masthmagaa.com:

ಅಮೆರಿಕದಲ್ಲಿ ಹೊಸ ಅಲೆ ಎಬ್ಬಿಸಿದ ಜೋಸೆಫ್ ಬೈಡೆನ್ ಯಾರು..? ಡೆಮಾಕ್ರಟಿಕ್ ಪಕ್ಷದ ಇಷ್ಟು ದೊಡ್ಡ ನಾಯಕರಾಗಿ ಅವರು ಬೆಳೆದಿದ್ದು ಹೇಗೆ..? ಬೈಡೆನ್‍ ಜೀವನದ ರೋಚಕ ಮತ್ತು ಭಯಾನಕ ಇತಿಹಾಸವನ್ನ ನೋಡ್ತಾ ಹೋಗೋಣ..

ಜೋಸೆಫ್ ಬೈಡೆನ್.. ಡೆಮಾಕ್ರಟಿಕ್ ಪಕ್ಷದ ಈ ನಾಯಕ ಹುಟ್ಟಿದ್ದು 1942ರ ನವೆಂಬರ್ 20ರಂದು.. ಪೆನ್ಸಿಲ್‍ವೇನಿಯಾ ಇವರ ಹುಟ್ಟೂರು.. ಇವರ ತಂದೆ ಜೋಸೆಫ್ ರಾಬಿನೆಟ್ಟೆ ಬೈಡೆನ್, ತಾಯಿ ಕ್ಯಾಥೆರಿನ್ ಯುಜೀನಿಯಾ.. ಇವರ ಕುಟುಂಬ ತುಂಬಾ ಶ್ರೀಮಂತ ಕುಟುಂಬವೇನೂ ಆಗಿರಲಿಲ್ಲ.. ಹಾಗಂತ ಬಡ ಕುಟುಂಬವೂ ಆಗಿರಲಿಲ್ಲ. ಒಂದು ಮಟ್ಟಿಗೆ ಎಲ್ಲಾ ಅಗತ್ಯತೆಗಳನ್ನು ಪೂರೈಸಿಕೊಳ್ಳಬಲ್ಲ ಮಿಡಲ್ ಕ್ಲಾಸ್ ಫ್ಯಾಮಿಲಿ. ಶಾಲೆ ಮತ್ತು ಕಾಲೇಜಿನ ದಿನಗಳಲ್ಲಿ ಬೈಡೆನ್ ಒಳ್ಳೆಯ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಆದ್ರೂ ಕೂಡ 1965ರಲ್ಲಿ ಡೆಲಾವೇರ್​ ಯೂನಿವರ್ಸಿಟಿಯಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರದ ಡಿಗ್ರಿಯನ್ನು ಪಡೆದುಕೊಂಡ್ರು. ನಂತರ 1968ರಲ್ಲಿ ಕಾನೂನು ಪದವಿ ಪಡೆದು ಲಾಯರ್ ಆದ್ರು. ಆದ್ರೂ ಕೂಡ ಮಾರ್ಕ್ಸ್​​ ಕಾರ್ಡ್‍ನಲ್ಲಿ ಕಳಪೆ ಪ್ರದರ್ಶನ ಎದ್ದು ಕಾಣುತ್ತಿತ್ತು. ಆದ್ರೆ ಸ್ಪೋರ್ಟ್ಸ್​ ಮತ್ತು ಸಾರ್ವಜನಿಕ ಭಾಷಣದಲ್ಲಿ ಇವರು ಸದಾ ಮುಂದೆ ಇರ್ತಾ ಇದ್ರು. ಫುಟ್ಬಾಲ್, ಬೇಸ್ ಬಾಲ್ ಅಂದ್ರೆ ಬೈಡೆನ್‍ಗೆ ತುಂಬಾ ಇಷ್ಟ..

ಬೈಡೆನ್ ಕಾಲೇಜಿನಲ್ಲಿ ಅಸೈನ್‍ಮೆಂಟ್ ಕಾಪಿ ಮಾಡಿ ಸಿಕ್ಕಿಬಿದ್ದಿದ್ರು. ಅವರ ಕಾಲೇಜಿನಲ್ಲಿ ಒಟ್ಟು 688 ವಿದ್ಯಾರ್ಥಿಗಳ ಪೈಕಿ 506ನೇ ರ್ಯಾಂಕ್ ಪಡೆದಿದ್ರು. ನಂತರ ಕಾನೂನು ಪದವಿ ಪಡೆದಾಗ 85 ವಿದ್ಯಾರ್ಥಿಗಳ ಪೈಕಿ 76ನೇ ರ್ಯಾಂಕ್ ಪಡೆದುಕೊಂಡಿದ್ರು. ಅಂದ್ರೆ ಯಾವಾಗಲೂ ಲಾಸ್ಟ್​ನಿಂದಲೇ ಫಸ್ಟ್ ಇರುತ್ತಿದ್ರು ಈ ಜೋಸೆಫ್ ಬೈಡೆನ್.. ಮಾತಿನಲ್ಲೂ ಅವರಿಗೊಂದು ಸಮಸ್ಯೆ ಇತ್ತು. ಅದೇ ತೊದಲುವಿಕೆ. ನೀವು ಈಗಲೂ ಅವರ ಡಿಬೇಟ್‍ಗಳನ್ನು ನೋಡಿದ್ರೆ ಗೊತ್ತಾಗುತ್ತೆ. ಅವರು ಆಗಾಗ ಸ್ವಲ್ಪ ತೊದಲುತ್ತಾರೆ. ಆದ್ರೆ ಮೊದಲು ಈ ಸಮಸ್ಯೆ ಜಾಸ್ತಿ ಇತ್ತು. ಅವರು ಭಾಷಣ ಅಭ್ಯಾಸ ಮಾಡಿ ಮಾಡಿ ಈ ತೊದಲುವಿಕೆಯನ್ನು ಸಾಕಷ್ಟು ದೂರ ಮಾಡಿದ್ರು.

ಬೈಡೆನ್ ತುಂಬಾ ಸಣ್ಣ ವಯಸ್ಸಿನಲ್ಲೇ ತಾನು ರಾಜಕಾರಣಿಯಾಗಬೇಕು ಅನ್ನೋದನ್ನ ಡಿಸೈಡ್ ಮಾಡಿಕೊಂಡಿದ್ರು. ಕಾನೂನು ಪದವಿ ಪಡೆದ ಬಳಿಕ 1969ರಲ್ಲಿ ಲಾಯರ್ ಪ್ರಾಕ್ಟಿಸ್ ಮಾಡೋಕೆ ಶುರು ಮಾಡಿದ್ರು. ನಂತರ ವಕೀಲಿ ವೃತ್ತಿ ಮಾಡುತ್ತಿರುವಾಗಲೇ ರಾಜಕೀಯ ಪ್ರವೇಶಿಸಲು ಪ್ಲಾನ್ ಮಾಡಿದ್ರು. ಅಮೆರಿಕ ಸಂಸತ್‍ನಲ್ಲಿ ಎರಡು ಸದನಗಳಿವೆ.. ಕೆಳಮನೆಯನ್ನು ಹೌಸ್ ಆಫ್ ರೆಪ್ರೆಸೆಂಟಿಟಿವ್ ಅಂತ ಕರೆದ್ರೆ, ಮೇಲ್ಮನೆಯನ್ನು ಸೆನೆಟ್ ಅಂತ ಕರೆಯಲಾಗುತ್ತೆ. ಸೆನೆಟ್‍ನಲ್ಲಿ ಅಮೆರಿಕದ 50 ರಾಜ್ಯಗಳಿಂದ ಪ್ರತಿಯೊಂದು ರಾಜ್ಯಕ್ಕೆ ಎರಡೆರಡರಂತೆ ಒಟ್ಟು 100 ಸ್ಥಾನಗಳಿವೆ.. ಆದ್ರೆ ಬೈಡೆನ್ ನೇರವಾಗಿ ಸೆನೆಟ್ ಚುನಾವಣೆಗೆ ಸ್ಪರ್ಧಿಸಲಿಲ್ಲ. ಅವರು ಮೊದಲು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ರು. 1970ರಿಂದ 1972ರವರೆಗೆ ಕೌಂಟಿ ಕೌನ್ಸಿಲ್‍ನಲ್ಲಿ ಸೇವೆ ಸಲ್ಲಿಸಿದ್ರು. ಈ ವೇಳೆ ತಮ್ಮ ವಕೀಲಿ ವೃತ್ತಿಯ ಅಭ್ಯಾಸವನ್ನು ಕೂಡ ಮುಂದುವರಿಸಿದ್ರು. ನಂತರ 1972ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಡೆಲಾವೇರ್​ನಿಂದ ಸೆನೆಟ್‍ಗೆ ಸ್ಪರ್ಧಿಸಿದ್ರು. ಆದ್ರೆ ಈ ಸಮಯದಲ್ಲಿ ಬೈಡೆನ್ ಬಳಿ ಜಾಸ್ತಿ ದುಡ್ಡಿರಲಿಲ್ಲ. ಅದರ ನಡುವೆಯೂ ಎಲೆಕ್ಷನ್ ಸ್ಪರ್ಧಿಸಿದ್ರು. ಅದೃಷ್ಟವೆಂಬಂತೆ ಆ ಚುನಾವಣೆಯಲ್ಲಿ ಗೆದ್ದ ಬೈಡೆನ್, ಅಮೆರಿಕದ ಯಂಗೆಸ್ಟ್ ಸೆನೆಟರ್ ಅಂತ ಕರೆಸಿಕೊಂಡರು.

ಆದ್ರೆ ಚುನಾವಣೆ ನಡೆದ ಕೆಲವೇ ವಾರಗಳಲ್ಲಿ ಒಂದು ದೊಡ್ಡ ದುರಂತ ನಡೆದುಹೋಯ್ತು. ಜೋ ಬೈಡೆನ್ ಅವರ ಹೆಂಡತಿ, ಒಂದೂವರೆ ವರ್ಷದ ಮಗಳು ಮತ್ತು ಇಬ್ಬರು ಗಂಡು ಮಕ್ಕಳು ಡಿಸೆಂಬರ್ 18ರಂದು ಕ್ರಿಸ್‍ಮಸ್ ಶಾಪಿಂಗ್‍ಗೆ ಹೋಗಿದ್ರು. ಆದ್ರೆ ಈ ವೇಳೆ ನಡೆದ ಅಪಘಾತವೊಂದರಲ್ಲಿ ಹೆಂಡತಿ ಮತ್ತು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ್ರು. ಇಬ್ಬರು ಗಂಡು ಮಕ್ಕಳು ಉಳಿದರೂ ಗಂಭೀರವಾಗಿ ಗಾಯಗೊಂಡಿದ್ದರು. ಇದು ಜೋ ಬೈಡೆನ್ ಜೀವನದ ಅತಿದೊಡ್ಡ ಆಘಾತವಾಗಿತ್ತು. ಈ ಸಮಯದಲ್ಲಿ ಏನು ಮಾಡ್ಬೇಕು ಅಂತ ಗೊತ್ತಾಗದೇ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಸೆನೆಟರ್ ಹುದ್ದೆಗೆ ರಾಜೀನಾಮೆ ನೀಡೋಕೆ ಮುಂದಾಗಿದ್ರು ಜೋ ಬೈಡೆನ್. ಆಗ ಅವರನ್ನು ಸೆನೆಟ್‍ನ ಹಿರಿಯ ನಾಯಕರಾಗಿದ್ದ ಮೈಕ್ ಮ್ಯಾನ್ಸ್‍ಫೀಲ್ಟ್ ತಡೆದಿದ್ರು.

ನಂತರ ಬೈಡೆನ್ 1975ರಲ್ಲಿ ಜಿಲ್ ಎಂಬುವವರನ್ನು ಭೇಟಿಯಾಗ್ತಾರೆ. ಅವರಿಬ್ಬರೂ 1977ರಲ್ಲಿ ಮದುವೆಯಾದ್ರು. ಆದ್ರೂ ಕೂಡ ಸೆನೆಟರ್ ಆಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ರು. ಇವರು ಗಲ್ಫ್ ವಾರ್​ಗೆ ವಿರುದ್ಧವಾಗಿದ್ರು. ಆದ್ರೆ ಅಫ್ಘಾನಿಸ್ಥಾನ ವಿಚಾರದಲ್ಲಿ ಅಮೆರಿಕದ ನಿಲುವನ್ನು ಬೈಡೆನ್ ಬೆಂಬಲಿಸಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಬೈಡೆನ್ ಪರಿಸರ ವಿಷಯಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ರು. ಇಂದಿನ ದಿನಗಳಲ್ಲಿ ನಮಗೆ ಬೇಕಾಗಿರೋದು ಕ್ಲೈಮೇಟ್ ಚೇಂಜ್ ವಿಚಾರವನ್ನು ಸೀರಿಯಸ್ ಆಗಿ ಪರಿಗಣಿಸುವ ನಾಯಕ. ಯಾಕಂದ್ರೆ ಕ್ಲೈಮೇಟ್ ಇಲ್ಲದೇ ಹೋದ್ರೆ ಈ ಭೂಮಿ ಮೇಲೆ ಒಂದು ಜೀವವೂ ಉಳಿಯೋಕೆ ಸಾಧ್ಯವಿಲ್ಲ. ಇದು ಅಷ್ಟೊಂದು ಸೀರಿಯಸ್ ವಿಚಾರ ಆದ್ರೂ ಕೂಡ ಯಾರೂ ಅದರ ಕಡೆ ಗಮನ ಹರಿಸುತ್ತಲೇ ಇಲ್ಲ. ಆದ್ರೆ ಬೈಡೆನ್ ಈ ಬಗ್ಗೆ 1970ರ ದಶಕದಿಂದಲೂ ಹೇಳುತ್ತಾ ಬಂದಿದ್ದಾರೆ. ದೀರ್ಘಕಾಲದವರೆಗೆ ಸೆನೆಟರ್ ಆಗಿ ಸೇವೆ ಸಲ್ಲಿಸಿದ ಬೈಡೆನ್, ನ್ಯಾಯಾಂಗ ಸಮಿತಿಯ ಮುಖ್ಯಸ್ಥರಾಗಿ 1987ರಿಂದ 1995ರವರೆಗೆ ಸೇವೆ ಸಲ್ಲಿಸಿದ್ರು. ಅಲ್ಲದೆ ಹಲವು ಅಪರಾಧದ ಕಾನೂನುಗಳ ರೂಪುರೇಷೆ ಸಿದ್ಧಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ರು. ವೈಲೆಂಟ್ ಕ್ರೈಂ ಕಂಟ್ರೋಲ್ & ಲಾ ಎನ್‍ಫೋರ್ಸ್‍ಮೆಂಟ್ ಆಕ್ಟ್ 1994ರ ಹುಟ್ಟಿಗೆ ಕಾರಣವಾದ್ರು. ಇದನ್ನು ಬೈಡೆನ್ ಕ್ರೈಂ ಲಾ ಅಂತ ಕೂಡ ಕರೆಯಲಾಗುತ್ತೆ. ಹೀಗೆ ಬೈಡೆನ್ 1972ರಿಂದ 2008ರವರೆಗೆ ನಿರಂತರವಾಗಿ ಸೆನೆಟರ್ ಆಗಿ ಆಯ್ಕೆಯಾಗ್ತಾ ಬಂದ್ರು. ಅದೂ ಕೂಡ ಶೇ.60ರಷ್ಟು ಮತಗಳೊಂದಿಗೆ. ಹೀಗಾಗಿ 2006ರ ಬಳಿಕ ಪಕ್ಷದಲ್ಲಿ ಬೈಡೆನ್‍ಗೆ ಉನ್ನತ ಹುದ್ದೆಗಳನ್ನು ನೀಡಲಾಯ್ತು..

1988ರಲ್ಲೇ ಬೈಡೆನ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಕ್ಯಾಂಪೇನ್ ಶುರು ಮಾಡಿದ್ರು. ಆದ್ರೆ ಅದು ಸಕ್ಸಸ್ ಆಗಲಿಲ್ಲ. 2008ರಲ್ಲಿ ಮತ್ತೊಮ್ಮೆ ಪ್ರಸಿಡೆನ್ಶಿಯಲ್ ಕ್ಯಾಂಪೇನ್ ಶುರು ಮಾಡಿದ್ರು. ಈ ವೇಳೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯ ರೇಸ್‍ನಲ್ಲಿ ಬೈಡೆನ್‍ಗೆ ಎದುರಾಳಿಯಾಗಿ ಇದ್ದವರು ಬರಾಕ್ ಒಬಾಮಾ. ಹೀಗಾಗಿ ಒಬಾಮಾ ಜನಪ್ರಿಯತೆ ಮುಂದೆ ಬೈಡೆನ್ ನಿಲ್ಲಲು ಸಾಧ್ಯವಾಗಲಿಲ್ಲ. ಜೊತೆಗೆ ಫಂಡ್ ರೈಸ್ ಮಾಡಲು ಕೂಡ ಸಾಧ್ಯವಾಗಲಿಲ್ಲ. ಹೀಗಾಗಿ ಅವರು ನಾಮಿನೇಷನ್ ವಾಪಸ್ ಪಡೆದುಕೊಂಡು, ಒಬಾಮಾರನ್ನೇ ಮುಂದೆ ಬಿಟ್ರು. ಅಷ್ಟೇ ಅಲ್ಲ, ಒಬಾಮಾಗೆ ಕಂಪ್ಲೀಟಾಗಿ ಸಪೋರ್ಟ್ ಮಾಡಿದ್ರು. ಎಷ್ಟರ ಮಟ್ಟಿಗೆ ಅಂದ್ರೆ ಬೈಡೆನ್ ಮತ್ತು ಒಬಾಮಾ ಜೊತೆಯಾಗಿಯೇ ಪ್ರಚಾರ ಮಾಡಿದ್ರು. ಅಲ್ಲದೆ ಒಬಾಮಾ ಬೈಡೆನ್‍ರನ್ನು ರನ್ನಿಂಗ್ ಮೇಟ್ ಎಂದು ಘೋಷಿಸಿಬಿಟ್ರು. ಇಬ್ಬರೂ ಒಳ್ಳೆ ಫ್ರೆಂಡ್ಸ್ ಆಗ್ಬಿಟ್ರು. ಅದರಂತೆ ಒಬಾಮಾ ಅಧ್ಯಕ್ಷರಾದ್ರೆ, ಬೈಡೆನ್ ಉಪಾಧ್ಯಕ್ಷರಾದ್ರು. ಮೊದಲ ಅವಧಿ 2009ರಿಂದ 2013ರವರೆಗೆ ಇತ್ತು. ವಿದೇಶಗಳಿಂದ ಸೇನೆ ಹಿಂಪಡೆಯುವ ನೀತಿ, ಆರ್ಥಿಕ ಹಿಂಜರಿತದ ವೇಳೆ ಒಬಾಮಾ ತೆಗೆದುಕೊಂಡ ಕ್ರಮ ಮತ್ತು ಒಬಾಮಾ ಕೇರ್​ನಂತಹ ಯೋಜನೆಗಳಿಗೆ ಬೈಡೆನ್ ಮುಕ್ತವಾಗಿ ಬೆಂಬಲಿಸಿದ್ರು. 2013ರಲ್ಲಿ ಬೈಡೆನ್ ಮೊದಲ ಅವಧಿ ಅಂತ್ಯವಾಯ್ತು. ನಂತರ 2013ರಿಂದ 2017ರವರೆಗೆ ಎರಡನೇ ಅವಧಿಗೂ ಬೈಡೆನ್ ಉಪಾಧ್ಯಕ್ಷರಾಗಿ ಆಯ್ಕೆಯಾದ್ರು. ಒಬಾಮಾ ಎರಡನೇ ಅವಧಿ ಮುಗಿದ ಬಳಿಕ 2017ರ ಚುನಾವಣೆಗೆ ಅಧ್ಯಕ್ಷೀಯ ಅಭ್ಯರ್ಥಿ ರೇಸ್‍ನಲ್ಲಿ ಬೈಡೆನ್ ಮತ್ತೊಮ್ಮೆ ಕ್ಯಾಂಪೇನ್ ಶುರು ಮಾಡಿದ್ರು. ಆದ್ರೆ ಹಿಲರಿ ಕ್ಲಿಂಟನ್ ಬೈಡೆನ್‍ರನ್ನು ಹಿಂದಿಕ್ಕಿದ್ರು. ಆದ್ರೆ ಈಗ 2020ರಲ್ಲಿ ಜೋ ಬೈಡೆನ್‍ಗೆ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಅವಕಾಶ ಸಿಕ್ಕಿತು. ಈ ಮೂಲಕ ಓದಿನಲ್ಲಿ ಲಾಸ್ಟ್​ನಿಂದ ಫಸ್ಟ್​ನಲ್ಲಿ ಇರ್ತಿದ್ದ ಬೈಡೆನ್ ಇಂದು ಅಮೆರಿಕದ ಪ್ರಥಮ ಪ್ರಜೆಯಾಗಿದ್ದಾರೆ.

ಜೋ ಬೈಡೆನ್ ಓರ್ವ ಉದಾರವಾದಿ ನಾಯಕ. ಅವರ ಪಾಲಿಸಿಗಳು ಕೂಡ ತುಂಬಾ ಉದಾರವಾಗಿರುತ್ತವೆ. ಈ ಹಿಂದೆ LGBT ವಿರುದ್ಧ ಕಾನೂನು ತಂದಾಗ ಬೈಡೆನ್ ಓಪನ್ ಆಗಿ ವಿರೋಧಿಸಿದ್ದರು. ಎಲ್‍ಜಿಬಿಟಿ ಸಮುದಾಯಕ್ಕೆ ಮುಕ್ತವಾಗಿ ಬೆಂಬಲ ವ್ಯಕ್ತಪಡಿಸಿದ್ರು. ವಲಸಿಗರ ವಿರುದ್ಧ ಟ್ರಂಪ್ ತೆಗೆದುಕೊಂಡ ನಿರ್ಧಾರಗಳನ್ನು ಕೂಡ ವಿರೋಧಿಸಿದ್ರು. ಈ ರೀತಿ ತಮ್ಮ ಉದಾರವಾದಿ ನೀತಿಗಳಿಂದಲೇ ಫೇಮಸ್ ಆದವರು. ಹೀಗಾಗಿ ಇದೀg ಅಮೆರಿಕದ ಅಧ್ಯಕ್ಷರಾದ ಬಳಿಕವೂ ಅದೇ ರೀತಿ ಉದಾರ ತತ್ವಗಳಿಂದ ಒಬಾಮಾ ರೀತಿಯಲ್ಲಿ ಜನರ ಮನಗೆಲ್ತಾರಾ ಅಂತ ಕಾದು ನೋಡಬೇಕು. ಆದ್ರೆ ಬೈಡೆನ್ ಗೆಲುವು ಭಾರತಕ್ಕೆ ಒಳ್ಳೆಯದಾ ಅನ್ನೋ ಪ್ರಶ್ನೆ ಮೂಡುತ್ತೆ. ಈ ಹಿಂದೆ ಮೋದಿ ಸರ್ಕಾರದ ನಿರ್ಧಾರಗಳನ್ನು ಟ್ರಂಪ್ ಒಪ್ತಾ ಇದ್ರು. ಆದ್ರೆ ಬೈಡೆನ್‍ ನೀತಿಗಳನ್ನು ನೋಡಿದ್ರೆ ಮೋದಿ ಸರ್ಕಾರದ ಪಾಲಿಸಿಗಳನ್ನು ಒಪ್ಪೋದು ಡೌಟ್ ಅಂತಾನೇ ಹೇಳ್ಬೋದು.

-masthmagaa.com

Contact Us for Advertisement

Leave a Reply