 9 ಲಕ್ಷ ರೂಪಾಯಿಗೆ ಮಾರಿ ಎಲ್ಲರೂ ಒಂದೊಂದು ಲಕ್ಷ ಹಂಚಿಕೊಂಡಿದ್ದಾರೆ. ಇತ್ತ ಕಾರ್ತಿಕ್ ಕೂಡ ಲೈಸೆನ್ಸ್ ಇಲ್ಲದೇ ವ್ಯಾಪಾರ ಮಾಡ್ತಿದ್ದ ಕಾರಣ ಭಯಭೀತನಾಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿರಲಿಲ್ಲ. ಆದ್ರೆ ಕೆಲ ದಿನಗಳ ಬಳಿಕ ಇಡೀ ರೇಡೇ ಫೇಕ್ ರೇಡು ಅಂತ ಗೊತ್ತಾದಾಗ, ಉರಿದುಹೋದ ಕಾರ್ತಿಕ ಸೀದಾ ಹೋಗಿ ಕಂಪ್ಲೇಟ್ ಕೊಟ್ಟಿದ್ದಾರೆ. ಸಿಸಿಟಿವಿ ಮೂಲಕ ಟ್ರೇಸ್ ಮಾಡಿದ ಹಲಸೂರು ಗೇಟ್ ಪೊಲೀಸರು ಕಾನ್ಸ್ಟೇಬಲ್ ಅಶೋಕ್ ಸೇರಿದಂತೆ 7 ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪೊಲೀಸಪ್ಪ ಚೌಡೇಗೌಡ ನಾಪತ್ತೆಯಾಗಿದ್ದು ಹುಡುಕಾಟ ನಡೀತಾ ಇದೆ. ಅಶೋಕ್ ಹಾಗೂ ಚೌಡೇಗೌಡ ಇಬ್ಬರೂ ಕಾಡುಗೋಡಿ ಠಾಣೆಯ ಕಾನ್ಸ್ಟೇಬಲ್ಸ್ ಆಗಿದ್ದರು ಅಂತ ಗೊತ್ತಾಗಿದೆ. ಇಂತಹ ಕೆಲ ‘ಕಳ್ಳ ಪೊಲೀಸ’ರಿಂದ ಇಡೀ ಖಾಕಿಗೆ ಕಳಂಕ ಅಂಟುತ್ತಿರೋದಂತೂ ಸತ್ಯ.

-masthmagaa.com

Contact Us for Advertisement

Leave a Reply