ಚೀನಾದ ಷಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಹೆಚ್ಚಾಗ್ತಿದೆ ಸೋಂಕಿತರ ಸಂಖ್ಯೆ

masthmagaa.com:

ಕೊರೋನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಿರುವ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 22 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ. ಇದರಲ್ಲಿ 17 ಪ್ರಕರಣಗಳು ಸ್ಥಳೀಯವಾಗಿದ್ದು, ಈ ಎಲ್ಲಾ ಪ್ರಕರಣಗಳು ಉಘರ್ ಮುಸ್ಲಿಮರು ಹೆಚ್ಚಿರುವ ಷಿನ್​ಜಿಯಾಂಗ್ ಪ್ರಾಂತ್ಯದ ಉರುಂಕಿ ಎಂಬ ಪ್ರದೇಶದಲ್ಲೇ ವರದಿಯಾಗಿದೆ. 5 ಪ್ರಕರಣಗಳು ವಿದೇಶಿ ಪ್ರಯಾಣ ಹಿನ್ನೆಲೆಯನ್ನು ಹೊಂದಿದೆ. ಕಳೆದ 24 ಗಂಟೆಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಷಿನ್​ಜಿಯಾಂಗ್ ಪ್ರಾಂತ್ಯದ ಉರುಂಕಿ ಈಗ ಕೊರೋನಾ ಸ್ಫೋಟದ ಕೇಂದ್ರವಾಗಿದ್ದು, ಇದುವರೆಗೆ ಒಟ್ಟು 47 ಪ್ರಕರಣ ದೃಢಪಟ್ಟಂತಾಗಿದೆ. ಇದಕ್ಕೂ ಮೊದಲು ಬೀಜಿಂಗ್​ ಕೊರೋನಾ ಸ್ಪೋಟದ ಕೇಂದ್ರವಾಗಿತ್ತು. ಆದ್ರೆ ಸತತ 14 ದಿನಗಳಿಂದ ಬೀಜಿಂಗ್​ನಲ್ಲಿ ಯಾವುದೇ ಹೊಸ ಪ್ರಕರಣ ದೃಢಪಟ್ಟಿಲ್ಲ. ಬೀಜಿಂಗ್​ನಲ್ಲಿ ಸೋಂಕನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡಿರುವ ಚೀನಾಗೆ ಈಗ ಉರುಂಕಿ ಪ್ರಕರಣಗಳು ಚಾಲೆಂಜ್ ಆಗಿ ಪರಿಣಮಿಸಿದೆ.

ಅಂದ್ಹಾಗೆ ಚೀನಾದಲ್ಲಿ ಇದುವರೆಗೆ 83,682 ಜನರಿಗೆ ಸೋಂಕು ತಗುಲಿದ್ದು 4,634 ಸೋಂಕಿತರು ಮೃತಪಟ್ಟಿದ್ದಾರೆ. ಕೇವಲ 249 ಸೋಂಕಿತರು ಮಾತ್ರ ಚೀನಾದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಲಕ್ಷಣ ಇಲ್ಲದ 158 ಜನರನ್ನು ಐಸೊಲೇಷನ್​ನಲ್ಲಿ ಇಡಲಾಗಿದೆ.

-masthmagaa.com

Contact Us for Advertisement

Leave a Reply