ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ದಂಧೆ: ಖ್ಯಾತ​ ನಟ-ನಟಿಯರು, ಸಂಗೀತಗಾರರ ಹೆಸರು..!

masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್​ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಸ್ಯಾಂಡಲ್​ವುಡ್​​ನಲ್ಲೂ ‘ನಶೆ’ ವಿಚಾರ ಚರ್ಚೆಗೆ ಬಂದಿದೆ. ಸ್ಯಾಂಡಲ್​ವುಡ್​ನ ಹೆಸರಾಂತ ಸಂಗೀತಗಾರರು ಮತ್ತು ನಟರು ಡ್ರಗ್ಸ್​ ದಂಧೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಅಂತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹೇಳಿದೆ.

ಅಂದ್ಹಾಗೆ ಆಗಸ್ಟ್​ 21ರಂದು ಬೆಂಗಳೂರಿನ ಕಲ್ಯಾಣನಗರದ ರಾಯಲ್ ಸೂಟ್ಸ್​ ಎಂಬ ಹೋಟೆಲ್​ ಅಪಾರ್ಟ್​ಮೆಂಟ್​ ಮೇಲೆ ದಾಳಿ ನಡೆಸಿದ್ದ ಎನ್​ಸಿಬಿ ಅಧಿಕಾರಿಗಳು ಡ್ರಗ್​ ಕಳ್ಳಸಾಗಣೆಯ ದೊಡ್ಡ ಜಾಲವನ್ನು ಭೇದಿಸಿದ್ದರು. ಈ ವೇಳೆ 145 MDMA ಮಾತ್ರೆ ಮತ್ತು ₹2.20 ಲಕ್ಷಕ್ಕೂ ಹೆಚ್ಚು ನಗದನ್ನು ಸೀಜ್ ಮಾಡಲಾಗಿತ್ತು.

ನಂತರದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ‘ನಿಕೂ ಹೋಮ್ಸ್’​ ಮೇಲೆ ದಾಳಿ ಮಾಡಿ 96 MDMA ಮಾತ್ರೆ ಮತ್ತು 180 LSD ಬ್ಲಾಟ್​ಗಳನ್ನ ಸೀಜ್ ಮಾಡಲಾಗಿತ್ತು. ಬಳಿಕ ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ  ಪ್ರಕರಣದ ಕಿಂಗ್​ಪಿನ್​ ಆಗಿದ್ದ ಮಹಿಳೆಯ ಮನೆ ಮೇಲೆ ದಾಳಿ ಮಾಡಿ 270 MDMA ಮಾತ್ರೆಗಳನ್ನ ವಶಕ್ಕೆ ಪಡೆಯಲಾಗಿತ್ತು.

ಈ ಎಲ್ಲಾ ಕಾರ್ಯಾಚರಣೆ ವೇಳೆ ಎಂ. ಅನೂಪ್, ಆರ್. ರವಿಚಂದ್ರನ್ ಮತ್ತು ಅನಿಖಾ ಡಿ. ಎಂಬುವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಕನ್ನಡದ ಹೆಸರಾಂತ ಸಂಗೀತಗಾರರು ಮತ್ತು ನಟರಿಗೆ ಡ್ರಗ್ಸ್ ಪೂರೈಕೆ ಮಾಡಿರೋದು ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಡ್ರಗ್ಸ್​ ಸಪ್ಲೈ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಮತ್ತಷ್ಟು ಜನರನ್ನು ಬೆಂಗಳೂರಿನ ಎನ್​ಸಿಬಿ ಘಟಕದ ಅಧಿಕಾರಿಗಳು ಬಂಧಿಸಲಿದ್ದಾರೆ ಅಂತ NCB ಉಪನಿರ್ದೇಶಕ ಕೆ.ಪಿ.ಎಸ್. ಮಲ್ಹೋತ್ರಾ ಹೇಳಿದ್ದಾರೆ.

ಆಗಸ್ಟ್​​ ಆರಂಭದಲ್ಲಿ ರೆಹಮಾನ್ ಕೆ. ಎಂಬ ವಿದ್ಯಾರ್ಥಿಯನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಈತ ತನ್ನ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಜನರಿಗೆ MDMA ಮಾತ್ರೆಗಳನ್ನ ಪೂರೈಕೆ ಮಾಡ್ತಿದ್ದ. ಈ MDMA ಮಾತ್ರೆಗಳನ್ನ ಈತ ಆನ್​ಲೈನ್​ನಲ್ಲಿ ಬಿಟ್​ಕಾಯಿನ್​ಗಳನ್ನ ಕೊಟ್ಟು ಖರೀದಿಸುತ್ತಿದ್ದ ಅನ್ನೋದು ಕೂಡ ಬೆಳಕಿಗೆ ಬಂದಿದೆ.

MDMA (methylenedioxy-methamphetamine) ಅನ್ನೋದು ಮಾದಕ ವಸ್ತುವಾಗಿದ್ದು ಸಾಮಾನ್ಯವಾಗಿ ಇದನ್ನ Ecstasy ಅಂತ ಕರೆಯಲಾಗುತ್ತದೆ. Ecstasy ಪದದ ಅರ್ಥ ಸ್ವರ್ಗ ಸುಖದ ಅತ್ಯುನ್ನತ ಹಂತ. ಅದರಂತೆ ಈ ಡ್ರಗ್ ಕೂಡ ಪಾರ್ಟಿಗಳಲ್ಲಿ ಮೂಡ್ ಬದಲಾಯಿಸಲು, ಕಾಲ್ಪನಿಕ ಸ್ವರ್ಗ ಲೋಕಕ್ಕೆ ಹೋಗಲು ಬಳಸಲಾಗುತ್ತದೆ. ಅಧಿಕಾರಿಗಳ ಪ್ರಕಾರ ಒಂದು MDMA ಮಾತ್ರೆಯ ಬೆಲೆ ₹1,500ರಿಂದ ₹2,500 ಇದೆ.
-masthmagaa.com
Contact Us for Advertisement

Leave a Reply