ಕಾಂಗ್ರೆಸ್, ಉಗ್ರಪ್ಪ, ಸಲೀಂ, ಡಿಕೆಶಿ, ಡೀಲ್! ಏನಿದು ವಿವಾದ?

masthmagaa.com:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಪಕ್ಷದ ಮುಖಂಡ ವಿ.ಎಸ್. ಉಗ್ರಪ್ಪ ಮತ್ತು ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ನಡುವೆ ನಡೆದ ಸಂಭಾಷಣೆಯ ತುಣುಕು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸುದ್ದಿಗೋಷ್ಠಿ ನಡೆಸೋವಾಗ ಮೈಕ್ ಆಫ್​ ಆಗಿದೆ ಅನ್ಕೊಂಡೋ ಅಥವಾ ಮೈಕ್​ನಲ್ಲಿ ಕೇಳಿಸಲ್ಲ ಅನ್ಕೊಂಡೋ ಉಗ್ರಪ್ಪ ಮತ್ತು ಸಲೀಂ ಗುಸುಗುಸು ಮಾತಾಡಿಕೊಂಡ ಮಾತುಗಳು ಕ್ಯಾಮರಾ ಕಣ್ಣಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಇವರ ಸಂಭಾಷಣೆಯಲ್ಲಿ ಪರ್ಸೆಂಟೇಜ್​, ​ಡಿಕೆ ಹೆಸರು ಹಾಗೂ ಇತರ ಮೂವರ ಹೆಸರು ಬರುತ್ತೆ. ಎಂ.ಎ. ಸಲೀಂ ಮೊದಲು ಮಾತನಾಡಿ, 6ರಿಂದ 8 ಪರ್ಸೆಂಟ್​ ಇತ್ತು ಸಾರ್​. ಅದನ್ನ 12 ಪರ್ಸೆಂಟ್ ಮಾಡಿಸಿದ್ದಾರೆ. ಇದರಲ್ಲಿ ಡಿಕೆದು ಅಡ್ಜಸ್ಟ್​ಮೆಂಟ್​ ಇದೆ. ಉಪ್ಪಾರ್, ಜಿ.ಶಂಕರ್, ಹನುಮಂತಪ್ಪ ಎಲ್ಲಾ ಇದ್ದಾರೆ. ಇದು ದೊಡ್ಡ ಸ್ಕ್ಯಾಂಡಲ್​. ಕೆದಕುತ್ತಾ ಹೋದ್ರೆ ಇವರದ್ದು ಹೊರಗೆ ಬರುತ್ತೆ. ನಿಮಗೆ ಗೊತ್ತಲಾ ಸಾರ್​, ಈ ಮುಳಗುಂದನೇ 50ರಿಂದ 100 ಕೋಟಿ ಮಾಡಿಕೊಂಡಿದ್ದಾನೆ. ಈ ಮುಳಗುಂದ ಬರೀ ಕಲೆಕ್ಷನ್ ಗಿರಾಕಿ. ಅವನೇ ಇಷ್ಟು ಮಾಡಿಕೊಂಡಿದ್ದಾನೆ. ಇನ್ನು ಈ ಡಿಕೆ ಹತ್ರ ಎಷ್ಟಿರಬಹುದು ಲೆಕ್ಕ ಹಾಕಿ.. ಅಂತ ಎಂ.ಎ. ಸಲೀಂ ಹೇಳ್ತಾರೆ. ಈ ವೇಳೆ ಉಗ್ರಪ್ಪ, ನಾವೆಲ್ಲಾ ಪಟ್ಟು ಹಿಡಿದು ಅಧ್ಯಕ್ಷ ಮಾಡಿಸಿದ್ದು. ಬಟ್​ ಇದೆಲ್ಲಾ ಕಾರಣದಿಂದ ತಕ್ಕಡಿ ಏಳ್ತಿಲ್ಲ ಅಂತ ಹೇಳ್ತಾರೆ. ಇದೇ ವೇಳೆ ಮತ್ತೆ ಸಲೀಂ ಮಾತನಾಡಿ, ಡಿಕೆಶಿ ಮಾತನಾಡೋದು ಒಂದ್​ರೀತಿ ಕುಡುಕರ ಥರ ಇರುತ್ತೆ. ಲೋ ಬಿಪಿನಾ ಏನು ಅಂತ ಗೊತ್ತಿಲ್ಲ. ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಹೇಗಿದೆ ನೋಡಿ ಸರ್​. ಖಡಕ್ ಅಂದ್ರೆ ಖಡಕ್​ ಅಂತಾರೆ. ಬಟ್​ ಇಲ್ಲಿ ಎಂ.ಎ. ಸಲೀಂ ಮತ್ತು ಉಗ್ರಪ್ಪ ಯಾವುದರ ಬಗ್ಗೆ ಮಾತನಾಡಿದ್ದಾರೆ ಅನ್ನೋದು ಸ್ಪಷ್ಟ ಆಗಿಲ್ಲ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್​​ಗೆ ಮುಜುಗರ ಆಗಿದೆ. ಇದರ ಬೆನ್ನಲ್ಲೇ ವಿ.ಎಸ್​.ಉಗ್ರಪ್ಪ ಮತ್ತೆ ಸುದ್ದಿಗೋಷ್ಠಿ ನಡೆಸಿ, ಡಿಕೆಶಿ ಬಗ್ಗೆ ಬೇರೆಯವರು ಹೀಗೆ ಮಾತನಾಡುತ್ತಿದ್ದಾರೆ ಅಂತ ಸಲೀಂ ನನ್ನ ಕಿವಿಯಲ್ಲಿ ಹೇಳಿದ್ರು. ಇದ್ದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿಕೆಶಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಅಂದ್ರು. ಬಳಿಕ ಸ್ವತಃ ಡಿಕೆಶಿ ಸುದ್ದಿಗೋಷ್ಠಿ ನಡೆಸಿ, ನಾನು ಯಾವುದೇ ಪರ್ಸೆಂಟೇಜ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಅಂತ ಹೇಳಿದ್ರು. ಇದೆಲ್ಲದರ ಬೆನ್ನಲ್ಲೇ ಕಾಂಗ್ರೆಸ್​ ಶಿಸ್ತು ಪಾಲನಾ ಸಮಿತಿ, ಸಲೀಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಉಚ್ಚಾಟಿಸಿದೆ. ಉಗ್ರಪ್ಪ ಅವರಿಗೆ ಅಶಿಸ್ತಿನ ನೋಟಿಸ್‌ ನೀಡಿದೆ.

-masthmagaa.com

Contact Us for Advertisement

Leave a Reply