ಬಾಗಲಕೋಟೆಗೂ ಕಾಲಿಟ್ಟ ಕೊರೋನಾ.. 14 ಜಿಲ್ಲೆಗಳಿಗೆ ವ್ಯಾಪಿಸಿದ ಮಹಾಮಾರಿ

masthmagaa.com:

ರಾಜ್ಯದಲ್ಲಿ ಇದುವರೆಗೆ ಮೂರು ಜೀವಗಳನ್ನ ಬಲಿ ಪಡೆದಿರೋ ಕೊರೋನಾ ವೈರಸ್ ಈಗ ಬಾಗಲಕೋಟೆಗೂ ಕಾಲಿಟ್ಟಿದೆ. ಈ ಮೂಲಕ ರಾಜ್ಯದ 14 ಜಿಲ್ಲೆಗಳಿಗೆ ಸೋಂಕು ವ್ಯಾಪಿಸಿದಂತಾಗಿದೆ. ಬಾಗಲಕೋಟೆ ನಗರದ ವೃದ್ಧರೊಬ್ಬರಿಗೆ ಸೋಂಕು ದೃಢಪಟ್ಟಿದೆ ಅಂತ ಜಿಲ್ಲಾಧಿಕಾರಿ ಡಾ. ಆರ್. ರಾಜೇಂದ್ರ ಹೇಳಿದ್ದಾರೆ. ಸೋಂಕಿತ ವೃದ್ಧ ನಗರ ಬಿಟ್ಟು ಎಲ್ಲಿಗೂ ಹೋಗಿಲ್ಲ. ಹೀಗಾಗಿ ಸೋಂಕು ತಗುಲಿರೋದು ಎಲ್ಲಿಂದ ಅನ್ನೋದನ್ನ ಪತ್ತೆಹಚ್ಚುವ ಕೆಲಸ ನಡೀತಿದೆ.

ಸೋಂಕಿತ ವ್ಯಕ್ತಿಯ ಮಗ ಮತ್ತು ಮಗಳು ಇತ್ತೀಚೆಗಷ್ಟೇ ಬೆಂಗಳೂರಿನಿಂದ ಮರಳಿದ್ದರು. ಅವರಿಬ್ಬರು ಸೇರಿದಂತೆ ವೃದ್ಧನ ಪತ್ನಿ, ಸಹೋದರ, ಸಹೋದರನ ಪತ್ನಿ ಸೇರಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 10 ಮಂದಿಯನ್ನ ಜಿಲ್ಲಾಸ್ಪತ್ರೆಯ ಐಸೋಲೇಷನ್​ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಎಲ್ಲರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

ಜೊತೆಗೆ ವೃದ್ಧ ಇರುತ್ತಿದ್ದ ಅಂಗಡಿಗೆ ಬಂದಿದ್ದವರಿಂದ ಸೋಂಕು ಹರಡಿದೆಯೇ ಅನ್ನೋ ಬಗ್ಗೆಯೂ ತನಿಖೆ ನಡೀತಿದೆ. ವೃದ್ಧನ ಮನೆ ಹಾಗೂ ಅಂಗಡಿ ಸುತ್ತಲಿನ 2 ಕಿ.ಮೀ ವ್ಯಾಪ್ತಿಯನ್ನ ಸೋಂಕಿತ ಪ್ರದೇಶ ಅಂತ ಗುರುತಿಸಲಾಗಿದೆ. ಆ ಪ್ರದೇಶದ ಒಳಗೆ ಹೋಗುವುದು, ಅಲ್ಲಿಂದ ಹೊರಗೆ ಬರುವುದು ನಿಷೇಧಿಸಲಾಗಿದೆ. ಸ್ಥಳೀಯರಿಗೆ ಹಾಲು, ದಿನಪತ್ರಿಕೆ, ದಿನಸಿ ಸಾಮಗ್ರಿ, ಔಷಧಿ, ತರಕಾರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನ ಜಿಲ್ಲಾಡಳಿತದ ಮಾಡಲಿದೆ.

-masthmagaa.com

Contact Us for Advertisement

Leave a Reply