masthmagaa.com:

ಅಮೆರಿಕದ ಫೈಝರ್ (Pfizer) ಮತ್ತು ‘ಬಯೋಎನ್​ಟೆಕ್’ (BioNTech) ಅಭಿವೃದ್ಧಿಪಡಿಸಿರುವ ಲಸಿಕೆ 90%ನಷ್ಟು ಪರಿಣಾಮಕಾರಿಯಾಗಿದೆ ಅಂತ ಇತ್ತೀಚೆಗೆ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ರಷ್ಯಾದ ‘ಸ್ಪುಟ್ನಿಕ್ V’ ಲಸಿಕೆ 92%ನಷ್ಟು ಪರಿಣಾಮಕಾರಿಯಾಗಿದೆ ಅಂತ ಕಂಪನಿ ಘೋಷಿಸಿದೆ. ಅಂದ್ರೆ ರಷ್ಯಾ ಲಸಿಕೆಯು ಕೊರೋನಾ ತಗುಲುವುದರಿಂದ 92% ರಕ್ಷಣೆ ನೀಡುತ್ತದೆ ಅನ್ನೋದು ಮಾನವ ಪ್ರಯೋಗದ ವೇಳೆ ಗೊತ್ತಾಗಿದೆ ಅಂತ RDIF (Russian Direct Investment Fund) ಹೇಳಿದೆ. ‘ಸ್ಪುಟ್ನಿಕ್-V’ ಲಸಿಕೆಯ ಎರಡೂ ಡೋಸ್​ಗಳನ್ನ ಪಡೆದ ಮೊದಲ 16,000 ಸ್ವಯಂಸೇವಕರಿಂದ ಬಂದಂತಹ ಫಲಿತಾಂಶದಲ್ಲಿ ಇದು ಬೆಳಕಿಗೆ ಬಂದಿದೆ. ಈ ಲಸಿಕೆಯನ್ನ ಗಮಲೇ ಇನ್​ಸ್ಟಿಟ್ಯೂಟ್ ಮತ್ತು RDIF ಸೇರಿಕೊಂಡು ಅಭಿವೃದ್ಧಿಪಡಿಸಿವೆ.

ಸಾಮಾನ್ಯವಾಗಿ ಲಸಿಕೆಯ ಮಾನವ ಪ್ರಯೋಗ ನಡೆಸುವಾಗ ಅರ್ಧದಷ್ಟು ಸ್ವಯಂಸೇವಕರಿಗೆ ಅಸಲಿ ಲಸಿಕೆ ನೀಡಿದ್ರೆ, ಇನ್ನರ್ಧದಷ್ಟು ಸ್ವಯಂಸೇವಕರಿಗೆ ಪ್ಲಸಿಬೊ ಅಥವಾ ಡೂಪ್ಲಿಕೇಟ್​ ಲಸಿಕೆ ನೀಡಲಾಗುತ್ತದೆ. ಇದೀಗ ಲಸಿಕೆಯ ಮಾನವ ಪ್ರಯೋಗಕ್ಕೆ ಒಳಗಾದ 16,000 ಸ್ವಯಂಸೇವಕರಿಗೆ ‘ಸ್ಪುಟ್ನಿಕ್-V’ ಲಸಿಕೆ ಕೊರೋನಾ ವೈರಾಣುವಿನಿಂದ ಶೇ.92ರಷ್ಟು ರಕ್ಷಣೆ ನೀಡಿರೋದು ಆರಂಭಿಕ ಹಂತದಲ್ಲಿ ಗೊತ್ತಾಗಿದೆ ಅಂತ ಕಂಪನಿ ಘೋಷಿಸಿದೆ.

ಅಂದ್ಹಾಗೆ ಈ ಲಸಿಕೆಯ 3ನೇ ಮತ್ತು ಕೊನೇ ಹಂತದ ಮಾನವ ಪ್ರಯೋಗ ಮುಕ್ತಾಯಗೊಳ್ಳುವ ಮೊದಲೇ ರಷ್ಯಾ ಸರ್ಕಾರ ಲಸಿಕೆಗೆ ಅನುಮೋದನೆ ನೀಡಿತ್ತು. ಹೀಗಾಗಿ ರಷ್ಯಾ ಲಸಿಕೆಯ ಸುರಕ್ಷತೆ ಬಗ್ಗೆ ಸಾಕಷ್ಟು ದೇಶಗಳು ಅನುಮಾನ ವ್ಯಕ್ತಪಡಿಸಿದ್ದವು. ಇದೀಗ ನಮ್ಮ ಲಸಿಕೆ ಕೊರೋನಾದಿಂದ 92%ನಷ್ಟು ರಕ್ಷಣೆ ನೀಡಲಿದೆ ಅಂತ ರಷ್ಯಾ ಘೋಷಿಸಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯ ರಷ್ಯಾ ರಾಜಧಾನಿ ಮಾಸ್ಕೋದ 29 ಕ್ಲಿನಿಕ್​ಗಳಲ್ಲಿ ಸುಮಾರು 40,000 ಸ್ವಯಂಸೇವಕರ ಮೇಲೆ ‘ಸ್ಪುಟ್ನಿಕ್-V’ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ.

-masthmagaa.com

Contact Us for Advertisement

Leave a Reply