ವಿದೇಶದಿಂದ ಬೆಂಗಳೂರಿಗೆ ಬಂದವರ ಕೈ ಮೇಲೆ ಬೀಳುತ್ತೆ ಸೀಲ್​..!

masthmagaa.com:

ರಾಜ್ಯದಲ್ಲಿ ಕೊರೋನಾ ವೈರಸ್​ ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ವಿವಿಧ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಒಂದುಕಡೆ ಈಗಾಗಲೇ ಹೇರಿದ್ದ ನಿರ್ಬಂಧವನ್ನ ಮಾರ್ಚ್​ 31ರವರೆಗೆ ಮುಂದುವರಿಸಲಾಗಿದೆ. ಮತ್ತೊಂದುಕಡೆ ಸೋಂಕು ತಗುಲಿದವರು ಹಾಗೂ ಅವರ ಸಂಪರ್ಕಕ್ಕೆ ಬಂದವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇದರ ನಡುವೆ ವಿದೇಶದಿಂದ ಬಂದವರಿಂದಲೇ ಸೋಂಕು ಹರಡುತ್ತಿದೆ ಅನ್ನೋ ಆತಂಕ ಇದೆ. ಹೀಗಾಗಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರನ್ನ ಗುರುತಿಸುವ ಉದ್ದೇಶದಿಂದ ಅವರ ಕೈಗೆ ಸೀಲ್ ಹಾಕುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದಿಳಿದ ಪ್ರಯಾಣಿಕರ ಎಡಗೈ ಮೇಲೆ ಮುದ್ರೆ ಒತ್ತಲಾಗುತ್ತಿದೆ. ಇದರಲ್ಲಿ ‘Proud to Protect.. BENGALURU.. HOME QUARANTINED’ ಅಂತ ಮುದ್ರಿಸಲಾಗಿದೆ. ಅಂದ್ರೆ ‘ರಕ್ಷಣೆಯೇ ಹೆಮ್ಮೆ..  ಬೆಂಗಳೂರು.. ಮನೆಯಲ್ಲೇ ನಿರ್ಬಂಧಕ್ಕೆ ಒಳಪಟ್ಟಿದ್ದಾರೆ’ ಅಂತ. ಜೊತೆಗೆ ಎಲ್ಲಿಯವರೆಗೆ ಮನೆಯಲ್ಲೇ ಇರಬೇಕು ಅನ್ನೋ ದಿನಾಂಕವನ್ನ ಕೂಡ ಮುದ್ರಿಸಲಾಗಿದೆ.

ಈ ಸೀಲ್ ಹಾಕಿಸಿಕೊಂಡವರು ನಿರ್ದಿಷ್ಟ ದಿನಾಂಕದವರೆಗೆ ಮನೆಯಲ್ಲಿ ತಮಗೆ ತಾವು ನಿರ್ಬಂಧದಲ್ಲಿ ಇಟ್ಟುಕೊಳ್ಳಬೇಕು. ಈ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋದು, ಗುಂಪು ಸೇರೋದು ನಿಷೇಧಿಸಲಾಗಿರುತ್ತೆ. ಇನ್ನು ಈ ಸೀಲ್​ ಹಾಕಲು ಅಳಿಸಲಾಗದ ಇಂಕ್​ ಅನ್ನು ಬಳಸಿರೋದ್ರಿಂದ ಸುಲಭವಾಗಿ ಇದು ಅಳಿಸಿ ಹೋಗುವುದಿಲ್ಲ.

ಇದಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಮುದ್ರೆ ಒತ್ತುವ ಈ ಪದ್ಧತಿಯನ್ನ ಜಾರಿಗೆ ತರಲಾಗಿತ್ತು. ಅದರ ಬಗ್ಗೆ ಪರ, ವಿರೋಧದ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಕರ್ನಾಟಕದಲ್ಲೂ ಇದನ್ನ ಜಾರಿಗೊಳಿಸಲಾಗಿದ್ದು, ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.

-masthmagaa.com

Contact Us for Advertisement

Leave a Reply