ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ಶಿಫಾರಸು ಮಾಡಿದ ಬಿಹಾರ ಸರ್ಕಾರ

masthmagaa.com:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ನಾನಾ ತಿರುವು ಪಡೆಯುತ್ತಿರುವ ನಡುವೆಯೇ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಆಗ್ರಹಿಸಿದ್ದಾರೆ. ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತನಾಡಿರುವ ಅವರು ಸಿಬಿಐ ತನಿಖೆಗೆ ಆದೇಶಿಸಲು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಬಿಹಾರ ಸರ್ಕಾರ ಶಿಫಾರಸು ಮಾಡಿದೆ ಅಂತ ಜೆಡಿಯು ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ.

ಈಗಾಗಲೇ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತು ಬಿಹಾರ ಪೊಲೀಸರ ನಡುವೆ ಸಂಘರ್ಷ ನಡೆಯುತ್ತಿದೆ. ಸುಶಾಂತ್ ಸಿಂಗ್ ಅವರ ಸಾವು ಮುಂಬೈನಲ್ಲಿ ಸಂಭವಿಸಿರೋದ್ರಿಂದ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸುಶಾಂತ್ ಅವರ ತಂದೆ ಬಿಹಾರದಲ್ಲಿ ನಟಿ ರಿಹಾ ಚಕ್ರಬರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ ತನಿಖೆ ನಡೆಸಲು ಬಿಹಾರ ಪೊಲೀಸರ ಒಂದು ತಂಡ ಮುಂಬೈಗೆ ಬಂದಿದೆ.

ಆದ್ರೆ ತನಿಖೆಗೆ ಮುಂಬೈ ಪೊಲೀಸರು ಬಿಹಾರ ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ ಅಂತ ಹೇಳಲಾಗ್ತಿದೆ. ಎಷ್ಟರಮಟ್ಟಿಗೆ ಅಂದ್ರೆ ಬಿಹಾರದಿಂದ ಬಂದಿದ್ದ ಐಪಿಎಸ್ ಅಧಿಕಾರಿಯನ್ನು ಮುಂಬೈನಲ್ಲಿ ಕ್ವಾರಂಟೈನ್ ಮಾಡಿಡಲಾಗಿದೆ. ಇದಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಸಿಬಿಐ ತನಿಖೆಗೆ ಬಿಹಾರ ಸರ್ಕಾರ ಶಿಫಾರಸು ಮಾಡಿದೆ. ಈಗ ಸಿಬಿಐ ತಂಡವು ಬಿಹಾರ ಸರ್ಕಾರದ ಮನವಿಯನ್ನು ಅಂಗೀಕರಿಸಿ ತನಿಖೆ ಆರಂಭಿಸಬೇಕಿದೆ.

ನಿನ್ನೆಯಷ್ಟೇ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ವಿಡಿಯೋ ಬಿಡುಗಡೆ ಮಾಡಿ, ‘ನನ್ನ ಮಗನ ಪ್ರಾಣಕ್ಕೆ ಅಪಾಯವಿದೆ ಅಂತ ಫೆಬ್ರವರಿ 25ರಂದು ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದೆ. ಜೂನ್ 14ರಂದು ನನ್ನ ಮಗ ಮೃತಪಟ್ಟಿದ್ದಾನೆ. ಹೀಗಾಗಿ ಫೆಬ್ರವರಿ 25ರಂದು ನನ್ನ ದೂರಿನಲ್ಲಿ ಉಲ್ಲೇಖಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದೆ. ಸಾವು ಸಂಭವಿಸಿ 40 ದಿನಗಳಾದ್ರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಪಾಟ್ನಾದಲ್ಲಿ ದೂರು ದಾಖಲಿಸಿದ್ದೇನೆ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply