ಜುಲೈನಲ್ಲಿ ಪರೀಕ್ಷೆ.. ಆಗಸ್ಟ್ 1ರಿಂದ ಕಾಲೇಜು ಓಪನ್: ಯುಜಿಸಿ

masthmagaa.com:

ದೇಶದಲ್ಲಿ ಕೊರೋನಾ ಹಾವಳಿ ಹಿನ್ನೆಲೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಅದರಂತೆ ಯುಜಿಸಿ ಅಡಿಯಲ್ಲಿ ಬರುವ ವಿವಿಗಳು ಹಾಗೂ ಕಾಲೇಜುಗಳಲ್ಲಿ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ 1ರಿಂದ ಹಾಗೂ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1ರಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ರಾಜ್ಯಗಳಲ್ಲಿ ಜುಲೈನಲ್ಲಿ ಪರೀಕ್ಷೆಗಳನ್ನ ನಡೆಸಲಾಗುವುದು. ಪರೀಕ್ಷಾ ಸಮಯವನ್ನು 3 ಗಂಟೆಯಿಂದ 2 ಗಂಟೆಗೆ ಇಳಿಸುವುದು ಸೇರಿದಂತೆ ಪರ್ಯಾಯ ಮತ್ತು ಸರಳೀಕೃತ ಪರೀಕ್ಷೆಗಳನ್ನ ಅಳವಡಿಸಿಕೊಳ್ಳಲು ವಿವಿಗಳಿಗೆ ಸಲಹೆ ನೀಡಲಾಗಿದೆ. ಪರೀಕ್ಷೆಗಳನ್ನು ಆಫ್‌ಲೈನ್ / ಆನ್‌ಲೈನ್ ಮೋಡ್‌ನಲ್ಲಿ ನಡೆಸಬಹುದು. ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಾಲಿ ಮತ್ತು ಹಿಂದಿನ ಸೆಮಿಸ್ಟರ್​ಗಳ ಆಂತರಿಕ ಮೌಲ್ಯಮಾಪನ ಆಧರಿಸಿ ಶ್ರೇಯಾಂಕವನ್ನ ನೀಡಲಾಗುವುದು.

ಸೆಪ್ಟೆಂಬರ್​ನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾದ ನಂತರ ವಾರದಲ್ಲಿ 6 ದಿನ ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಜೊತೆಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಪ್ರಯಾಣ ಇತಿಹಾಸವನ್ನು ದಾಖಲಿಸಲಾಗುವುದು. ಇನ್ನು ಎಂ.ಫಿಲ್ ಮತ್ತು ಪಿ.ಹೆಚ್.​ಡಿ ವಿದ್ಯಾರ್ಥಿಗಳಿಗೆ 6 ತಿಂಗಳ ಹೆಚ್ಚುವರಿ ಅವಧಿಯನ್ನ ನೀಡಲಾಗುತ್ತದೆ ಅಂತ ಯುಜಿಸಿ ಹೇಳಿದೆ. ಪ್ರತಿಯೊಂದು ಯುನಿವರ್ಸಿಟಿ ಕೂಡ ಕೋವಿಡ್-19 ಸೆಲ್ ಅನ್ನೂ ಓಪನ್ ಮಾಡಬೇಕು.

ಮತ್ತೊಂದು ಕಡೆ 10 ಮತ್ತು 12ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಲಾಕ್​ಡೌನ್ ತೆರೆದ ಬಳಿಕ ನಡೆಸಲಾಗುವುದು ಅಂತ ಸಿಬಿಎಸ್​ಇ ಸ್ಪಷ್ಟನೆ ನೀಡಿದೆ. ಈ ಮೂಲಕ ಪರೀಕ್ಷೆಗಳು ನಡೆಯಲ್ಲ ಎಂಬ ವದಂತಿ ಹಾಗೂ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.

-masthmagaa.com

Contact Us for Advertisement

Leave a Reply