masthmagaa.com:

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಪಾಟ್ನಾದಲ್ಲಿ ಸುಶಾಂತ್ ಅವರ ತಂದೆ ದಾಖಲಿಸಿದ ಎಫ್​ಐಆರ್ ಸರಿಯಾಗಿದೆ. ಇದನ್ನು ಪ್ರಶ್ನಿಸುವ ಆಯ್ಕೆಯನ್ನು ಕೂಡ ಮಹಾರಾಷ್ಟ್ರಕ್ಕೆ ನಿರಾಕರಿಸಲಾಗಿದ್ದು, ಸಿಬಿಐಗೆ ಮುಂಬೈ ಪೊಲೀಸರು ಸಹಕರಿಸಬೇಕು ಅಂತ ಕೋರ್ಟ್ ಹೇಳಿದೆ.

ಇದರೊಂದಿಗೆ ಮುಂಬೈ ಪೊಲೀಸರೇ ತನಿಖೆ ನಡೆಸಲಿ, ಸಿಬಿಐ ಬೇಡ ಎನ್ನುತ್ತಿದ್ದ ಮಹಾರಾಷ್ಟ್ರ ಸರ್ಕಾರ ಮತ್ತು ಸುಶಾಂತ್ ಅವರ ಮಾಜಿ ಗೆಳತಿ ರಿಹಾ ಚಕ್ರಬರ್ತಿಗೆ ದೊಡ್ಡ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟ್​ ತೀರ್ಪನ್ನು ಬಾಲಿವುಡ್ ನಟಿ ಕಂಗನಾ ರನಾವತ್, ನಟ ಶೇಖರ್ ಸುಮನ್ ಮುಂತಾದವರು ನ್ಯಾಯಕ್ಕೆ ಸಿಕ್ಕ ಅತಿದೊಡ್ಡ ಗೆಲುವು ಅಂತ ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರ ಸಾವು ಪೂರ್ವನಿಯೋಜಿತ ಕೊಲೆ ಅಂತ ಕಂಗನಾ ಹೇಳಿದ ಬಳಿಕವೇ ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು, ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಇನ್ನು ಸುಪ್ರೀಂಕೋರ್ಟ್​ ತೀರ್ಪು ಅದರ ಮೇಲೆ ಜನರಿಗಿದ್ದ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ. ಇವತ್ತಿನ ತೀರ್ಪು ಸುಶಾಂತ್ ಸಿಂಗ್ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಅನ್ನೋದನ್ನ ತೋರಿಸಿಕೊಟ್ಟಿದೆ ಅಂತ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಹೇಳಿದ್ದಾರೆ. ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಬಗ್ಗೆ ಮಾತನಾಡುವ ಹಕ್ಕು ರಿಹಾ ಚಕ್ರಬರ್ತಿಗೆ ಇಲ್ಲ ಅಂತ ಎಂದಿದ್ದಾರೆ.

ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಪರ ವಕೀಲರಾದ ವಿಕಾಸ್ ಸಿಂಗ್, ‘ಸುಪ್ರೀಂಕೋರ್ಟ್​ನ ತೀರ್ಪು ಸುಶಾಂತ್ ಸಿಂಗ್ ರಜಪೂತ್ ಕುಟುಂಬಕ್ಕೆ ಸಿಕ್ಕ ಗೆಲುವು’ ಎಂದಿದ್ದಾರೆ. ​

ಸುಶಾಂತ್ ಅವರ ಸಂಬಂಧಿ ಮತ್ತು ಬಿಹಾರ ಬಿಜೆಪಿ ಶಾಸಕರಾದ ನೀರಜ್ ಸಿಂಗ್ ಬಬ್ಲೂ ಮಾತನಾಡಿ, ‘ಸುಪ್ರೀಂಕೋರ್ಟ್ ಮತ್ತು ಈ ಅಭಿಯಾನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ. ಈಗ ಸುಶಾಂತ್​ಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಬಂತು’ ಅಂತ ಹೇಳಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹಿಸಿದ್ದ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಕೋರ್ಟ್​ ತೀರ್ಪನ್ನು ಸ್ವಾಗತಿಸಿದ್ದಾರೆ. ಸುಶಾಂತ್ ಸಾವು ಸಂಭವಿಸಿ 60ಕ್ಕೂ ಹೆಚ್ಚು ದಿನ ಕಳೆದರೂ ಮುಂಬೈ ಪೊಲೀಸರು ಇದುವರೆಗೆ ಎಫ್​ಐಆರ್ ದಾಖಲಿಸಿಲ್ಲ. ಹೀಗಾಗಿ ಮುಂಬೈ ಪೊಲೀಸರು, ಮಹಾರಾಷ್ಟ್ರ ಸರ್ಕಾರ, ರಿಹಾ ಚಕ್ರಬರ್ತಿ ಮತ್ತು ಬಾಲಿವುಡ್​ನ ಕೆಲ ಮಂದಿ ಸೇರಿಕೊಂಡು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

-masthmagaa.com

Contact Us for Advertisement

Leave a Reply