ಏಪ್ರಿಲ್​ 14ರ ಬಳಿಕ ಈ ರೀತಿ ಹೋಗುತ್ತಾ ಲಾಕ್​ಡೌನ್​..?

masthmagaa.com:

ಮಾರಣಾಂತಿಕ ಕೊರೋನಾ ವೈರಸ್​ ನಿಯಂತ್ರಣಕ್ಕೆ ತರಲು ದೇಶಾದ್ಯಂತ ಮಾರ್ಚ್​ 25ರಿಂದ ಮೂರು ವಾರಗಳ ಲಾಕ್​ಡೌನ್ ಹೇರಲಾಗಿದೆ. ಸದ್ಯ ನಾವೆಲ್ಲಾ ಕೊನೇ ವಾರದ ಲಾಕ್​ಡೌನ್​ನಲ್ಲಿದ್ದೇವೆ. ಆದ್ರೆ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದು ನೋಡಿದ್ರೆ ಏಪ್ರಿಲ್ 14ರ ಬಳಿಕವೂ ಲಾಕ್​ಡೌನ್ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ವಿಪಕ್ಷ ನಾಯಕರು ಹಾಗೂ ಇತರ ಪಕ್ಷಗಳ ನಾಯಕರಿಗೆ ಬುಧವಾರ ಸುಳಿವು ಕೊಟ್ಟಿದ್ದಾರೆ.

ಆದ್ರೆ ಏಪ್ರಿಲ್ 14ರ ಬಳಿಕ ಸಂಪೂರ್ಣವಾಗಿ ಲಾಕ್​ಡೌನ್ ತೆಗೆಯದಿದ್ದರೂ ನಿಧಾನವಾಗಿ ಒಂದೊಂದೇ ನಿರ್ಬಂಧಗಳನ್ನು ಸಡಿಲಗೊಳಿಸುವ ಸಾಧ್ಯತೆ ಇದೆ. ಕೇರಳದಲ್ಲಿ ಲಾಕೌಡೌನ್​ ಬಳಿಕದ ಪರಿಸ್ಥಿತಿಯನ್ನ ಅವಲೋಕಿಸುವ ಜವಾಬ್ದಾರಿ ಹೊತ್ತಿದ್ದ 17 ಜನರ ಟಾಸ್ಕ್​ ಫೋರ್ಸ್ ತಂಡ  ಲಾಕ್​ಡೌನ್​ ನಿರ್ಬಂಧಗಳನ್ನ ಸಡಿಲಗೊಳಿಸಲು ಮೂರು ಹಂತಗಳನ್ನ ಶಿಫಾರಸು ಮಾಡಿದೆ. ಪ್ರತಿಯೊಂದು ಹಂತದಲ್ಲೂ ಕೆಲವೊಂದು ಮಾನದಂಡಗಳನ್ನ ನಿಗದಿ ಮಾಡಲಾಗಿದೆ. ಈ ಮಾನದಂಡಗಳ ಆಧಾರದ ಮೇಲೆಯೇ ಯಾವ ಜಿಲ್ಲೆಯಲ್ಲಿ ಎಷ್ಟು ಲಾಕ್​​ಡೌನ್​ ಸಡಿಲ ಮಾಡಬೇಕು ಅಂತ ನಿರ್ಧರಿಸಲಾಗುತ್ತೆ.

ಮೊದಲನೇ ಹಂತ:

ಯಾವುದೇ ಜಿಲ್ಲೆಯಲ್ಲಿ, ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ, ಹೋಂ ಕ್ವಾರಂಟೈನ್​ನಲ್ಲಿರುವವರ ಸಂಖ್ಯೆ ಶೇ. 10 ರಷ್ಟು ಏರಿಕೆ ಕಾಣದೇ ಇದ್ದರೆ ಹಾಗೂ ಜಿಲ್ಲೆಯಲ್ಲಿ ಈ ಕಾಯಿಲೆಯ ಕೇಂದ್ರ ಸ್ಥಾನ (ಹಾಟ್​ಸ್ಪಾಟ್​) ಇಲ್ಲದಿದ್ದರೆ  ಅದನ್ನು ಮೊದಲ ಹಂತದ ಜಿಲ್ಲೆಅಂತ ಗುರುತಿಸಲಾಗುತ್ತೆ.

ಮೊದಲನೇ ಹಂತದ ಜಿಲ್ಲೆಗಳಲ್ಲಿ, ಯಾವುದೇ ವ್ಯಕ್ತಿ ಮುಖಕ್ಕೆ ಮಾಸ್ಕ್​ ಧರಿಸದೆ ಹೊರಬರುವಂತಿಲ್ಲ. ಒಂದು ಮನೆಯಿಂದ ಒಬ್ಬ ವ್ಯಕ್ತಿ ಮಾತ್ರ ಅವಶ್ಯಕತೆ ಇದ್ದಾಗ ಮಾತ್ರ ಹೊರಬರಬಹುದು, ಅದು ಕೂಡ ದಿನಕ್ಕೆ 3 ಗಂಟೆ ಅವಧಿಗೆ ಮಾತ್ರ. 65 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯ ಒಳಗೆ ಇರಬೇಕು. ಖಾಸಗಿ ವಾಹನಗಳ ಓಡಾಟಕ್ಕೆ ಸಮ-ಬೆಸ ನಿಯಮ ಜಾರಿಗೆ ತರಬೇಕು. ರೈಲು ಹಾಗೂ ವಿಮಾನ ಹಾರಾಟವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು.

ಎರಡನೇ ಹಂತ:

ಯಾವುದೇ ಜಿಲ್ಲೆಯಲ್ಲಿ, ಕಳೆದ ಎರಡು ವಾರಗಳಿಂದ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ, ಹೋಂ ಕ್ವಾರಂಟೈನ್​ನಲ್ಲಿರುವವರ ಸಂಖ್ಯೆ ಶೇ. 5ರಷ್ಟು ಏರಿಕೆ ಕಾಣದೇ ಇದ್ದರೆ ಹಾಗೂ ಜಿಲ್ಲೆಯಲ್ಲಿ ಈ ಕಾಯಿಲೆಯ ಕೇಂದ್ರ ಸ್ಥಾನ (ಹಾಟ್​ಸ್ಪಾಟ್​) ಇಲ್ಲದಿದ್ದರೆ ಅದನ್ನು ಎರಡನೇ ಹಂತದ ಜಿಲ್ಲೆಅಂತ ಗುರುತಿಸಲಾಗುತ್ತೆ.

ಎರಡನೇ ಹಂತದ ಜಿಲ್ಲೆಗಳಲ್ಲಿ, ಬೆಳಗ್ಗೆ 7.30ರ ಒಳಗೆ ತಮ್ಮ ಮನೆಯಿಂದ 500 ಮೀಟರ್ ದೂರದವರೆಗೆ ವಾಕಿಂಗ್ ಹೋಗಲು ಅವಕಾಶವಿರುತ್ತದೆ. ಆಟೋ, ಟ್ಯಾಕ್ಸಿಗಳು ಓಡಾಡಬಹುದು, ಆದ್ರೆ ಮೂರಕ್ಕಿಂತ ಹೆಚ್ಚು ಪ್ರಯಾಣಿಕರು ಇರಬಾರದು. ಜಿಲ್ಲೆಯ ಒಳಗೆ ಮಾತ್ರ ಬಸ್​ ಸಂಚಾರಕ್ಕೆ ಅವಕಾಶವಿದ್ದು ಒಂದು ಸೀಟಿನಲ್ಲಿ ಓರ್ವ ಪ್ರಯಾಣಿಕ ಮಾತ್ರ ಕೂರಬೇಕು. ಬಸ್​ನಲ್ಲಿ ಯಾರು ನಿಂತುಕೊಂಡು ಪ್ರಯಾಣ ಮಾಡಲು ಅವಕಾಶ ನೀಡಬಾರದು.

ಮೂರನೇ ಹಂತ: 

ಯಾವುದೇ ಜಿಲ್ಲೆಯಲ್ಲಿ, ಕಳೆದ ಎರಡು ವಾರಗಳಿಂದ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ, ಜಿಲ್ಲೆಯಲ್ಲಿ ಈ ಕಾಯಿಲೆಯ ಕೇಂದ್ರ ಸ್ಥಾನ (ಹಾಟ್​ಸ್ಪಾಟ್​) ಇಲ್ಲದಿದ್ದರೆ ಹಾಗೂ ಹೋಂ ಕ್ವಾರಂಟೈನ್​ನಲ್ಲಿರುವವರ ಸಂಖ್ಯೆಯಲ್ಲಿ ಶೇ. 5ರಷ್ಟು ಕುಸಿತ ಕಂಡರೆ ಅಂತಹ ಜಿಲ್ಲೆಗಳನ್ನು ಮೂರನೇ ಹಂತದ ಜಿಲ್ಲೆಅಂತ ಗುರುತಿಸಲಾಗುತ್ತೆ.

ಮೂರನೇ ಹಂತದ ಜಿಲ್ಲೆಗಳಲ್ಲಿ, ಅಂತರ್​ ಜಿಲ್ಲಾ ಬಸ್​ಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆದ್ರೆ ಎಲ್ಲಾ ಬಸ್​ಗಳ ಬದಲಾಗಿ ಮೂರನೇ ಒಂದರಷ್ಟು ಬಸ್​ಗಳು ಮಾತ್ರ ರಸ್ತೆಗೆ ಇಳಿಯಬೇಕು. ದೇಶೀಯ ವಿಮಾನಗಳು ಶೇ.50 ಸೀಟಿಂಗ್ ಕೆಪಾಸಿಟಿ ಮೂಲಕ ಹಾರಾಟ ನಡೆಸಬಹುದು. ರಾಜ್ಯಕ್ಕೆ ಹೊರಗಡೆಯಿಂದ ಬರುವವರು ಕಡ್ಡಾಯ 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಬೇಕು.

-masthmagaa.com

Contact Us for Advertisement

Leave a Reply