1,900ರಲ್ಲಿ ಪ್ರಪಂಚ, ಭಾರತ ಹೇಗಿತ್ತು ಗೊತ್ತಾ..?

masthmagaa.com:

ಫ್ರೆಂಡ್ಸ್, ಇಂದಿನಿಂದ 120 ವರ್ಷಗಳ ಹಿಂದೆ ಅಂದ್ರೆ 1,900ರಲ್ಲಿ ಜನರ ಜೀವನ ದರ ಸಾಮಾನ್ಯವಾಗಿ 47 ವರ್ಷಗಳಾಗಿದ್ವು. ಅಂದ್ರೆ ಆವರೇಜ್ ಆಗಿ ಜನ ಇಷ್ಟು ವರ್ಷ ಬದುಕ್ತಾ ಇದ್ರು. ಆದ್ರೆ ಇಂದು ವೈದ್ಯಲೋಕದ ಸಹಾಯದಿಂದ ಮನುಷ್ಯರು 79 ವರ್ಷದವರೆಗೆ ಬದುಕಿರ್ತಾರೆ. ಆದ್ರೆ ಹೆಚ್ಚಿನವರು ಹೇಳೋದು ಆಗಿನ ಕಾಲದಲ್ಲೇ ಜನ ಜಾಸ್ತಿ ವರ್ಷ ಬದುಕ್ತಾ ಇದ್ರು.. ಈಗಲೇ ಆಯಸ್ಸು ಕಡಿಮೆಯಾಗ್ತಿದೆ ಅಂತ.. ಆದ್ರೆ ವಿಶ್ವದ ಸರಾಸರಿ ತೆಗೆದುಕೊಂಡ್ರೆ ಲೆಕ್ಕಚಾರ ವಿರುದ್ಧವಾಗಿತ್ತು. ಆ ಕಾಲದಲ್ಲಿ ಭಾರತದಲ್ಲಿ ಬೀಡಿ ಎಳೆಯೋದು, ವಿದೇಶದಲ್ಲಿ ಸಿಗರೇಟ್ ಎಳೆಯೋದು ಸಾಮಾನ್ಯ ವಿಚಾರವಾಗಿತ್ತು. ಜನರು ಕೆಲಸ ಮಾಡ್ತಾ ಮಾಡ್ತಾ, ಊಟ ಮಾಡ್ತಾ ಬೀಡಿ ಎಳೀತಾ ಇದ್ರು. ಕೆಲವರು ಆಸ್ಪತ್ರೆಯಲ್ಲೂ ಕೂಡ ಸಿಗರೇಟ್ ಎಳೀತಾ ಇದ್ರು. ನಗರಗಳ ಬಗ್ಗೆ ಮಾತಾಡೋದಾದ್ರೆ, ತುಂಬಾ ಸಣ್ಣ, ಸಿಂಪಲ್ ಮತ್ತು ಗಲೀಜಿನಿಂದ ಕೂಡಿತ್ತು.

ಆಗಿನ ಕಾಲದಲ್ಲಿ ಪಾರ್ಕ್ ರೋ ಬಿಲ್ಡಿಂಗ್ ವಿಶ್ವದ ಅತಿದೊಡ್ಡ ಮತ್ತು ಎತ್ತರದ ಕಟ್ಟಡ ಅನ್ನೋ ಹೆಸರು ಪಡೆದಿತ್ತು. ಇದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದ್ದ ಈ ಕಟ್ಟಡ, ಕೇವಲ 199 ಮೀಟರ್ ಎತ್ತರವಿತ್ತು. ಮಾನವ ನಿರ್ಮಿತ ಅತಿದೊಡ್ಡ ರಚನೆ ಅಂದ್ರೆ ಅದು ಪ್ಯಾರಿಸ್‍ನ 300 ಮೀಟರ್ ಎತ್ತರದ ಐಫೆಲ್ ಟವರ್ ಆಗಿತ್ತು. ಆದ್ರೆ ಐಫೆಲ್ ಟವರ್ ಇಂದಿನ ಬುರ್ಜ್ ಖಲೀಫಾದ ಅರ್ಧಕ್ಕಿಂತಲೂ ಕಡಿಮೆ ಎತ್ತರ ಹೊಂದಿದೆ. ಅದು ಬಿಡಿ.. ಇನ್ನೂ ಆಶ್ಚರ್ಯದ ವಿಚಾರ ಏನ್ ಗೊತ್ತಾ.. ಆಗ ಯಾವುದೇ ವಾಹನದ ಅತಿ ಹೆಚ್ಚು ಸ್ಪೀಡ್ ಅಂದ್ರೆ 10 ಕಿಲೋಮೀಟರ್ ಪರ್ ಅವರ್ ಆಗಿತ್ತು. ಇಂದು 140 ಕಿಲೋಮೀಟರ್ ಸ್ಪೀಡಲ್ಲಿ ಬೇಕಾದ್ರೂ ಹೋಗ್ಬೋದು. ಜೊತೆಗೆ ಸಲಿಂಗ ಕಾಮ ಶಿಕ್ಷಾರ್ಹ ಅಪರಾಧವಾಗಿತ್ತು. ಅದೇ ರೀತಿ ಬಡವರು ಕೆನಡಾ ಪ್ರವೇಶಿಸುವಂತೆ ಇರಲಿಲ್ಲ. ಅಂದಿನ ಕಾಲದಲ್ಲಿ ಶೇ.95ರಷ್ಟು ಮಹಿಳೆಯರ ಹೆರಿಗೆ ಮನೆಗಳಲ್ಲೇ ನಡೆಯುತ್ತಿತ್ತು. ಅಂದ್ರೆ ಹೆಚ್ಚಿನ ಮಕ್ಕಳು ಮನೆಯಲ್ಲೇ ಹುಟ್ಟುತ್ತಿದ್ರು. ಹೀಗಾಗಿ ಹೆರಿಗೆ ಸಂದರ್ಭದಲ್ಲಿ ಮಹಿಳೆ ಅಥವಾ ಮಕ್ಕಳ ಸಾವಿನ ಪ್ರಮಾಣ ಕೂಡ ಜಾಸ್ತಿಯೇ ಇತ್ತು. ಅದೇ ಇವತ್ತಿನ ದಿನಗಳಲ್ಲಿ ಶೇ.99ರಷ್ಟು ಮಹಿಳೆಯರ ಹೆರಿಗೆ ಆಸ್ಪತ್ರೆಗಳಲ್ಲಿ ನಡೆಯುತ್ತೆ.

ಭಾರತದ ವಿಚಾರಕ್ಕೆ ಬಂದ್ರೆ ಆಗಿನ ಭಾರತ ಈಗ ಇದ್ದಂತೆ ಇರಲಿಲ್ಲ. ಆಗ ಅಲ್ಲಲ್ಲಿ ಸಣ್ಣ ಸಣ್ಣ ತೋಟಗಳು ಮತ್ತು ಬೃಹದಾಕಾರದ ಅರಣ್ಯಗಳಿದ್ದವು.. ಎಲ್ಲಿ ನೋಡಿದ್ರೂ ದಟ್ಟ ಹಸಿರು ಕಂಗೊಳಿಸುತ್ತಿತ್ತು. ತೋಟವೂ ಎಂಥಾ ಜಾಗದಲ್ಲಿ ಇರುತ್ತಿತ್ತು ಅಂದ್ರೆ ಕತ್ತಲಾದ ಬಳಿಕ ಆ ಜಾಗಕ್ಕೆ ಹೋಗಲು ಕೂಡ ಜನ ಹೆದರುತ್ತಿದ್ರು. ಅಂಥಾ ನಿರ್ಜನ ಪ್ರದೇಶವಾಗಿರುತ್ತಿತ್ತು. ಜನಸಂಖ್ಯೆ ಬಗ್ಗೆ ಮಾತಾಡೋದಾದ್ರೆ 1900ರಲ್ಲಿ ಭಾರತದ ಜನಸಂಖ್ಯೆ 24 ಕೋಟಿಯಾಗಿತ್ತು. ಅದು ಕೂಡ ಆಗ ಭಾರತ ಈಗಿನಂತೆ ಇರಲಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶವನ್ನೂ ಒಳಗೊಂಡಿತ್ತು. ಅದೇ ವಿಶ್ವದ ಜನಸಂಖ್ಯೆ 200 ಕೋಟಿಯಷ್ಟಿತ್ತು. ಆದ್ರೀಗ 700 ಕೋಟಿ ದಾಟಿ ಮುನ್ನುಗ್ತಾ ಇದೆ. ಈಗ ಸಾಮಾನ್ಯವಾಗಿ ಎಲ್ಲರೂ ಟೈಂ ಪಾಸ್ ಮಾಡೋಕೆ ಮೊಬೈಲ್ ಯೂಸ್ ಮಾಡ್ತಾರೆ. ಆದ್ರೆ ಆ ಕಾಲದಲ್ಲಿ ಜನ ಫ್ರೀಯಾಗಿದ್ದಾಗ ಗ್ರಾಮದ ಒಂದು ಸ್ಥಳದಲ್ಲಿ ಕುಳಿತು ಮಾತನಾಡಿಕೊಳ್ತಾ ಇದ್ರು. ಪುಸ್ತಕಗಳನ್ನು ಓದ್ತಾ ಇದ್ರು. ವಿವಿಧ ಸ್ಪರ್ಧಾತ್ಮಕ ಆಟಗಳನ್ನು ಆಡುತ್ತಿದ್ರು. ತಲ್ವಾರ್ ಕಲೆಯನ್ನು ಕಲಿಯುತ್ತಿದ್ರು. ಇದಲ್ಲದೆ ಹಳ್ಳಿಗಳಲ್ಲಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಜನ ತಮ್ಮ ಇಡೀ ದಿನವನ್ನು ಹೊಲ, ಗದ್ದೆಗಳಲ್ಲೇ ಕಳೆಯುತ್ತಿದ್ರು. ಸಂಜೆ ಮನೆಗೆ ಬರುತ್ತಿದ್ದ ಅವರು, ಊಟವಾದ ಬಳಿಕ ಭಜನೆ, ಕೀರ್ತನೆಗಳ ಮೂಲಕ ಕಾಲ ಕಳೆಯುತ್ತಿದ್ದರು. ಅದೇ ರೀತಿ ವಿದೇಶಗಳ ವಿಚಾರಕ್ಕೆ ಬಂದ್ರೆ ಫುಟ್ಬಾಲ್, ಬೇಸ್‍ಬಾಲ್, ಟೆನ್ನಿಸ್, ಗೋಲ್ಫ್​​​​ಗಳಂತ ಕ್ರೀಡೆಗಳಲ್ಲಿ ತಮ್ಮ ಫ್ರೀ ಟೈಂ ಕಳೀತಾ ಇದ್ರು.

ದುಡ್ಡು ಇರೋ ಕೆಲವರು ಹವ್ಯಾಸಕ್ಕಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಭಾರತದಲ್ಲಿ ಈಗ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಪ್ಯಾಂಟ್, ಬರ್ಮುಡಾ, ಟೀ ಶರ್ಟ್ಸ್​​​​, ಶರ್ಟ್ಸ್​​​​ ಹಾಕ್ತೀವಿ.. ಆದ್ರೆ ಆಗಿನ ಕಾಲದಲ್ಲಿ ಹೀಗಿರಲಿಲ್ಲ. ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಹಣ್ ಹಣ್ಣು ಮುದುಕರವರೆಗೆ ಎಲ್ಲರೂ ಧೋತಿ ಧರಿಸುತ್ತಿದ್ರು. ಧೋತಿ-ಕುರ್ತಾ, ಧೋತಿ-ಕಮೀಜ್ ಭಾರತೀಯರ ಪ್ರಮುಖ ವಸ್ತ್ರವಾಗಿತ್ತು. ಇನ್ನು ಸಂಬಳದ ವಿಚಾರಕ್ಕೆ ಬಂದ್ರೆ ಅಂದು ಭಾರತದಲ್ಲಿ ದಿನಗೂಲಿ ಮಾಡುವವರು ಪ್ರತಿದಿನ 30 ಪೈಸೆ ಪಡೆಯುತ್ತಿದ್ರು. ಅಂದ್ರೆ ತಿಂಗಳಿಗೆ 10 ರೂಪಾಯಿಯೂ ಸಂಬಳ ಇರಲಿಲ್ಲ. ಯಾರದ್ದದ್ರೂ ಜೇಬಲ್ಲಿ 3-4 ರೂಪಾಯಿ ಇದ್ರೂ ಕೂಡ ಅವರನ್ನು ಶ್ರೀಮಂತ ಅಂತ ಭಾವಿಸಲಾಗುತ್ತಿತ್ತು. 120 ವರ್ಷಗಳ ಹಿಂದೆ ನೋಟುಗಳೇ ಇರಲಿಲ್ಲ.. ಬರೀ ಕಾಯಿನ್‍ಗಳ ಮೂಲಕ ವ್ಯಾಪಾರ, ವಹೀವಾಟು ನಡೀತಾ ಇತ್ತು. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1917ರಲ್ಲಿ 1 ರೂಪಾಯಿ ನೋಟನ್ನು ಮುದ್ರಿಸಲಾಗಿತ್ತು. ಇದಕ್ಕೂ ಮುನ್ನ ಚಿನ್ನ, ಬೆಳ್ಳಿ, ತಾಮ್ರ ಮತ್ತು ಅಲ್ಯೂಮಿನಿಯಂ ನಾಣ್ಯಗಳಿದ್ದವು. ಇಂದಿನ ರೂಪಾಯಿಗೆ ಹೋಲಿಸಿದ್ರೆ ಇವುಗಳ ಮೌಲ್ಯ ತುಂಬಾ ದೊಡ್ಡದಾಗಿತ್ತು. ಜನರ ಬಳಿ ದುಡ್ಡು ಮತ್ತು ಆಭರಣಗಳು ಕೂಡ ಇರ್ತಾ ಇದ್ವು.. ಇವುಗಳನ್ನು ಇಡೋಕೆ ಅವರ್ಯಾರ ಬಳಿಯೂ ಲಾಕರ್​​​ಗಳು ಇರಲಿಲ್ಲ. ಅಂದಮಾತ್ರಕ್ಕೆ ಕಳ್ಳರೇ ಇರಲಿಲ್ಲ ಅಂತ ಅಲ್ಲ.. ಬದಲಾಗಿ ಆಗಿನ ಕಾಲದ ಜನ ತಮ್ಮ ದುಡ್ಡು, ಆಭರಣಗಳನ್ನು ಮಡಕೆಯಲ್ಲಿ ತುಂಬಿ ತಮ್ಮ ಮನೆಯ ಅಕ್ಕಪಕ್ಕದಲ್ಲಿ ಹುಗಿದಿಡ್ತಾ ಇದ್ರು. ಹೀಗೆ ಹೂತಿಟ್ಟ ಖಜಾನೆಯೇ ಅವರ ಪಾಲಿನ ಲಾಕರ್ ಆಗಿತ್ತು. ಮದುವೆಯಂತಹ ಸಮಾರಂಭದ ವೇಳೆ ಆ ಖಜಾನೆ ಉಪಯೋಗಕ್ಕೆ ಬರ್ತಾ ಇತ್ತು.

ಅಂದಿನ ಕಾಲದ ಹೆಚ್ಚಿನ ಜನ ಧಾರ್ಮಿಕತೆಗೆ ಹೆಚ್ಚಿನ ಮಹತ್ವ ನೀಡ್ತಾ ಇದ್ರು. ಜೊತೆಗೆ ಭೂತ, ಪ್ರೇತದ ಕಥೆಗಳ ಬಗ್ಗೆಯೂ ನಂಬಿಕೆ ಇಡ್ತಾ ಇದ್ರು. ಮನೆಗಳ ಬಗ್ಗೆ ಮಾತಾಡೋದಾದ್ರೆ, ಹೆಚ್ಚಿನವರು ಮಣ್ಣಿನಿಂದ ಮಾಡಲಾದ ಸಣ್ಣ ಸಣ್ಣ ಮನೆಗಳನ್ನು ಹೊಂದಿದ್ರು. ಗ್ರಾಮಗಳ ರಸ್ತೆಗಳು ಕೂಡ ತುಂಬಾ ಸಣ್ಣದಾಗಿದ್ದವು. ಯಾಕಂದ್ರೆ ಆಗ ದೊಡ್ಡ ದೊಡ್ಡ ವಾಹನಗಳು ಇರಲಿಲ್ಲ. ಹೀಗಾಗಿ ಸಣ್ಣ ಸಣ್ಣ ರಸ್ತೆಗಳ ಮೂಲಕವೇ ಜೀವನ ನಡೆದು ಹೋಗ್ತಿತ್ತು. ಎತ್ತಿನ ಗಾಡಿ ಮೂಲಕ ಹೆಚ್ಚಿನವರು ಪ್ರಯಾಣ ಮಾಡ್ತಾ ಇದ್ರು. ಅದನ್ನೂ ಕೂಡ ನಿಲ್ಲಿಸಲು ಒಂದು ಪ್ರತ್ಯೇಕವಾದ ಸ್ಥಳ ಇರ್ತಾ ಇತ್ತು. ಹೆಚ್ಚಿನ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ದೂರದ ಪ್ರಯಾಣ ಕಷ್ಟಕರ ಮತ್ತು ಲೇಟ್ ಆಗ್ತಾ ಇತ್ತು. ಮೊದಲೇ ವಾಹನಗಳ ಸ್ಪೀಡ್ ಕಡಮೆ.. ಇನ್ನು ರಸ್ತೆಯೂ ಸರಿಯಿಲ್ಲದಿದ್ರೆ ಬೇಗ ಹೋಗೋದು ಹೇಗೆ ಅಲ್ವಾ..? ಹೀಗಾಗಿ ಜನರೂ ಅಷ್ಟೆ.. ಮದುವೆ ವೇಳೆ ಅಕ್ಕಪಕ್ಕದ ಗ್ರಾಮಗಳಲ್ಲೇ ಸಂಬಂಧಗಳನ್ನು ಹುಡುಕ್ತಾ ಇದ್ರು.

-masthmagaa.com

Contact Us for Advertisement

Leave a Reply