masthmagaa.com:

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್​ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವರಿಗೆ ಲಸಿಕೆ ಹಾಕೋದನ್ನ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಲಾಯ್ತು. ಈ ವೇಳೆ ಮೊಹಮ್ಮದ್ ಬಿನ್ ಸಲ್ಮಾನ್ ಸಾಮಾನ್ಯ ನಾಗರಿಕರಂತೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ತಲೆಗೆ​ ‘ಕೆಫಿಯಾ’ ಅಥವಾ ಅರಬ್ ಟೋಪಿ ಹಾಕಿರಲಿಲ್ಲ. ‘ಸೌದಿ ಕಾಮೀಸ್’ ಬದಲು ಮಾಮೂಲಿ ಶರ್ಟ್​ ಧರಿಸಿದ್ದರು. ಸೌದಿ ಯುವರಾಜ ಈ ಗೆಟಪ್​ನಲ್ಲಿ ಕಾಣಿಸಿಕೊಳ್ಳೋದು ಬಹಳ ಅಪರೂಪ.

ಕೆಲ ದಿನಗಳ ಹಿಂದಷ್ಟೇ ಸೌದಿಯಲ್ಲಿ ಲಸಿಕೆ ಹಾಕುವ ಅಭಿಯಾನ ಆರಂಭವಾಗಿತ್ತು. ಸೌದಿ ಸರ್ಕಾರವು ಫೈಝರ್ ಮತ್ತು ಬಿಯೋನ್​​ಟೆಕ್​ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಮೊಹಮ್ಮದ್ ಬಿನ್ ಸಲ್ಮಾನ್​ಗೂ ಫೈಝರ್ ಲಸಿಕೆಯನ್ನೇ ಹಾಕಿರಬಹುದು. ಈ ಮೂಲಕ ಕೊರೋನಾ ಲಸಿಕೆ ಹಾಕಿಸಿಕೊಂಡ ವಿಶ್ವ ನಾಯಕರ ಪಟ್ಟಿಗೆ ಸೌದಿ ಯುವರಾಜ ಕೂಡ ಸೇರಿದ್ದಾರೆ. ಈ ಹಿಂದೆ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮುಂತಾದವರು ಕೂಡ ಲಸಿಕೆ ಹಾಕಿಸಿಕೊಂಡಿದ್ದರು. ಇದರೊಂದಿಗೆ ಲಸಿಕೆ ಬಗ್ಗೆ ಭಯ ಬೇಡ ಅನ್ನೋ ಸಂದೇಶವನ್ನ ಜನರಿಗೆ ರವಾನಿಸಲು ಪ್ರಯತ್ನಿಸಿದ್ದಾರೆ.

ಸೌದಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಜನ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಇದುವರೆಗೆ 3.61 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ಅದರಲ್ಲಿ 3.52 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. 6,168 ಜನ ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply