masthmagaa.com:

ಅಮೆರಿಕದ ಫೈಝರ್ (Pfizer) ಮತ್ತು ಜರ್ಮನಿಯ ಬಯೋಎನ್​ಟೆಕ್ (BioNTech) ಕಂಪನಿ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ಕೊಟ್ಟಿದೆ. ಇದರೊಂದಿಗೆ ಈ ಲಸಿಕೆಗೆ ಅನುಮೋದನೆ ಕೊಟ್ಟ ಜಗತ್ತಿನ ಮೊದಲ ದೇಶ ಎನಿಸಿಕೊಂಡಿದೆ. ಅನುಮೋದನೆ ಅಂದ್ರೆ ಲಸಿಕೆಯನ್ನ ಆ ದೇಶದಲ್ಲಿ ಬಳಸಲು ನೀಡುವ ಲೈಸೆನ್ಸ್ ಅಂತ ಹೇಳಬಹುದು. ಫೈಝರ್ ಲಸಿಕೆಯು ಮುಂದಿನ ವಾರದಿಂದ ಬ್ರಿಟನ್​ನಲ್ಲಿ ಸಿಗಲಿದೆ ಅಂತ ಕಂಪನಿ ಹೇಳಿದೆ. ಅಂದ್ಹಾಗೆ ಈ ಲಸಿಕೆಯ 4 ಕೋಟಿ ಡೋಸ್​ಗಳನ್ನ ಬ್ರಿಟನ್ ಸರ್ಕಾರ ಖರೀದಿಸಿದೆ. ಫೈಝರ್ ಲಸಿಕೆಯು 95% ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಿಸಿಕೊಂಡಿತ್ತು. ಯುವಕರಿಂದ ಹಿಡಿದು 65 ವರ್ಷ ಮೇಲ್ಪಟ್ಟವರಿಗೂ ಈ ಲಸಿಕೆ ಪರಿಣಮಕಾರಿ ಅಂತಾನೂ ಹೇಳಿತ್ತು. ಆದ್ರೆ ಭಾರತ ಮತ್ತು ಬಡ ದೇಶಗಳಿಗೆ ಈ ಲಸಿಕೆಯ ಶೇಖರಣೆ ಮತ್ತು ಪೂರೈಕೆ ಕಷ್ಟವಾಗಲಿದೆ. ಯಾಕಂದ್ರೆ ಈ ಲಸಿಕೆಯನ್ನ ಮೈನಸ್ 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಇಡಬೇಕಾಗುತ್ತದೆ. ಭಾರತದಲ್ಲಿ ಅಂತಹ ಸ್ಟೋರೇಜ್ ವ್ಯವಸ್ಥೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಲಸಿಕೆಯ ನಿರ್ವಹಣೆ ಕಷ್ಟಸಾಧ್ಯ. ಆದ್ರೆ ಕಂಪನಿ ಮಾತ್ರ 5 ದಿನದ ಮಟ್ಟಿಗಾದ್ರೆ 2-8 ಡಿಗ್ರಿ ಸೆಲ್ಸಿಯಸ್​ನಲ್ಲಿ ಫ್ರಿಜ್​ನಲ್ಲಿ ಇಡಬಹುದು ಅಂತ ಹೇಳಿಕೊಂಡಿದೆ.

ಫೈಝರ್ ಲಸಿಕೆ ವಿಶೇಷತೆ ಏನು?

ಫೈಝರ್ ಲಸಿಕೆ ಬೇರೆ ಲಸಿಕೆಗಳಿಗಿಂತ ಭಿನ್ನ. ಸಾಮಾನ್ಯವಾಗಿ ಬೇರೆ ಲಸಿಕೆಗಳನ್ನ ಕೊರೋನಾ ವೈರಾಣುವಿನ ದುರ್ಬಲ ರೂಪವನ್ನ ಬಳಸಿಕೊಂಡು ಉತ್ಪಾದಿಸಲಾಗುತ್ತದೆ. ಆದ್ರೆ ಫೈಝರ್ ಲಸಿಕೆ ಒಂದು mRNA (Messenger RNA) ಲಸಿಕೆಯಾಗಿದೆ. ಇದರಲ್ಲಿ ನಿಜವಾದ ವೈರಾಣುವನ್ನ ಬಳಸಿಕೊಳ್ಳುವುದಿಲ್ಲ. ಬದಲಾಗಿ ವೈರಾಣುವಿನ ಜೆನೆಟಿಕ್ ಕೋಡ್​ಗಳನ್ನ ಬಳಸಿ ಲಸಿಕೆ ಉತ್ಪಾದಿಸಲಾಗುತ್ತದೆ. ಇಲ್ಲಿ ವೈರಾಣುವಿನ ಅಗತ್ಯ ಇಲ್ಲದಿರೋದ್ರಿಂದ ಈ ಲಸಿಕೆಯನ್ನ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬಹುದು. ಜೊತೆಗೆ ಮನುಷ್ಯನ ದೇಹಕ್ಕೆ ವೈರಾಣುವಿನ ಯಾವುದೇ ಅಂಶ ಸೇರದೇ ಇರೋದ್ರಂದ mRNA ಲಸಿಕೆಗಳು ಹೆಚ್ಚು ಸುರಕ್ಷಿತ ಅಂತ ನಂಬಲಾಗುತ್ತೆ. ಈ ಲಸಿಕೆಯನ್ನ ದೇಹಕ್ಕೆ ಚುಚ್ಚಿದಾಗ ಅದು ಜೀವಕೋಶಗಳಿಗೆ ಪ್ರವೇಶಿಸಿ ಪ್ರತಿಕಾಯಗಳು (Antibodies) ಸೃಷ್ಟಿಸುವಂತೆ ಹೇಳುತ್ತದೆ. ಈ ಪ್ರತಿಕಾಯಗಳನ್ನ ದೇಹದ ರೋಗ ನಿರೋಧಕ ವ್ಯವಸ್ಥೆ ಗುರುತಿಸಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಅದನ್ನ ಸಿದ್ಧಪಡಿಸುತ್ತದೆ.

-masthmagaa.com

Contact Us for Advertisement

Leave a Reply