masthmagaa.com:

ಪ್ರಧಾನಿ ಮೋದಿ ಇವತ್ತು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕೊರೋನಾ ಪರಿಸ್ಥಿತಿಯನ್ನ ಪರಿಶೀಲಿಸಿದ್ರು. ಸಭೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ದೇಶದಲ್ಲಿ ಕೊರೋನಾ ಲಸಿಕೆಯನ್ನ ಹೇಗೆ ವಿತರಿಸಬೇಕು ಅನ್ನೋ ಬಗ್ಗೆ ರಾಜ್ಯ ಸರ್ಕಾರಗಳ ಜೊತೆ ಸೇರಿಕೊಂಡೇ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ರಾಜ್ಯಗಳು ಲಸಿಕೆ ಸಂಗ್ರಹಿಸಿಡಲು ಬೇಕಾದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳಬೇಕು. ದೇಶದಲ್ಲಿ ಎರಡು ಲಸಿಕೆಗಳು ಮುಂಚೂಣಿಯಲ್ಲಿವೆ. ಇದುವರೆಗೆ ಯಾವ ಲಸಿಕೆಗೆ ಎಷ್ಟು ದರ ಅನ್ನೋದು ನಿಗದಿಯಾಗಿಲ್ಲ. ಎಷ್ಟು ಡೋಸ್​ಗಳನ್ನ ಹಾಕಬೇಕು ಅನ್ನೋದು ಕೂಡ ನಿರ್ಧಾರವಾಗಿಲ್ಲ. ಬೇರೆ ಬೇರೆ ಕಾಯಿಲೆಗಳಿಗೆ ದಶಕಗಳಿಂದ ಲಭ್ಯವಿರುವ ಲಸಿಕೆಗಳನ್ನ ಪಡೆದವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ. ಹೀಗಾಗಿ ವೈಜ್ಞಾನಿಕ ಆಧಾರದ ಮೇಲೆಯೇ ಕೊರೋನಾ ಲಸಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಪ್ರತಿಯೊಬ್ಬರಿಗೂ ಸುರಕ್ಷಿತ ಲಸಿಕೆ ಆದಷ್ಟು ಬೇಗ ಸಿಗಬೇಕು ಅನ್ನೋದು ನಮ್ಮ ಉದ್ದೇಶ. ಲಸಿಕೆ ಅಭಿಯಾನ ದೀರ್ಘಕಾಲದ ಪ್ರಕ್ರಿಯೆ. ಈ ಅಭಿಯಾನ ಸ್ಮೂತ್ ಮತ್ತು ಸಿಸ್ಟಮ್ಯಾಟಿಕ್ ಆಗಿರಬೇಕು. ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳ ಜೊತೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ’ ಅಂತ ಹೇಳಿದ್ದಾರೆ.

‘ಲಸಿಕೆ ವಿಚಾರ ಒಂದುಕಡೆಯಾದ್ರೆ, ಮತ್ತೊಂದುಕಡೆ ಕೊರೋನಾ ವಿರುದ್ಧದ ನಮ್ಮ ಹೋರಾಟ ನಿಲ್ಲಬಾರದು. ಕೊರೋನಾ ವಿರುದ್ಧದ ಹೋರಾಟದಲ್ಲಿ ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗಿಂತ ಹೆಚ್ಚು ಅನುಭವವನ್ನ ನಾವು ಹೊಂದಿದ್ದೇವೆ. ಈ ಅನುಭವವನ್ನ ಬಳಸಿಕೊಂಡು ನಮ್ಮ ಹೋರಾಟವನ್ನ ಮತ್ತಷ್ಟು ಬಲಗೊಳಿಸಬೇಕು. ನಿರ್ಲಕ್ಷ್ಯ ವಹಿಸಬಾರದು. ಪಾಸಿಟಿವಿಟಿ ರೇಟನ್ನು 5%ಗಿಂತ ಕಮ್ಮಿ ಮಾಡಬೇಕು (ಅಂದ್ರೆ 100 ಜನರಿಗೆ ಕೊರೋನಾ ಪರೀಕ್ಷೆ ಮಾಡಿದ್ರೆ 5 ಜನರಿಗಿಂತಲೂ ಕಡಿಮೆ ಜನರಿಗೆ ಪಾಸಿಟಿವ್ ಬರೋದು). ಸಾವಿನ ಪ್ರಮಾಣವನ್ನ 1%ಗಿಂತ ಕಮ್ಮಿ ಮಾಡಬೇಕು. ಒಂದು ಸಾವು ಸಂಭವಿಸಿದ್ರೂ ಅದ್ಹೇಗೆ ಆಯ್ತು, ಅದಕ್ಕೆ ಕಾರಣವೇನು ಅನ್ನೋದನ್ನ ಪತ್ತೆಹಚ್ಚಬೇಕು. ಅಷ್ಟರಮಟ್ಟಿಗೆ ಅಲರ್ಟ್ ಆಗಿರಬೇಕು. ಕೆಲ ಸೋಂಕಿತರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಅವರ ಪ್ರಾಣ ಉಳಿಸಿಕೊಳ್ಳಲು ಕಷ್ಟವಾಗ್ತಿದೆ. ಹೀಗಾಗಿ ಹೆಚ್ಚೆಚ್ಚು ಕೊರೋನಾ ಪರೀಕ್ಷೆಗಳನ್ನ ಮಾಡಬೇಕು. ಆರಂಭದಲ್ಲೇ ಸೋಂಕು ಪತ್ತೆಯಾದ್ರೆ ಕೊರೋನಾ ನಿಯಂತ್ರಿಸಲು ಸಾಧ್ಯ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್​ ರಚಿಸಬೇಕು. ಈ ಟಾಸ್ಕ್ ಫೋರ್ಸ್​ಗಳನ್ನ ಮುಖ್ಯಮಂತ್ರಿಗಳು ನಿರಂತರವಾಗಿ ಮಾನಿಟರ್ ಮಾಡಬೇಕು. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಸಲಹೆ ಸೂಚನೆಗಳನ್ನ ಲಿಖಿತ ರೂಪದಲ್ಲಿ ಆದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಬೇಕು’ ಅಂತ ಪ್ರಧಾನಿ ಮೋದಿ ಹೇಳಿದ್ರು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಕರ್ನಾಟಕ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯದ ಸಿಎಂಗಳು ಭಾಗವಹಿಸಿದ್ರು. ಸಭೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ‘ಮುಂದಿನ 4 ವಾರಗಳಲ್ಲಿ ದೇಶದಲ್ಲಿ ಕೊರೋನಾ ಲಸಿಕೆ ಸಿಗಬಹುದು. ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ ಅಂತ ಪ್ರಧಾನಿಯವರು ಸೂಚಿಸಿದ್ದಾರೆ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply