masthmagaa.com:

ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯಲ್ಲಿರುವ ಬಾಲಿವುಡ್​ ಹಿರಿಯ ನಟ ಅಮಿತಾಬ್ ಬಚ್ಚನ್​ ಅವರ ಆರೋಗ್ಯ ಸ್ಥಿರವಾಗಿದ್ದು ಸಣ್ಣ ಪ್ರಮಾಣದ ರೋಗ ಲಕ್ಷಣಗಳಿವೆ ಅಂತ ವೈದ್ಯರು ತಿಳಿಸಿದ್ದಾರೆ. 77 ವರ್ಷ ವಯಸ್ಸಿನ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ 44 ವರ್ಷ ವಯಸ್ಸಿನ ಅಭಿಷೇಕ್ ಬಚ್ಚನ್​ಗೆ ಶನಿವಾರ ಕೊರೋನಾ ಸೋಂಕು ದೃಢಪಟ್ಟಿತ್ತು. ತಕ್ಷಣ ಇಬ್ಬರನ್ನೂ ಮುಂಬೈನ ಪ್ರತಿಷ್ಠಿತ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೀನಿಯರ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿರೋ ನಾನಾವತಿ ಆಸ್ಪತ್ರೆಯ ವೈದ್ಯ ಡಾ. ಅಬ್ದುಲ್ ಸಮದ್ ಅನ್ಸಾರಿ, ‘ದೊಡ್ಡ ಐಕಾನ್ ಹಾಗೂ ಅವರ ಪುತ್ರನಿಗೆ ಚಿಕಿತ್ಸೆ ನೀಡುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಸಣ್ಣ ಪ್ರಮಾಣದ ರೋಗ ಲಕ್ಷಣಗಳಿವೆ.  ಸಾಮಾನ್ಯವಾಗಿ ಸೋಂಕು ತಗುಲಿದ 10ರಿಂದ 12 ದಿನಗಳಲ್ಲಿ ದೇಹದ ಮೇಲೆ ರೋಗದ ಗರಿಷ್ಠ ಪರಿಣಾಮ ಕಂಡುಬರುತ್ತದೆ. ಆದ್ರೆ ಅಮಿತಾಬ್ ಬಚ್ಚನ್ ಅವರಿಗೆ ರೋಗ ಲಕ್ಷಣ ಕಾಣಿಸಿಕೊಂಡು 5 ದಿನ ಆಗಿರಬಹುದು. ಹೀಗಾಗಿ ಇನ್ನು 7 ದಿನಗಳವರೆಗೆ ಸೂಕ್ಷ್ಮವಾಗಿ ಅವರನ್ನು ಗಮನಿಸಬೇಕು. ವೈರಾಣು ಹೇಗೆ ವರ್ತಿಸುತ್ತದೆ, ವಿಕಸನಗೊಳ್ಳುತ್ತದೆ ಅನ್ನೋದನ್ನು ನೋಡಬೇಕು. ಮುಂದಿನ 3 ದಿನಗಳಲ್ಲಿ ವೈರಾಣು ವಿಕಸನದ ಪಥವನ್ನ ನೋಡಲು ಸಾಧ್ಯ. ಸಣ್ಣ ಪ್ರಮಾಣದ ರೋಗ ಲಕ್ಷಣಗಳೇ ಅವರಲ್ಲಿ ಮುಂದುವರಿಯಬಹುದು’ ಅಂತ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಕೊರೋನಾ ಕಾಟ.. ಒಂದೇ ದಿನ 28,000+ ಜನರಿಗೆ ಸೋಂಕು

ಅಂದ್ಹಾಗೆ 77 ವರ್ಷದ ಅಮಿತಾಬ್ ಬಚ್ಚನ್​ಗೆ ಯಕೃತ್ (ಲಿವರ್) ಸಮಸ್ಯೆ ಕೂಡ  ಇದೆ. ತಮ್ಮ ಲಿವರ್ ಕೇವಲ ಶೇ. 25ರಷ್ಟು ಮಾತ್ರ ಕೆಲಸ ಮಾಡುತ್ತಿದೆ ಎಂಬುದನ್ನ ಈ ಹಿಂದೆಯೇ ಬಿಗ್​ ಬಿ ಬಿಚ್ಚಿಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದರು.

ಲಾಕ್​ಡೌನ್ ಸಂದರ್ಭದಲ್ಲೂ ಅಮಿತಾಬ್​ ಬಚ್ಚನ್ ಶೂಟಿಂಗ್​, ಅದು ಇದು ಅಂತ ಬ್ಯುಸಿಯಾಗಿದ್ದರು. ‘ಕೌನ್​ ಬನೇಗಾ ಕರೋಡ್​ಪತಿ’ ಮುಂದಿನ ಸೀಸನ್ ಶೂಟಿಂಗ್ ಕುರಿತು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ಆದ್ರೆ ಶೂಟಿಂಗ್ ಸೆಟ್​ನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply