masthmagaa.com:

ಭಾರತ-ಚೀನಾ ಸೇನೆಗಳ ನಡುವೆ ಕಳೆದ ಮೂರು ತಿಂಗಳಿಂದ ಸಂಘರ್ಷ ನಡೆಯುತ್ತಿರುವ ಪೂರ್ವ ಲಡಾಖ್​ನ ವಾಸ್ತವ ನಿಯಂತ್ರಣ ರೇಖೆ (LAC) ಬಳಿ 45 ವರ್ಷಗಳ ಬಳಿಕ ಗುಂಡಿನ ಸದ್ದು ಕೇಳಿಬಂದಿದೆ. ಇದರೊಂದಿಗೆ ಭಾರತ-ಚೀನಾ ಗಡಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಪ್ಯಾಂಗಾಂಗ್ ಸೋ ಸರೋವರದ ದಕ್ಷಿಣ ತೀರದಲ್ಲಿ ಭಾರತದ ಸೇನೆಯು ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಬಂದಿದೆ ಅಂತ ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಈ ಮೂಲಕ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದೆ.

ಚೀನಾದ ಕಳ್ಳಾಟಕ್ಕೆ ಭಾರತೀಯ ಸೇನೆ ಖಡಕ್ ತಿರುಗೇಟು ಕೊಟ್ಟಿದೆ. ‘ಎಲ್​ಎಸಿಯಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಸೇನಾ ಜಮಾವಣೆಯನ್ನು ಕಡಿಮೆ ಮಾಡಲು ಭಾರತ ಬದ್ಧವಾಗಿದ್ದರೆ, ಚೀನಾ ಮಾತ್ರ ಪರಿಸ್ಥಿತಿ ಉಲ್ಬಣಗೊಳ್ಳಲು ಪ್ರಚೋದನಾಕಾರಿ ಚಟುವಟಿಕೆಗಳನ್ನ ಮುಂದುವರಿಸಿದೆ. ಜೊತೆಗೆ ಯಾವುದೇ ಹಂತದಲ್ಲಿ ಭಾರತೀಯ ಸೇನೆಯು ಎಲ್​ಎಸಿಯನ್ನು ದಾಟಿಲ್ಲ ಅಥವಾ ಗುಂಡಿನ ದಾಳಿ ಸೇರಿದಂತೆ ಯಾವುದೇ ಆಕ್ರಮಣಕಾರಿ ಕ್ರಮವನ್ನು ಕೈಗೊಂಡಿಲ್ಲ’ ಅಂತ ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಈ ಮೂಲಕ ಚೀನಾ ಮಾಡಿದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ.

ಸೆಪ್ಟೆಂಬರ್ 7ರಂದು ಚೀನಾದ ಪೀಪಲ್​ ಲಿಬರೇಷನ್ ಆರ್ಮಿ (PLA) ಯೋಧರು ಎಲ್​ಎಸಿ ಉದ್ದಕ್ಕೂ ಇರುವ ಭಾರತೀಯ ಮುಂಚೂಣಿ ನೆಲೆಗಳ ಹತ್ತಿರಕ್ಕೆ ಬರಲು ಪ್ರಯತ್ನಿಸಿದ್ದರು. ಇದನ್ನ ಪ್ರಶ್ನಿಸಿದಾಗ ನಮ್ಮನ್ನು ಬೆದರಿಸಲು ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿದ್ರು. ಹೀಗೆ ನಮ್ಮನ್ನು ಪ್ರಚೋದಿಸಿದ್ರೂ ನಮ್ಮ ಯೋಧರು ಬಹಳ ಸಂಯಮ ಮತ್ತು ಜವಾಬ್ದಾರಿಯುತವಾಗಿ ವರ್ತಿಸಿದ್ರು ಅಂತ ಭಾರತೀಯ ಸೇನೆ ಹೇಳಿದೆ.

ಜೊತೆಗೆ ಶಾಂತಿಯನ್ನು ಕಾಪಾಡಿಕೊಳ್ಳಲು ನಾವು ಬದ್ಧ. ಆದ್ರೆ ಯಾವ ಪರಿಸ್ಥಿತಿಯಲ್ಲೂ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನ ರಕ್ಷಿಸುತ್ತೇವೆ. ಉಭಯ ದೇಶಗಳ ನಡುವೆ ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವಾಗಲೇ ಚೀನಾ ಸೇನೆ ಎಲ್ಲಾ ಒಪ್ಪಂದಗಳನ್ನ ಮುರಿದು ಆಕ್ರಮಣಕಾರಿ ತಂತ್ರಗಳನ್ನ ಕೈಗೆತ್ತಿಕೊಳ್ಳುತ್ತಿದೆ ಅಂತ ಇಂಡಿಯನ್ ಆರ್ಮಿ ಹೇಳಿದೆ.

-masthmagaa.com

Contact Us for Advertisement

Leave a Reply