ಕೊರೋನಾ ಮತ್ತು ಗಡಿ ಸಂಘರ್ಷ ಎರಡೂ ಯುದ್ಧದಲ್ಲಿ ಗೆಲ್ಲುತ್ತೇವೆ: ಅಮಿತ್ ಶಾ

masthmagaa.com:

ಗಡಿ ಭಾಗದಲ್ಲಿ ಚೀನಾವು ಭಾರತದ ಭೂಪ್ರದೇಶವನ್ನು ಕಬಳಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಮಾತೇ ಆಡ್ತಿಲ್ಲ ಅಂತ ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಈ ವಿಚಾರದ ಬಗ್ಗೆ ಚರ್ಚೆ ನಡೆಸಬೇಕು ಅಂದ್ರೆ ಬನ್ನಿ.. ಸಂಸತ್​ನಲ್ಲಿ ಚರ್ಚೆ ಮಾಡೋಣ. 1962ರಿಂದ ಇಲ್ಲಿವರೆಗೆ ಏನೇನು ನಡೆದಿದೆ ಎಲ್ಲವನ್ನೂ ಚರ್ಚಿಸೋಣ. ಆದ್ರೆ ಗಡಿಯಲ್ಲಿ ಯೋಧರು ಹೋರಾಡುತ್ತಿರುವಾಗ.. ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರಗಳನ್ನ ಕೈಗೊಳ್ಳುತ್ತಿರುವಾಗ ಪಾಕಿಸ್ತಾನ ಮತ್ತು ಚೀನಾಗೆ ಸಂತೋಷಪಡಿಸುವಂತಹ ಯಾವುದೇ ಹೇಳಿಕೆ ಕೊಡಬೇಡಿ’ ಅಂತ ಹೇಳಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ‘ಸರೆಂಡರ್ ಮೋದಿ’ ಅನ್ನೋ ಹ್ಯಾಷ್​ಟ್ಯಾಗ್ ಬಳಸಿರುವ ರಾಹುಲ್ ಗಾಂಧಿ ಪಾಕಿಸ್ತಾನ​ ಮತ್ತು ಚೀನಾದಿಂದ ಪ್ರೋತ್ಸಾಹ ಪಡೆದಂತೆ ಕಾಣುತ್ತಿದೆ. ಈ ಬಗ್ಗೆ ಅವರು ಮತ್ತು ಅವರ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತ ವಿರೋಧಿ ಪ್ರಚಾರವನ್ನ ನಿಭಾಯಿಸಲು ಸರ್ಕಾರವು ಸಂಪೂರ್ಣ ಸಾಮರ್ಥ್ಯ ಹೊಂದಿದೆ. ಆದ್ರೆ ಅಂತಹ ದೊಡ್ಡ ಪಕ್ಷದ ಮಾಜಿ ಅಧ್ಯಕ್ಷರು (ರಾಹುಲ್ ಗಾಂಧಿ) ಬಿಕ್ಕಟ್ಟಿನ ಸಮಯದಲ್ಲಿ ಆಳವಿಲ್ಲದ ಮನಸ್ಸಿನ ರಾಜಕೀಯದಲ್ಲಿ ತೊಡಗಿದ್ದು ನೋವಿನ ಸಂಗತಿ ಅಂತ ಅಮಿತ್ ಶಾ ಹೇಳಿದ್ದಾರೆ.

ಇನ್ನು ಭಾರತದ ನೆಲದಲ್ಲಿ ಈಗಲೂ ಚೀನಾ ಸೈನಿಕರು ಇದ್ದಾರಾ ಅಂತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ವಾಸ್ತವ ಗಡಿ ರೇಖೆಯ ಪರಿಸ್ಥಿತಿ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ. ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಅವಶ್ಯಕತೆಬಿದ್ದರೆ ಉತ್ತರ ನೀಡುತ್ತೇನೆ ಎಂದರು. ಜೊತೆಗೆ ಸಂದರ್ಶನವನ್ನು ಕೇವಲ ಕೊರೋನಾ ವಿಚಾರವಾಗಿ ಮಾತನಾಡಲು ಸೀಮಿತಗೊಳಿದ್ರು.

ಇನ್ನು ಕೊರೋನಾ ಆಗಲೀ ಅಥವಾ ಭಾರತ-ಚೀನಾ ಗಡಿಯಲ್ಲಿನ ಸಂಘರ್ಷವಾಗಲೀ ಎರಡೂ ಯುದ್ಧದಲ್ಲಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಗೆಲುವು ಸಾಧಿಸಲಿದೆ ಅನ್ನೋದನ್ನ ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ ಎಂದರು.

-masthmagaa.com

Contact Us for Advertisement

Leave a Reply